ವಿಜಯಪುರ: ಬಾಗಲಕೋಟೆ-ವಿಜಯಪುರ ಜಿಲ್ಲೆಯ ವಿಧಾನ ಪರಿಷತ್ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ನಿರೀಕ್ಷೆಯಂತೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಸಹೋದರ ಸುನೀಲಗೌಡ ಪಾಟೀಲ್ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಜಿಲ್ಲೆಯಲ್ಲಿ ಮತ್ತೊಮ್ಮೆ ಬಿಜೆಪಿಗೆ ಸೋಲಾಗಿದೆ.
ಶಾಸಕ ಬಸನಗೌಡ ಪಾಟೀಲ್ (ಯತ್ನಾಳ) ಅವರ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸೆ. 6ರಂದು ಮತದಾನ ನಡೆದಿತ್ತು. ಇಂದು ನಗರದ ವಿ.ಬಿ. ದರಬಾರ್ ಹೈಸ್ಕೂಲ್‍ನಲ್ಲಿ ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ್ 4,819 ಮತ ಹಾಗೂ ಬಿಜೆಪಿ ಅಭ್ಯರ್ಥಿ ಗೂಳಪ್ಪ ಶೆಟಗಾರ 2,779 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಸುನೀಲಗೌಡ ಪಾಟೀಲ್ 2,040 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಇದೇ ಮೊದಲ ಬಾರಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸುನೀಲಗೌಡ ಪಾಟೀಲ ಕಣದಲ್ಲಿದ್ದರು. ಸುನೀಲ್ಗೌಡ ಹಾಗೂ ಗೂಳಪ್ಪ ಶೆಟಗಾರ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿತ್ತು. ಮತ ಎಣಿಕೆ ಆರಂಭಗೊಂಡ ನಂತರದಿಂದ ಸುನೀಲ್ಗೌಡ ಪಾಟೀಲ್ ಮುನ್ನಡೆ ಸಾಧಿಸಿದ್ದರು. ಒಟ್ಟು 14 ಟೇಬಲ್ ವ್ಯವಸ್ಥೆ ಮಾಡಲಾಗಿತ್ತು. ಮತ ಏಣಿಕೆ ಬೆಳಗ್ಗೆ 8 ಗಂಟೆಗೆ ಆರಂಭಗೊಂಡು 10 ಗಂಟೆಯೊಳಗಾಗಿ ಫಲಿತಾಂಶ ಹೊರಬಿದ್ದಿದೆ.
ನಂತರ ವಿಜೇತ ಅಭ್ಯರ್ಥಿ ಸುನೀಲ್ಗೌಡ ಪಾಟೀಲ್ ಮಾತನಾಡಿ, ಸಮ್ಮಿಶ್ರ ಸರ್ಕಾರದ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸದಸ್ಯರು ತಮಗೆ ಮತ ಚಲಾಯಿಸಿದ್ದಾರೆ. ಈ ಮೂಲಕ ಮುಂದಿನ ಲೋಕಸಭೆ ಚುನಾವಣೆಗೆ ಇದು ದಿಕ್ಸೂಚಿಯಾಗಲಿದ್ದು, ಎಂಪಿ ಚುನಾವಣೆಯಲ್ಲಿಯೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಗೆಲುವು ಖಚಿತ ಎಂದರು.