ಬಾಬಾಬುಡನ್‍ಗಿರಿಗೆ ಮುಜಾವರ್, ದತ್ತಪೀಠಕ್ಕೆ ಅರ್ಚಕರನ್ನು ನೇಮಿಸಲು ಶಾಸಕ ಸಿ.ಟಿ.ರವಿ ಒತ್ತಾಯ

ಬೆಂಗಳೂರು, ಸೆ.11-ಬಾಬಾಬುಡನ್‍ಗಿರಿಗೆ ಮುಜಾವರ್ ಅವರನ್ನು, ದತ್ತಪೀಠಕ್ಕೆ ಅರ್ಚಕರನ್ನು ನೇಮಿಸುವ ಮೂಲಕ ಹಲವಾರು ವರ್ಷಗಳಿಂದ ಜೀವಂತವಾಗಿರುವ ವಿವಾದವನ್ನು ಇತ್ಯರ್ಥ ಪಡಿಸಬೇಕು ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಒತ್ತಾಯಿಸಿದ್ದಾರೆ.
ಕಡೂರು ಕ್ಷೇತ್ರದ ಶಾಸಕ ಬೆಳ್ಳಿಪ್ರಕಾಶ್ ಅವರೊಂದಿಗೆ ವಿಧಾನಸೌಧದ ಬಿಜೆಪಿ ಶಾಸಕಾಂಗ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿ ಮಾತನಾಡಿದ ಅವರು, ಸ್ವತಂತ್ರದ ಹಿಂದಿನ ದಾಖಲೆಗಳಲ್ಲಿ ಬಾಬಾಬುಡನ್ ಗಿರಿಯೇ ಬೇರೆ , ಇನಾಮ್ ದತ್ತಾತ್ರೇಯ ಪೀಠವೇ ಬೇರೆ ಎಂಬ ಸ್ಪಷ್ಟ ದಾಖಲೆಗಳಿವೆ.

ವೋಟ್‍ಬ್ಯಾಂಕ್‍ಗಾಗಿ ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಈಗಲಾದರೂ ಸತ್ಯದ ಪರವಾಗಿ ನಿರ್ಧಾರ ತೆಗೆದುಕೊಳ್ಳಬೇಕು. ಹೈಕೋರ್ಟ್ ಇತ್ತೀಚೆಗೆ ನಡೆಸಿದ ವಿಚಾರಣೆಯಲ್ಲಿ ದತ್ತಾತ್ರೇಯ ಪೀಠಕ್ಕೆ ಹಿಂದೂ ಅರ್ಚಕರನ್ನು ಏಕೆ ನೇಮಿಸಬಾರದು ಎಂದು ಬಹಿರಂಗವಾಗಿಯೇ ಅಡ್ವೋಕೇಟ್ ಜನರಲ್ ಅವರನ್ನು ಪ್ರಶ್ನೆ ಮಾಡಿದೆ. ಜತೆಗೆ ಸರ್ಕಾರದ ಜತೆ ಚರ್ಚಿಸಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಎಂದು ಸೂಚನೆ ನೀಡಿದೆ. ಇದು ಸುವರ್ಣ ಅವಕಾಶ.

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣ ಬಿಟ್ಟು ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು. ಕಂದಾಯ ದಾಖಲೆಗಳ ಪ್ರಕಾರ ಬಾಬಾಬುಡನ್‍ಗಿರಿ ನಾಗೇನಹಳ್ಳಿ ಸರ್ವೆ ನಂ.57ರಲ್ಲಿದೆ. ಇನಾಮ್ ದತ್ತಾತ್ರೇಯ ಪೀಠ ಸರ್ವೆ ನಂ. 195ರಲ್ಲಿದೆ. ಪೀಠಕ್ಕೆ 1861 ಎಕರೆ ಜಮೀನಿದೆ. ಮುಜರಾಯಿ ಇಲಾಖೆ ಮಧ್ಯಂತರ ಟ್ರಸ್ಟಿ ಹಣವನ್ನು ಬಿಡುಗಡೆ ಮಾಡಿದ್ದು, ಅದು ದತ್ತಾತ್ರೇಯ ಪೀಠದ ಖಾತೆಯ ಹೆಸರಿನಲ್ಲೇ ಇದೆ. ದರ್ಗಾಕ್ಕೂ ಹಣ ಬಿಡುಗಡೆ ಮಾಡುವ ಪ್ರಸ್ತಾವನೆ ಇತ್ತಾದರೂ ಬಿಡುಗಡೆ ಆಗಿಲ್ಲ ಎಂದರು.

ಇದೆಲ್ಲದರ ಜತೆಗೆ ಈ ಹಿಂದಿನ ದಾಖಲೆಗಳಲ್ಲೂ ದತ್ತಾತ್ರೇಯ ಪೀಠವೇ ಬೇರೆ, ದರ್ಗವೇ ಬೇರೆ ಎಂಬ ಸ್ಪಷ್ಟ ಉಲ್ಲೇಖವಿದೆ. ಈ ವಿವಾದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‍ಗೆ ಆಗಿನ ಮುಜರಾಯಿ ಆಯುಕ್ತರು ಮುಚ್ಚಿದ ಲಕೋಟೆಯಲ್ಲಿ ಪ್ರಮಾಣ ಪತ್ರ ಸಲ್ಲಿಸಿ ಪ್ರತ್ಯೇಕ ಅರ್ಚಕರು ಮತ್ತು ಮುಜಾವರ್‍ಗಳನ್ನು ನೇಮಿಸುವುದು ಸೂಕ್ತ ಎಂದು ಅಭಿಪ್ರಾಯ ತಿಳಿಸಿದ್ದರು.

ಆದರೆ, ಇದನ್ನು ಇಷ್ಟಪಡದ ರಾಜ್ಯ ಸರ್ಕಾರ ಜಸ್ಟೀಸ್ ನಾಗಮೋಹನದಾಸ್ ಸಮಿತಿಯನ್ನು ರಚಿಸಿತ್ತು. ಸಮಿತಿ ರಚನೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದು, ಅದರ ವಿಚಾರಣೆ ವೇಳೆ ನ್ಯಾಯಾಧೀಶರು ಪೀಠಕ್ಕೆ ಅರ್ಚಕರನ್ನು ಏಕೆ ನೇಮಿಸಬಾರದು ಎಂದು ಪ್ರಶ್ನಿಸಿದ್ದಾರೆ ಎಂದು ವಿವರಿಸಿದರು.
ಸರ್ಕಾರ 2010ರಲ್ಲಿ ಸುಪ್ರೀಂಕೋರ್ಟ್‍ಗೆ ಸಲ್ಲಿಸಿದ್ದ ಪ್ರಮಾಣಪತ್ರದ ಅಭಿಪ್ರಾಯಗಳನ್ನು ಆಧರಿಸಿ ಹೈಕೋರ್ಟ್‍ಗೂ ತನ್ನ ಅಭಿಪ್ರಾಯ ತಿಳಿಸಬೇಕು ಎಂದು ರವಿ ಒತ್ತಾಯಿಸಿದರು.

ಹಿಂದೂ ಆಚರಣೆ ದತ್ತಾತ್ರೇಯ ಪೀಠದಲ್ಲಿ ಮುಜಾವರ್‍ಗಳು ತೀರ್ಥ ಕೊಡುವುದು, ಹೂ ಇಡುವುದು, ದೀಪ ಹಚ್ಚುವುದನ್ನು ಮಾಡುತ್ತಿದ್ದಾರೆ. ಇದು ಸರಿಯಲ್ಲ. ಒಂದು ವೇಳೆ ದರ್ಗಾ, ಮಸೀದಿಗಳಿಗೆ ಹಿಂದು ಅರ್ಚಕರನ್ನು ನೇಮಿಸಲು ಒಪ್ಪುವುದಾದರೆ ದತ್ತಾತ್ರೇಯ ಪೀಠದಲ್ಲಿ ಮುಜಾವರ್‍ಗಳು ಪೂಜೆ ಮಾಡಲು ಒಪ್ಪುತ್ತೇವೆ ಎಂದು ಸಿ.ಟಿ.ರವಿ ಸವಾಲು ಹಾಕಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ದತ್ತಾತ್ರೇಯ ಪೀಠಕ್ಕೆ ಹಿಂದು ಅರ್ಚಕರನ್ನು ದರ್ಗಾಕ್ಕೆ ಮುಜಾವರ್‍ಗಳನ್ನು ನೇಮಿಸುವುದು ಖಚಿತ ಎಂದು ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ