ಬೆಂಗಳೂರು, ಸೆ.12- ಮನೆಯ ಯಜಮಾನನೇ ನನ್ನ ಕೈಯಲ್ಲಿ ಸಂಸಾರ ನಡೆಸೋಕೆ ಸಾಧ್ಯವಿಲ್ಲ ಎಂದರೆ ಆ ಕುಟುಂಬದ ಗತಿ ಏನಾಗಬಹುದು? ಕಮಿಷನರ್ ಮಂಜುನಾಥ್ ಪ್ರಸಾದ್ ಅವರು ಬಿಬಿಎಂಪಿಯಲ್ಲಿ ಆರ್ಥಿಕ ಶಿಸ್ತು ಇಲ್ಲ ಎಂದು ನಗರಾಭಿವೃದ್ಧಿ ಇಲಾಖೆಗೆ ಬರೆದಿರುವ ಪತ್ರ ಬಿಬಿಎಂಪಿಯಲ್ಲಿ ಸಂಚಲನ ಸೃಷ್ಟಿಸಿದೆ.
ಆಯುಕ್ತರ ಈ ಪತ್ರ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಹಗ್ಗ-ಜಗ್ಗಾಟಕ್ಕೆ ಕಾರಣವಾಗಿದ್ದರೆ, ಮಾಹಿತಿ ಹಕ್ಕು ಅಧ್ಯಯನ ಕೇಂದ್ರ ಪಾಲಿಕೆಯಲ್ಲಿ ಆರ್ಥಿಕ ಶಿಸ್ತು ಇಲ್ಲ ಎಂದು ಸ್ವತಃ ಪಾಲಿಕೆ ಮುಖ್ಯಸ್ಥರೇ ಪತ್ರ ಬರೆದಿರುವುದರಿಂದ ಈ ಕೂಡಲೇ ಬಿಬಿಎಂಪಿಯನ್ನು ಸೂಪರ್ ಸೀಡ್ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ.
ಸೆ.7ರಂದು ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿರುವ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಿಗಳ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಅನ್ವಯ ಬಿಬಿಎಂಪಿಯಲ್ಲಿ ಆರ್ಥಿಕ ಶಿಸ್ತು ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದರು.
ಏಳು ನಗರಸಭೆ, ಒಂದು ಪುರಸಭೆ ಹಾಗೂ 110 ಹಳ್ಳಿಗಳನ್ನು ವಿಲೀನಗೊಳಿಸಿ ನಿರ್ಮಿಸಲಾಗಿರುವ ಬಿಬಿಎಂಪಿ 800 ಚದರ ಕಿಲೋ ಮೀಟರ್ ವಿಸ್ತೀರ್ಣ ಹೊಂದಿದ್ದು, 28 ವಿಧಾನಸಭಾ ಕ್ಷೇತ್ರಗಳು ಇದರ ವ್ಯಾಪ್ತಿಗೆ ಒಳಪಡುತ್ತದೆ.
ಇಂತಹ ಬೃಹತ್ ಮಹಾನಗರ ಪಾಲಿಕೆಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾವಿರಾರು ಕೋಟಿ ರೂ.ಗಳ ಅವಶ್ಯಕತೆ ಇದೆ. ಆದರೆ, ನಿರೀಕ್ಷಿತ ಆದಾಯ ಬರದಿದ್ದರೂ ಆಯವ್ಯಯದಲ್ಲಿ ಸಾವಿರಾರು ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಲಾಗುತ್ತಿದೆ. ಇದರಿಂದ ಪಾಲಿಕೆಯಲ್ಲಿ ಆರ್ಥಿಕ ಅಶಿಸ್ತು ಎದುರಾಗಿದ್ದು, ಶಿಸ್ತು ಜಾರಿಗೆ ತರುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದರು.
ಪಾಲಿಕೆ ಮುಖ್ಯಸ್ಥರಾಗಿರುವ ಆಯುಕ್ತರೇ ಬಿಬಿಎಂಪಿಯಲ್ಲಿ ಅಶಿಸ್ತು ಇದೆ ಎಂದು ಒಪ್ಪಿ ಬರೆದಿರುವ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಮುಖ್ಯಸ್ಥ ಅಮರೇಶ್ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ಆರ್ಥಿಕ ಅಶಿಸ್ತು ಎದುರಿಸುತ್ತಿರುವ ಬಿಬಿಎಂಪಿಯನ್ನು ಈ ಕೂಡಲೇ ವಜಾಗೊಳಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಮನೆಗೆ ಹೋಗಲಿ: ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಪಾಲಿಕೆಯಲ್ಲಿ ಆರ್ಥಿಕ ಶಿಸ್ತು ಇಲ್ಲ ಎಂದು ಪತ್ರ ಬರೆದಿರುವುದು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಆಡಳಿತದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಆರೋಪಿಸಿದ್ದಾರೆ.
ಆಯುಕ್ತರು ಬರೆದಿರುವ ಪತ್ರದ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಮತ್ತು ಜೆಡಿಎಸ್ ಆಡಳಿತ ಅಧಿಕಾರ ಬಿಟ್ಟು ಈ ಕೂಡಲೇ ಮನೆಗೆ ಹೋಗುವುದು ಸೂಕ್ತ ಎಂದು ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಆಡಳಿತ ನಡೆಸಲು ಅವಶ್ಯ ಸಂಖ್ಯಾಬಲ ಇಲ್ಲದಿದ್ದರೂ ಪಕ್ಷೇತರರು, ಜೆಡಿಎಸ್ ಸದಸ್ಯರ ನೆರವಿನಿಂದ ಅಧಿಕಾರದ ಗದ್ದುಗೆ ಹಿಡಿದು ಪಾಲಿಕೆಯಲ್ಲಿ ದರ್ಬಾರ್ ನಡೆಸುತ್ತಿರುವುದರಿಂದ ಖಜಾನೆ ಖಾಲಿಯಾಗಿದೆ.
ಆಡಳಿತ ಪಕ್ಷದ ಸದಸ್ಯರ ಈ ಧೋರಣೆಯೇ ಆಯುಕ್ತರು ನಗರಾಭಿವೃದ್ಧಿ ಇಲಾಖೆಗೆ ಆರ್ಥಿಕ ಶಿಸ್ತಿಲ್ಲ ಎಂದು ಪತ್ರ ಬರೆಯುವುದಕ್ಕೆ ಕಾರಣ ಎಂದು ಅವರು ಆರೋಪಿಸಿದ್ದಾರೆ.
ಹಗಲುಗನಸು: ಬಜೆಟ್ನಲ್ಲಿ ಘೋಷಿಸಿರುವ ಕಾಮಗಾರಿಗಳ ಸಮರ್ಪಕ ಅನುಷ್ಠಾನದ ಉದ್ದೇಶದಿಂದ ಮಂಜುನಾಥ್ ಪ್ರಸಾದ್ ಅವರು ಪತ್ರ ಬರೆದಿದ್ದಾರೆ. ಆದರೆ, ಪಾಲಿಕೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಬೇಕು ಎಂಬ ಕನಸು ಕಾಣುತ್ತಿರುವ ಬಿಜೆಪಿಯವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅಧಿಕಾರ ಹಿಡಿಯಬೇಕೆಂಬ ಅವರ ಕನಸು ಕೇವಲ ಹಗಲುಗನಸಾಗಲಿದೆ ಎಂದು ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಪಾಲಿಕೆಯಲ್ಲಿ ಅಧಿಕಾರ ಹಿಡಿದ ಕೇವಲ ಮೂರು ವರ್ಷದಲ್ಲೇ ನಾವು ಹಲವಾರು ಸಾಧನೆ ಮಾಡಿದ್ದೇವೆ. ಹಿಂದಿನ ಅವಧಿಯಲ್ಲಿ ಬಿಜೆಪಿಯವರು ಮಾಡಿದ್ದ ಸಾಲವನ್ನು ನಾವು ತೀರಿಸಿದ್ದೇವೆ. ಈಗಾಗಲೇ 1500 ಕೋಟಿ ಸಾಲ ತೀರಿಸಿದ್ದೇವೆ. ಇನ್ನು ಉಳಿದಿರುವುದು ಕೇವಲ 700 ಕೋಟಿ ರೂ. ಮಾತ್ರ. ನಮ್ಮ ಆಡಳಿತ ಜಾರಿಗೆ ಬಂದ ನಂತರ ನಯಾಪೈಸೆ ಸಾಲ ಮಾಡಿಲ್ಲ. ನಮ್ಮ ಈ ಸಾಧನೆಗೆ ಎ ಗ್ರೇಡ್ ಸರ್ಟಿಫಿಕೆಟ್ ಲಭಿಸಿದೆ.
ನಮ್ಮ ಈ ಸಾಧನೆಯನ್ನು ಸಹಿಸಲು ಸಾಧ್ಯವಿಲ್ಲದ ಬಿಜೆಪಿಯವರು ತಮ್ಮ ಬೇಳೆ ಬೇಯಿಸಿಕೊಳ್ಳುವ ಉದ್ದೇಶದಿಂದ ಆಯುಕ್ತರು ಬರೆದಿರುವ ಪತ್ರವನ್ನೇ ಮುಂದಿಟ್ಟುಕೊಂಡು ಅಧಿಕಾರ ಹಿಡಿಯುವ ಭ್ರಮೆಯಲ್ಲಿದ್ದಾರೆ. ಅವರ ಕನಸು ನನಸಾಗುವುದಿಲ್ಲ. ಮುಂದಿನ ಎರಡು ವರ್ಷದ ಅವಧಿಯನ್ನುಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟವೇ ಪೂರೈಸಲಿದೆ ಎಂದು ಶಿವರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.