
ಬೆಂಗಳೂರು: ಬೆಳಗಾವಿ ವಿಚಾರವಾಗಿ ಮುನಿಸಿಕೊಂಡಿರುವ ಜಾರಕಿಹೊಳಿ ಸಹೋದರರು ಪಕ್ಷ ಬಿಟ್ಟು ಹೋಗದಂತೆ ಮಾಡಲು ತಮ್ಮದೇ ಆದ ನಾಲ್ಕು ಷರತ್ತುಗಳನ್ನು ಸಮ್ಮಿಶ್ರ ಸರ್ಕಾರದ ಮುಂದೆ ಇಟ್ಟಿದ್ದಾರಂತೆ.
ಹೌದು, ಬೆಳಗಾವಿಯ ಪಿಎಲ್‍ಡಿ ಬ್ಯಾಂಕ್ ಚುನಾವಣೆ ನಡೆಯಿಂದ ಮುನಿಸಿಕೊಂಡಿರುವ ಸತೀಶ್ ಜಾರಕಿಹೊಳಿ ಹಾಗೂ ರಮೇಶ್ ಜಾರಕಿಹೊಳಿ ಸಹೋದರರು ಕಾಂಗ್ರೆಸ್ ಬಿಡುವ ಯೋಚನೆಗೆ ಕೈ ಹಾಕಿರುವುದಾಗಿ ಮಾಹಿತಿ ಲಭಿಸಿದೆ. ಒಂದು ವೇಳೆ ಸಹೋದರರು ಪಕ್ಷದಲ್ಲಿಯೇ ಉಳಿಯಬೇಕಾದರೆ ಅವರ 4 ಷರತ್ತುಗಳನ್ನು ಪೂರೈಸುವಂತೆ ಕೆಪಿಸಿಸಿ ಹಾಗೂ ಸಿಎಂ ಕುಮಾರಸ್ವಾಮಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ ಎಂದು ಹೇಳಲಾಗಿದೆ.
ಅಲ್ಲದೇ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಡಿಸಿಎಂ ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‍ರೊಂದಿಗೆ ದೂರವಾಣಿಯಲ್ಲಿ ಸಂಪರ್ಕಿಸಿದಾಗಲೂ ಸಹೋದರರು ಈ ನಾಲ್ಕು ಷರತ್ತುಗಳನ್ನು ಮುಂದಿಟ್ಟಿರುವುದಾಗಿ ತಿಳಿದುಬಂದಿದೆ.
ಷರತ್ತುಗಳು ಏನು?
1. ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಇತರೆ ಯಾರೇ ಆದರೂ ಬೆಳಗಾವಿ ಜಿಲ್ಲೆಯ ಆಂತರಿಕ ರಾಜಕೀಯ ವಿಷಯಕ್ಕೆ ತಲೆ ಹಾಕದಂತೆ ನೋಡಿಕೊಳ್ಳಬೇಕು.
2. ಬೆಳಗಾವಿ ಜಿಲ್ಲೆಯಲ್ಲಿ ನಮ್ಮ ನಿರ್ಣಯವೇ ಅಂತಿಮ. ಪಕ್ಷ ಹಾಗೂ ಸರ್ಕಾರ ಎರಡರ ಹಿತ ಕಾಯುವುದು ನಮ್ಮ ಜವಾಬ್ದಾರಿ. ಆದರೆ ಅದಕ್ಕೆ ಧಕ್ಕೆ ಬರಬಾರದು ಅಂದರೆ ನಾವು ಹೇಳಿದ ಮಾತಿಗೆ ಆದ್ಯತೆ ನೀಡಬೇಕು.
3. ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ವಾಲ್ಮೀಕಿ ನಾಯಕ ಜನಾಂಗಕ್ಕೆ ಸೇರಿದ ಶಾಸಕರೊಬ್ಬರಿಗೆ ಸಚಿವ ಸ್ಥಾನ ಕಲ್ಪಿಸಿಕೊಡಬೇಕು.
4. ನಮ್ಮ ಬೆಂಬಲಿತ ಮೂರರಿಂದ ನಾಲ್ಕು ಜನ ಶಾಸಕರಿಗೆ ಒಳ್ಳೆಯ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕು.
ಈ ಮೇಲ್ಕಂಡ ಒಟ್ಟು 4 ಷರತ್ತುಗಳನ್ನು ಜಾರಕಿಹೊಳಿ ಸಹೋದರರು ಪ್ರಮುಖವಾಗಿ ಎಐಸಿಸಿ ಹಾಗೂ ಕೆಪಿಸಿಸಿ ನಾಯಕರ ಮುಂದಿಟ್ಟಿದ್ದಾರೆ. ಹೀಗಾಗಿ ರಾಜ್ಯ ಕಾಂಗ್ರೆಸ್ ನಾಯಕರು ಮೊದಲೆರಡು ಷರತ್ತುಗಳಿಗೆ ಅಸ್ತು ಎಂದು, ಬೆಳಗಾವಿ ವಿಷಯದಲ್ಲಿ ಯಾರು ಕೂಡ ಹಸ್ತಕ್ಷೇಪ ಮಾಡಲ್ಲ. ಬೆಳಗಾವಿಯಲ್ಲಿನ ಪಕ್ಷ ಹಾಗೂ ಸರ್ಕಾರದ ಜವಾಬ್ದಾರಿ ನಿಮ್ಮದೆ ಎಂದಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.
ಸಂಪುಟ ವಿಸ್ತರಣೆಯಲ್ಲಿ ಸಾಮಾಜಿಕ ನ್ಯಾಯ ಎತ್ತಿ ಹಿಡಿಯಬೇಕಿದೆ. ಹೀಗಾಗಿ ಜಾತಿವಾರು ಹಾಗೂ ಪ್ರದೇಶವಾರು ಲೆಕ್ಕಾಚಾರದಲ್ಲಿ ವಾಲ್ಮೀಕಿ ನಾಯಕ ಜನಾಂಗಕ್ಕೆ ಅನ್ಯಾಯವಾಗಿದ್ದರೆ, ಅದನ್ನು ಪರಿಶೀಲಿಸಿ ನ್ಯಾಯ ಒದಗಿಸಲಾಗುವುದು. ಇನ್ನು ನಿಗಮ ಮಂಡಳಿ ವಿಚಾರದಲ್ಲಿ ಅರ್ಹರಿಗೆ 2-3 ಬಾರಿ ಗೆದ್ದವರಿಗೆ ಆದ್ಯತೆ ನೀಡಬೇಕಿದೆ. ಅದರಲ್ಲಿ ನಿಮ್ಮ ಬೆಂಬಲಿಗರು ಇದ್ದರೆ ಕಂಡಿತ ಅವಕಾಶ ಸಿಗಲಿದೆ ಎಂದು ತಿಳಿಸಿದ್ದಾರಂತೆ.
ಎಐಸಿಸಿ ಹಾಗೂ ಕೆಪಿಸಿಸಿ ಪ್ರಮುಖ ನಾಯಕರು ಜಾರಕಿಹೊಳಿ ಸಹೋದರರು ಮುಂದಿಟ್ಟಿದ್ದ ನಾಲ್ಕು ಷರತ್ತುಗಳ ಪೈಕಿ ಎರಡಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಇನ್ನುಳಿದ ಷರತ್ತುಗಳಿಗೆ ಸ್ವಲ್ಪ ಸಮಯ ಕಾಯುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.