ಬೆಂಗಳೂರು, ಸೆ.11- ಬೆಳಗಾವಿಯ ಪಿಎಲ್ಡಿ ಬ್ಯಾಂಕ್ ಚುನಾವಣೆಯ ವಿವಾದ ಮುಗಿದ ಅಧ್ಯಾಯ. ನಮಗಿರುವ ಅಸಮಾಧಾನವನ್ನು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರ ಗಮನಕ್ಕೆ ತರಲಾಗಿದೆ. ಅವರು ಸೂಕ್ತ ತೀರ್ಮಾನಕೈಗೊಳ್ಳುತ್ತಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹೇಳಿಕೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಆದರೆ ಜಾರಕಿಹೊಳಿ ಸಹೋದರರಿಗೆ ಪಿಎಲ್ಡಿ ಬ್ಯಾಂಕ್ ಚುನಾವಣೆಯಲ್ಲಿ ಹಿನ್ನಡೆಯಾದ ಹಿನ್ನೆಲೆಯಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ಮಾಡಿದ್ದರು. ತಮ್ಮೊಂದಿಗೆ 14 ಮಂದಿ ಶಾಸಕರು ಇದ್ದಾರೆ ಎಂದು ಮೊದಲು ಹೇಳಿದ್ದರು. ಆದರೆ ಬೆಳಗಾವಿಯ ಮೂರ್ನಾಲ್ಕು ಶಾಸಕರು ಮಾತ್ರ ಅವರ ನಿರ್ಧಾರಕ್ಕೆ ಬದ್ಧತೆ ಪ್ರದರ್ಶಿಸಿದ್ದರಿಂದ ಸರ್ಕಾರ ಅಸ್ಥಿರಗೊಳಿಸಲು ಜಾರಕಿಹೊಳಿ ಸಹೋದರರರು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.
ಪಕ್ಷ ವಿರೋಧಿ ಚಟುವಟಿಕೆ ನಡೆಸಲು ನಾವು ತಯಾರಿಲ್ಲ ಎಂದು ಇನ್ನಿತರ ಕೆಲವು ಶಾಸಕರು ಜಾರಕಿಹೊಳಿ ಸಹೋದರರಿಗೆ ಸ್ಪಷ್ಟಪಡಿಸಿದ್ದು, ಸರ್ಕಾರ ಉರುಳಿಸಿ ಜನರ ಅವಕೃಪೆಗೆ ಒಳಗಾಗಲು ನಾವು ಸಿದ್ಧರಿಲ್ಲ ಎಂದು ತಿಳಿಸಿದ್ದರು. ಇದರಿಂದ ಜಾರಕಿಹೊಳಿ ಸಹೋದರರು ಹೈಕಮಾಂಡ್ ನಿರ್ಧಾರಕ್ಕೆ ಮಣಿದು ಸಂಧಾನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.