ಬೆಂಗಳೂರು, ಸೆ.12-ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಕಾಂಗ್ರೆಸ್ನ ಅತೃಪ್ತರು ಹಾಗೂ ಬಿಜೆಪಿ ಪಾಳಯ ಹರಸಾಹಸ ಪಡುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಸದ್ದಿಲ್ಲದೆ ಆಪರೇಷನ್ ಹಸ್ತಕ್ಕೆ ಚಾಲನೆ ನೀಡಿದ್ದು, ಬಿಜೆಪಿಯಲ್ಲಿನ ಅತೃಪ್ತರನ್ನು ಸೆಳೆಯಲು ಕಾರ್ಯಾಚರಣೆ ಆರಂಭಿಸಿದೆ.
ಕಾಂಗ್ರೆಸ್ನಲ್ಲಿ ಅತೃಪ್ತರಿರುವಂತೆಯೇ ಬಿಜೆಪಿಯಲ್ಲೂ ಬಹಳಷ್ಟು ಮಂದಿ ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಹಾಗಾಗಿ ಅಂತಹವರನ್ನು ಸೆಳೆಯಲು ಕಾಂಗ್ರೆಸ್ ತಂತ್ರಗಾರಿಕೆ ಹೆಣೆಯುತ್ತಿದೆ. ಬಿಜೆಪಿ ಆಪರೇಷನ್ ಕಮಲಕ್ಕೆ ಕೈ ಹಾಕುವಾಗ ಕೋಟ್ಯಂತರ ರೂ. ಹಣ ನೀಡುವ, ಸಚಿವ ಸ್ಥಾನ ಹಾಗೂ ವಿವಿಧ ಅಧಿಕಾರಗಳನ್ನು ನೀಡುವ ಆಮಿಷ ತೋರಿಸುತ್ತಿದೆ ಎನ್ನಲಾಗುತ್ತಿದೆ.
ಲೋಕಸಭೆ ಚುನಾವಣೆ ಇನ್ನು ಸುಮಾರು ಏಳು ತಿಂಗಳಿದ್ದು, ರಾಷ್ಟ್ರ ರಾಜಕಾರಣ ಮುಂದೆ ಯಾವ ತಿರುವು ಪಡೆಯಲಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಒಂದು ವೇಳೆ ಈಗ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದೇ ಆದರೆ ಅಲ್ಲಿರುವ ಗೊಂದಲಗಳಿಗೆ ಇನ್ನಷ್ಟು ತುಪ್ಪ ಸುರಿದಂತಾಗುತ್ತದೆ. ಕಳೆದ ಬಾರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಅಧ್ವಾನಗಳನ್ನು ಕಣ್ಣಾರೆ ನೋಡಿದ್ದೇವೆ. ಕಾಂಗ್ರೆಸ್-ಜೆಡಿಎಸ್ನಲ್ಲಾದರೂ ಆಂತರಿಕ ಸ್ವಾತಂತ್ರ್ಯ ಇದೆ. ಸಮಸ್ಯೆಗಳಿಗೆ ಚರ್ಚೆ ಮೂಲಕ ಪರಿಹಾರ ಕಂಡುಕೊಳ್ಳಲು ಅವಕಾಶವಿದೆ.
ಬಿಜೆಪಿಯದ್ದು ಗರ್ಭಗುಡಿ ಸಂಸ್ಕøತಿ. ಅತ್ಯಂತ ಜಟಿಲವಾಗಿದ್ದು, ಸಂಘ ಪರಿವಾರದ ಹಿನ್ನೆಲೆ ಇಲ್ಲದವರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ನೋಡಲಾಗುತ್ತದೆ. ಮುಂದಿನ ರಾಜಕೀಯ ಭವಿಷ್ಯ ಬೇಡ, ಕೇವಲ ಹಣ ಸಾಕು ಎನ್ನುವವರು ಮಾತ್ರ ಬಿಜೆಪಿ ಸೇರಲು ಸಾಧ್ಯ. ಹಾಗಾಗಿ ನಾವು ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಬಹಳಷ್ಟು ಮಂದಿ ಕಾಂಗ್ರೆಸ್ ಶಾಸಕರು ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ.
ಬಿಜೆಪಿಯತ್ತ ತೆರಳಲು ಕಾಂಗ್ರೆಸ್ ಶಾಸಕರು ಯೋಚಿಸುವಂತಾಗಿದೆ. ಜತೆಗೆ ಬಿಜೆಪಿಯವರಿಂದಲೂ ಕಾಂಗ್ರೆಸ್ಗೆ ಬೆಂಬಲ ವ್ಯಕ್ತವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅತ್ತ ಬಿಜೆಪಿಯಲ್ಲೂ ಇದೇ ರೀತಿ ಪರಿಸ್ಥಿತಿ ಇದ್ದು, ಒಂದು ವೇಳೆ ಆಪರೇಷನ್ ಕಮಲ ಮಾಡಿ, ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆಯಾದರೂ ನಮಗೆ ಯಾವ ಲಾಭಗಳು ಆಗುವುದಿಲ್ಲ. ಹೊಸದಾಗಿ ಪಕ್ಷಕ್ಕೆ ಬಂದವರಿಗೆ ಸರ್ಕಾರ ಉಳಿಸಿಕೊಳ್ಳುವ ಸಲುವಾಗಿ ಹೆಚ್ಚಿನ ಮಣೆ ಹಾಕುತ್ತಾರೆ. ಪಕ್ಷದ ಮೂಲ ನಿವಾಸಿಗಳಾದರೂ ನಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ. ಹಾಗಾಗಿ ಒಂದು ವೇಳೆ ಆಪರೇಷನ್ ಕಮಲ ನಡೆದರೆ ಸಮ್ಮಿಶ್ರ ಸರ್ಕಾರಕ್ಕೆ ಪರೋಕ್ಷ ಬೆಂಬಲ ನೀಡಲು ಸಿದ್ಧರಿದ್ದೇವೆ ಎಂದು ಬಿಜೆಪಿಯ ಕೆಲ ಶಾಸಕರು ಕಾಂಗ್ರೆಸ್-ಜೆಡಿಎಸ್ನ ಪ್ರಮುಖರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಚುನಾವಣೆ ನಡೆದು ಕೇವಲ ಐದು ತಿಂಗಳಷ್ಟೇ ಆಗಿದ್ದು, ಒಂದು ವೇಳೆ ಸರ್ಕಾರ ಅತಂತ್ರವಾಗಿ ಅರಾಜಕತೆ ಉಂಟಾದರೆ ರಾಜ್ಯಪಾಲರ ಆಡಳಿತ ಬರಬಹುದು ಅಥವಾ ಮತ್ತೊಮ್ಮೆ ಚುನಾವಣೆ ಎದುರಾಗಬಹುದು. ಕಳೆದ ಮೇನಲ್ಲಿ ನಡೆದ ಚುನಾವಣೆಯಲ್ಲೇ ಸಾಕಷ್ಟು ಕಷ್ಟಪಟ್ಟು ಗೆದ್ದಿದ್ದೇವೆ. ಮತ್ತೊಮ್ಮೆ ಚುನಾವಣೆ ಎದುರಾದರೆ ಇನ್ನಷ್ಟು ಬಂಡವಾಳ ಹಾಕಿ ಗೆದ್ದು ಬರುವುದು ಕಷ್ಟದ ಕೆಲಸ. ಒಂದು ವೇಳೆ ರಾಜ್ಯಪಾಲರ ಆಡಳಿತ ಹೇರಿಕೆಯಾದರೂ ನಮ್ಮ ಅಧಿಕಾರಗಳು ಮೊಟಕಾಗುತ್ತವೆ. ಹೀಗಾಗಿ ಕನಿಷ್ಠ 2 ವರ್ಷವಾದರೂ ಸಮ್ಮಿಶ್ರ ಸರ್ಕಾರ ನಡೆಯಲಿ ಎಂಬ ಸಾಮಾನ್ಯ ಅಭಿಪ್ರಾಯ ಎಲ್ಲ ಶಾಸಕರಲ್ಲೂ ಇದೆ.
ಈ ನಡುವೆ ಮುಖ್ಯಮಂತ್ರಿಯಾಗಲೇ ಬೇಕು ಎಂಬ ಉಮೇದಿಗೆ ಬಿದ್ದಿರುವ ಬಿಜೆಪಿ ಮುಖಂಡರು ಪ್ರತಿನಿತ್ಯ ಹೊಸ ಹೊಸ ಸಾಹಸಗಳಿಗೆ ಕೈ ಹಾಕುತ್ತಿದ್ದಾರೆ.
ಇತ್ತ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿದ್ದ ಸತೀಶ್ ಜಾರಕಿ ಹೊಳಿ ಅವರು ಕಾಂಗ್ರೆಸ್ ಪಕ್ಷವನ್ನು ಬ್ಲಾಕ್ಮೇಲ್ ಮಾಡಲು ಮುಂದಾಗಿದ್ದು, ಪಿಎಲ್ಡಿ ಬ್ಯಾಂಕ್ ಚುನಾವಣೆ ಮುಂದಿಟ್ಟುಕೊಂಡು ಭಿನ್ನಮತದ ಶಂಖ ಊದಿದ್ದಾರೆ.
ಆರಂಭದಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಒಂದಷ್ಟು ಗುಂಪುಗಾರಿಕೆ ಮಾಡಿದರು. ಹೈಕಮಾಂಡ್ ಮಧ್ಯಪ್ರವೇಶಿಸಿ ಅವರನ್ನು ಸಮಾಧಾನ ಪಡಿಸಿ ಸಚಿವ ಸ್ಥಾನ ನೀಡುವ ಭರವಸೆ ನೀಡಿತ್ತು. ಆನಂತರ ಎಂ.ಬಿ.ಪಾಟೀಲ್ ಎಲ್ಲ ಚಟುವಟಿಕೆಗಳನ್ನು ನಿಲ್ಲಿಸಿದ್ದಾರೆ. ಈಗ ಭಿನ್ನಮತೀಯರಿಗೆ ಸರಿಯಾದ ಮುಖಂಡ ಇಲ್ಲದಂತಾಗಿದ್ದು, ಸತೀಶ್ ಜಾರಕಿ ಹೊಳಿ, ರಮೇಶ್ ಜಾರಕಿ ಹೊಳಿ ಅವರು ಅತೃಪ್ತರಿಗೆ ಆಶಾಕಿರಣವಾಗಿ ಕಂಡಿದ್ದಾರೆ. ಹಾಗಾಗಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಭಿನ್ನಮತೀಯರು ದಿನನಿತ್ಯ ಒಂದಲ್ಲ ಒಂದು ಚಟುವಟಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಎಲ್ಲಾ ರಾಜಕೀಯ ಲೆಕ್ಕಾಚಾರಗಳನ್ನು ಅಳೆದು ತೂಗಿರುವ ಜೆಡಿಎಸ್-ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಕೌಂಟರ್ ಅಟ್ಯಾಕ್ ಆರಂಭಿಸಿದ್ದಾರೆ. ಬಿಜೆಪಿಯಲ್ಲಿರುವ ಅತೃಪ್ತರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಕೆಲವು ಶಾಸಕರು ಕಾಂಗ್ರೆಸ್ಗೆ ಬೆಂಬಲ ನೀಡುವ ಭರವಸೆ ನೀಡಿದ್ದು, ಇದರಿಂದ ರಾಜ್ಯದ ರಾಜಕಾರಣ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.