ಜಾರಕಿಹೊಳಿ ಸಹೋದರರಿಂದ 14ರ ಮಂತ್ರ… ಫಲಿಸುತ್ತಾ ಈ ತಂತ್ರ?

ಬೆಂಗಳೂರು: ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನಾಯಕರ ಕಿತ್ತಾಟ ರಾಜ್ಯ ರಾಜಕಾರಣದಲ್ಲೇ ದೊಡ್ಡ ಬದಲಾವಣೆ ತರುವ ಮುನ್ಸೂಚನೆ ನೀಡಿದ್ದು, ಜಾರಕಿಹೊಳಿ ಸಹೋದರರ ನಿರ್ಧಾರ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ.

ಬೆಳಗಾವಿ ಗ್ರಾಮಾಂತರ  ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸಚಿವ ರಮೇಶ್, ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸಹೋದರರ ನಡುವೆ ನಡೆಯುತ್ತಿರುವ ತಿಕ್ಕಾಟ ಇದೀಗ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸುವ ಸಾಧ್ಯತೆ ಗೋಚರಿಸುತ್ತಿದೆ. ಸಚಿವ ಸ್ಥಾನ ವಂಚಿತರಾಗಿ ಪಕ್ಷದ ಮೇಲೆ ಮುನಿಸಿಕೊಂಡಿರುವ ಸತೀಶ್ ಜಾರಕಿಹೊಳಿಗೆ ಇದೀಗ ಪಕ್ಷದಲ್ಲಿ ಗೌರವ ಕಳೆದುಕೊಂಡಿರುವ ರಮೇಶ್ ಜಾರಕಿಹೊಳಿ ಕೈ ಜೋಡಿಸಿದ್ದಾರೆ. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕೂಡ ತಮ್ಮ ಬೆಂಬಲಿಗರನ್ನು ನಿಲ್ಲಿಸಿ 32ಕ್ಕೆ 32 ಸ್ಥಾನವನ್ನೂ ಗಳಿಸಿಕೊಂಡು ಜಿಲ್ಲೆಯಲ್ಲಿ ತಮ್ಮ ಪ್ರಾಬಲ್ಯ ತೋರಿಸಿದ್ದಾರೆ. ಇದೀಗ ಹೊಸ ದಾಳ ಎಸೆಯಲು ಮುಂದಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ಹೈಕಮಾಂಡ್ ಮಟ್ಟದಲ್ಲಿ ಹೆಚ್ಚು ಪ್ರಭಾವ ಗಳಿಸಿರುವ ಲಕ್ಷ್ಮೀ ಹೆಬ್ಬಾಳ್ಕರ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಗ್ರಾಮಾಂತರದಿಂದ ಗೆದ್ದ ನಂತರ ಸಾಕಷ್ಟು ಜನಪ್ರಿಯತೆ ಸಾಧಿಸುತ್ತಾ ಸಾಗಿದ್ದಾರೆ. ಜಾರಕಿಹೊಳಿ ಸಹೋದರರ ರಾಜಕೀಯ ರಾಜ್ಯ ಮಟ್ಟಕ್ಕೆ ಸೀಮಿತಗೊಳ್ಳುವಂತೆ ಮಾಡಿದ್ದಾರೆ. ಇದು ಸಹೋದರರಿಗೆ ಬೇಸರ ಮೂಡಿಸಿದ್ದು, ಪಕ್ಷಕ್ಕೆ ತಮ್ಮ ಶಕ್ತಿ ತೋರಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಸದ್ಯ ಕಾಂಗ್ರೆಸ್‍ನ 14 ಶಾಸಕರನ್ನು ಸಂಪರ್ಕಿಸಿ ವಿಶ್ವಾಸಕ್ಕೆ ಪಡೆಯುವ ಯತ್ನದಲ್ಲಿ ಸಫಲರಾಗಿದ್ದಾರೆ ಎನ್ನಲಾಗಿದ್ದು, ಇಬ್ಬರು ಪಕ್ಷೇತರ ಶಾಸಕರನ್ನೂ ಸಂಪರ್ಕಿಸುವ ಯತ್ನದಲ್ಲಿದ್ದಾರೆ ಎನ್ನಲಾಗುತ್ತಿದೆ.
ಎಲ್ಲರನ್ನೂ ಒಗ್ಗೂಡಿಸಿಕೊಂಡು ಬಿಜೆಪಿಗೆ ಸೇರ್ಪಡೆಯಾಗುತ್ತಾರೋ, ಇಲ್ಲಾ ಸರ್ಕಾರ ಉರುಳಿಸಲು ದಾಳ ಎಸೆಯುತ್ತಾರೋ ಎನ್ನುವ ಕುತೂಹಲ ಮೂಡಿಸಿದ್ದು, ಒಂದು ಮಾಹಿತಿ ಪ್ರಕಾರ ಪಕ್ಷದ ನಾಯಕರನ್ನು ಬೆದರಿಸುವ ತಂತ್ರ ಕೂಡ ಇದರ ಹಿಂದಿದೆ ಎನ್ನಲಾಗುತ್ತಿದೆ. ಒಟ್ಟಾರೆ ಅತ್ಯಂತ ಗಂಭೀರವಾಗಿ ರಾಜಕೀಯ ಲೆಕ್ಕಾಚಾರದಲ್ಲಿ ಸಹೋದರರು ತೊಡಗಿದ್ದಾರೆ ಎನ್ನಲಾಗುತ್ತಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸತೀಶ್ ಹಾಗೂ ರಮೇಶ್ ಜಾರಕಿಹೊಳಿ ಈ ಸಮ್ಮಿಶ್ರ ಸರ್ಕಾರದಲ್ಲಿ ಉತ್ತಮ ಅವಕಾಶ ಪಡೆಯಲಿಲ್ಲ. ಸತೀಶ್‍ಗೆ ಸಚಿವ ಸ್ಥಾನ ತಪ್ಪಿದರೆ, ರಮೇಶ್ ಸಚಿವರಾಗಿಯೂ ಪ್ರಭಾವಿಯಾಗಿ ಉಳಿದಿಲ್ಲ. ಇದರಿಂದ ಅವರು ಬಿಜೆಪಿಯ ನಾಯಕರಾದ ಶ್ರೀರಾಮುಲು, ರೇಣುಕಾಚಾರ್ಯ ಸೇರಿದಂತೆ ವಿವಿಧ ನಾಯಕರ ಜತೆ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ. ಇವರು ಬಿಜೆಪಿಗೆ ಬೆಂಬಲ ನೀಡಿ ಅಧಿಕಾರಯುತ ಸ್ಥಾನ ಪಡೆಯುತ್ತಾರೆ ಎನ್ನಲಾಗುತ್ತಿದೆ. ಮಾಹಿತಿ ಪ್ರಕಾರ ಉಪ ಮುಖ್ಯಮಂತ್ರಿ ಇಲ್ಲವೇ ಪ್ರಭಾವಿ ಸಚಿವ ಸ್ಥಾನದ ಭರವಸೆ ಸಹೋದರರಿಗೆ ಬಿಜೆಪಿಯಿಂದ ಸಿಕ್ಕಿದೆ ಎನ್ನಲಾಗಿದೆ.
ಒಟ್ಟಾರೆ ವಿಧಾನಸಭೆ ಬಲಾಬಲ ಲೆಕ್ಕಾಚಾರ ಮಾಡಿ, ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಚಿಂತನೆಯನ್ನು ಸಹೋದರರು ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ 14 ಕೈ ಶಾಸಕರ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಈ ವಾರಾಂತ್ಯದ ಒಳಗೆ ರಾಜ್ಯ ಸರ್ಕಾರವನ್ನು ಆತಂಕಕ್ಕೆ ದೂಡುವುದು ಇವರ ಉದ್ದೇಶ ಎನ್ನಲಾಗುತ್ತಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ