ನಗರದಲ್ಲಿ ರಕ್ಕಸ ಬೀದಿ ನಾಯಿಗಳ ಹಾವಳಿ ಮುಂದುವರಿದಿದ್ದು, ಮೂರು ಮಕ್ಕಳ ಮೇಲೆ ಮಾರಣಾಂತಿಕ ದಾಳಿ

ಬೆಂಗಳೂರು, ಸೆ.12- ನಗರದಲ್ಲಿ ರಕ್ಕಸ ಬೀದಿ ನಾಯಿಗಳ ಹಾವಳಿ ಮುಂದುವರಿದಿದ್ದು, ಮೂರು ಮಕ್ಕಳ ಮೇಲೆ ಮಾರಣಾಂತಿಕ ದಾಳಿ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪದ್ಮನಾಭನಗರದ ಕನಕ ಬಡಾವಣೆ ನಿವಾಸಿ 3ನೆ ತರಗತಿ ವಿದ್ಯಾರ್ಥಿ 9 ವರ್ಷದ ತನ್ಮಯ್‍ಗೌಡ ಹಾಗೂ ಕೂಲಿ ಕಾರ್ಮಿಕ ಕುಟುಂಬದ ಇಬ್ಬರು ಹೆಣ್ಣು ಮಕ್ಕಳ ಮೇಲೆ ನಾಯಿಗಳ ಹಿಂಡು ದಾಳಿ ನಡೆಸಿದೆ.

ಭಾರತ್ ಬಂದ್ ಸಂದರ್ಭದಲ್ಲಿ ಆಟವಾಡಿಕೊಂಡು ಮನೆಗೆ ಬರುತ್ತಿದ್ದ ತನ್ಮಯ್‍ಗೌಡನ ಮೇಲೆ ಏಕಾಏಕಿ ದಾಳಿ ನಡೆಸಿದ ನಾಯಿಗಳ ಹಿಂಡು ಮನಸೋ ಇಚ್ಛೆ ಕಚ್ಚಿ ಬಾಲಕನನ್ನು ಎಳೆದೊಯ್ಯಲು ಯತ್ನಿಸಿವೆ.

ಕೂಡಲೇ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ನಾಯಿಗಳ ಹಿಂಡನ್ನು ಓಡಿಸಿದ್ದರಿಂದ ಮಗು ಪ್ರಾಣಾಪಾಯದಿಂದ ಪಾರಾಗಿದೆ.
ಇದೇ ಬೀದಿಯಲ್ಲಿ ಕೂಲಿ ಕಾರ್ಮಿಕ ಕುಟುಂಬದ ಇಬ್ಬರು ಹೆಣ್ಣು ಮಕ್ಕಳ ಮೇಲೂ ನಾಯಿಗಳ ಹಿಂಡು ದಾಳಿ ನಡೆಸಿ ಗಾಯಗೊಳಿಸಿವೆ ಎಂದು ತನ್ಮಯ್‍ಗೌಡನ ತಾಯಿ ಮೀನಾ ಈ ಸಂಜೆಗೆ ತಿಳಿಸಿದ್ದಾರೆ.

ಬೀದಿ ನಾಯಿಗಳ ಕಾಟ ತಪ್ಪಿಸಿ: ನಮ್ಮ ಏರಿಯಾದಲ್ಲೇ ಗಣೇಶ ಮಂದಿರ ವಾರ್ಡ್‍ನ ಬಿಬಿಎಂಪಿ ಸದಸ್ಯೆ ಲಕ್ಷ್ಮಿ ಉಮೇಶ್ ಅವರ ನಿವಾಸವಿದೆ. ಆದರೂ ಈ ಪ್ರದೇಶದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ರಾತ್ರಿ ವೇಳೆ ಬೀದಿ ನಾಯಿಗಳ ಬೊಗಳುವಿಕೆಯಿಂದ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಮೀನಾ.

ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಬಿಬಿಎಂಪಿಯವರಿಗೆ ದೂರು ನೀಡಿದ್ದೆವು. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ನಾಯಿಗಳನ್ನು ಹಿಡಿದು ಕೊಂಡೊಯ್ದಿದ್ದರು. ಆದರೆ, ಮತ್ತೆ ಅದೇ ನಾಯಿಗಳನ್ನು ಇಲ್ಲಿಗೆ ತಂದು ಬಿಟ್ಟಿದ್ದಾರೆ.
ನಾಯಿಗಳನ್ನು ಹಿಡಿದು ಕರೆದೊಯ್ಯುವ ಅಧಿಕಾರಿಗಳು ಅವುಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಬೇಕು. ಆದರೆ, ಇದುವರೆಗೂ ಯಾವ ನಾಯಿಗೂ ಶಸ್ತ್ರ ಚಿಕಿತ್ಸೆ ಮಾಡಿಸಿಲ್ಲ. ಹೀಗಾಗಿ ಬೀದಿ ನಾಯಿಗಳು ಹತ್ತಾರು ಮರಿಗಳಿಗೆ ಜನ್ಮ ನೀಡಿವೆ. ಇದರಿಂದ ನಮ್ಮ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಉಲ್ಬಣಗೊಂಡಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಬೀದಿ ನಾಯಿಗಳ ಕಾಟ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮೀನಾ ಅವರು ಆಗ್ರಹಿಸಿದ್ದಾರೆ.

ಕೈ ಕಟ್ಟಿ ಹಾಕಿದ ಕಾನೂನು: ಉಪಟಳ ನೀಡುವ ನಾಯಿಗಳನ್ನು ಹಿಡಿದು ಅವುಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸುವ ಹಾಗೂ ರೇಬಿಸ್ ಚುಚ್ಚುಮದ್ದು ನೀಡುವ ಅಧಿಕಾರ ಮಾತ್ರ ಬಿಬಿಎಂಪಿಗಿದೆ. ಆದರೆ, ರೋಗಕ್ಕೆ ತುತ್ತಾಗುವ ನಾಯಿಗಳನ್ನು ನಾಶ ಮಾಡುವುದಾಗಲಿ ಅಥವಾ ಬೇರೆ ನಿರ್ಜನ ಪ್ರದೇಶಕ್ಕೆ ಬಿಡಲು ಕಾನೂನಿನಲ್ಲಿ ಅವಕಾಶವಿಲ್ಲದಿರುವುದು ವಿಪರ್ಯಾಸವೇ ಸರಿ.

ಸರ್ವೋಚ್ಛ ನ್ಯಾಯಾಲಯ ಯಾವುದೇ ಕಾರಣಕ್ಕೂ ಬೀದಿ ನಾಯಿಗಳನ್ನು ನಾಶ ಮಾಡಬಾರದು ಎಂದು ಕಟ್ಟುನಿಟ್ಟಿನ ಆದೇಶ ನೀಡಿರುವುದರಿಂದ ಬಿಬಿಎಂಪಿ ಅಧಿಕಾರಿಗಳು ಬೀದಿ ನಾಯಿಗಳ ಹಾವಳಿ ತಪ್ಪಿಸಲು ಸಾಧ್ಯವಿಲ್ಲದೆ ಕೈಚೆಲ್ಲಿ ಕೂರುವಂತಾಗಿದೆ.
ಸರ್ಕಾರೇತರ ಸಂಸ್ಥೆಗಳೇ ಹೊಣೆ: ನಗರದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳಿಗೆ ನಿಯಂತ್ರಣ ಹಾಕುವ ಗುತ್ತಿಗೆ ಪಡೆದಿರುವ ಸರ್ಕಾರೇತರ ಸಂಸ್ಥೆಗಳು ತಮ್ಮ ಕಾಯಕ ಮರೆತು ಕುಳಿತಿರುವುದೇ ನಾಯಿಗಳ ಹಾವಳಿ ಹೆಚ್ಚಾಗಲು ಕಾರಣ.

ಬೀದಿ ನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸುವ ಹೊಣೆ ಸರ್ಕಾರೇತರ ಸಂಸ್ಥೆಗಳಿಗಿದೆ. ಆದರೆ, ಅಂತಹ ಸಂಸ್ಥೆಗಳು ನೆಪಮಾತ್ರಕ್ಕೆ ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ನಡೆಸಿದ್ದೇವೆ ಎಂದು ಲೆಕ್ಕ ಹೇಳಿ ಕೋಟ್ಯಂತರ ಹಣ ಗುಳುಂ ಮಾಡುತ್ತಿವೆ.
ಸರ್ಕಾರೇತರ ಸಂಸ್ಥೆಗಳ ಈ ನಿರ್ಲಕ್ಷ್ಯ ಧೋರಣೆಯೇ ಗಲ್ಲಿ ಗಲ್ಲಿಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಲು ಕಾರಣ. ಕೂಡಲೇ ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳು ನಾಯಿಗಳ ಸಂತಾನಹರಣ ಚಿಕಿತ್ಸೆಯಲ್ಲಿ ಗೋಲ್‍ಮಾಲ್ ಮಾಡುತ್ತಿರುವ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ