ಬೆಂಗಳೂರು, ಸೆ.12- ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಪ್ರದೇಶದಲ್ಲಿ ಅಧ್ಯಯನ ನಡೆಸಲು ಆಗಮಿಸಿರುವ ಕೇಂದ್ರದ ಎರಡು ಪ್ರತ್ಯೇಕ ತಂಡಗಳು ಇಂದು ಮಡಿಕೇರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಶೀಲನೆ ನಡೆಸಿದವು.
ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಅನಿಲ್ ಮಲ್ಲಿಕ್ ನೇತೃತ್ವದಲ್ಲಿ ಕೇಂದ್ರ ಜಲ ಆಯೋಗದ ಅಧೀಕ್ಷಕ ಎಂಜಿನಿಯರ್ ಜಿತೇಂದರ್ ಪನ್ವರ್ ಹಾಗೂ ಕೇಂದ್ರ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಪೆÇನ್ನುಸ್ವಾಮಿ ಅವರನ್ನೊಳಗೊಂಡ ತಂಡ ಇಂದು ಉಡುಪಿ, ಮಂಗಳೂರು, ಮುಲ್ಕಿ, ಆಡ್ಯಪಾಡಿ, ಬಜ್ಪೆ ಮತ್ತಿತರ ಕಡೆಗಳಲ್ಲಿ ಭೇಟಿ ನೀಡಿ ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಬೆಳೆ, ಮನೆ, ರಸ್ತೆ,ಸೇತುವೆಗಳ ಪರಿಶೀಲನೆ ನಡೆಸಿದರು.
ಇದೇ ತಂಡ ನಾಳೆಯೂ ಬಂಟ್ವಾಳ ತಾಲೂಕಿನ ಮುನ್ನಾರ್ ಪಟ್ನ, ವಿಠ್ಠಲ ಪಂಡನೂರು, ಕಣಿಯೂರು, ಕಲಾಜೆ, ಸುಬ್ರಹ್ಮಣ್ಯ, ಗುಂಡ್ಯ, ಶಿರಾಡಿಘಾಟ್ಗಳಲ್ಲಿ ಪ್ರವಾಸ ಕೈಗೊಂಡು ಮಳೆಯಿಂದ ಆಗಿರುವ ಅನಾಹುತಗಳ ಅಧ್ಯಯನ ನಡೆಸಲಿದೆ.
ಕೇಂದ್ರ ಹಣಕಾಸು ಇಲಾಖೆಯ ಉಪ ಕಾರ್ಯದರ್ಶಿ ಭಾರ್ರ್ತೆಂದ್ರಕುಮಾರ್ ಸಿಂಗ್ ನೇತೃತ್ವದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಉಪ ಕಾರ್ಯದರ್ಶಿ ಮಾಣಿಕ್ಚಂದ್ರ ಪಂಡಿತ್, ಸಾರಿಗೆ ಇಲಾಖೆಯ ಪ್ರಾದೇಶಿಕ ಅಧಿಕಾರಿ ಸದಾನಂದ ಬಾಬು ಅವರನ್ನೊಳಗೊಂಡ ತಂಡ ಇಂದು ಹಾರಂಗಿ, ಹಟ್ಟಿಹೊಳೆ, ಮುಕ್ಕೋಡ್ಲು, ಜಂಬೂರು, ಮಡಿಕೇರಿಗೆ ಭೇಟಿ ನೀಡಿ ಅತಿವೃಷ್ಟಿಯಿಂದ ಹಾನಿಗೀಡಾಗಿರುವ ರಸ್ತೆ, ಸೇತುವೆ, ಗುಡ್ಡ ಕುಸಿತ, ಮನೆ ಹಾನಿ ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ಉಂಟಾಗಿರುವ ಅನಾಹುತಗಳ ಅಧ್ಯಯನ ನಡೆಸಿದೆ.
ಇದೇ ತಂಡ ನಾಳೆ ಹೆಬ್ಬಟ್ಟಗೇರಿ, ದೇವಸ್ತೂರು, ತಂತಿಪಾಲ ಮತ್ತಿತರ ಕಡೆಗಳಲ್ಲಿ ಉಂಟಾಗಿರುವ ಹಾನಿಯ ಪರಿಶೀಲನೆ ನಡೆಸಲಿದ್ದಾರೆ.
ಈ ಎರಡೂ ತಂಡಗಳು ಪ್ರತ್ಯೇಕವಾಗಿ ಅಧ್ಯಯನ ನಡೆಸುವುದಲ್ಲದೆ ಆಯಾ ಜಿಲ್ಲೆಗಳ ಜಿಲ್ಲಾಡಳಿತದೊಂದಿಗೆ ಸಮಾಲೋಚನೆ ನಡೆಸಿ ಅತಿವೃಷ್ಟಿ ಬಗ್ಗೆ ಮಾಹಿತಿ ಕಲೆ ಹಾಕಲಿವೆ. ಶುಕ್ರವಾರ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆಸಿ ಮಳೆ ಅನಾಹುತಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದು ಕೇಂದ್ರ ಸರ್ಕಾರಕ್ಕೆ ವರದಿ ಮಾಡಲಿವೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯದ ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ನೆರೆ ಪೀಡಿತ ಪ್ರದೇಶಗಳಿಗಾಗಿ ತುರ್ತಾಗಿ ಎರಡು ಸಾವಿರ ಕೋಟಿ ರೂ. ನೆರವು ನೀಡುವಂತೆ ಮನವಿ ಮಾಡಿದ ಬೆನ್ನಲ್ಲೇ ಅಧ್ಯಯನ ತಂಡವನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಕಳುಹಿಸಿದೆ.
ಅಧ್ಯಯನ ತಂಡ ನೀಡುವ ವರದಿಯನ್ನಾಧರಿಸಿ ಕೇಂದ್ರ ಸರ್ಕಾರ ನೈಸರ್ಗಿಕ ವಿಕೋಪ ಮಾರ್ಗಸೂಚಿ ಅನ್ವಯ ರಾಜ್ಯಕ್ಕೆ ಪರಿಹಾರ ಧನ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.