ಬೆಂಗಳೂರು, ಸೆ.11- ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಕೆಡವಲು ಬಿಜೆಪಿ ಯಾವುದೇ ಪ್ರಯತ್ನ ಮಾಡುವುದಿಲ್ಲ. ಒಂದು ವೇಳೆ ಆಂತರಿಕ ಬೇಗುದಿಯಿಂದ ಸರ್ಕಾರ ಪತನವಾದರೆ ನಾವು ಆ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳದೆ ಕೈ ಕಟ್ಟಿ ಕೂರುವುದಿಲ್ಲ ಎಂದು ಬಿಜೆಪಿ ಪ್ರಧಾನಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಸ್ಪಷ್ಟಪಡಿಸಿದ್ದಾರೆ.
ಕಡೂರು ಕ್ಷೇತ್ರದ ಶಾಸಕ ಬೆಳ್ಳಿಪ್ರಕಾಶ್ ಅವರೊಂದಿಗೆ ವಿಧಾನಸೌಧದ ಬಿಜೆಪಿ ಶಾಸಕಾಂಗ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿ ಎಲ್ಲವೂ ಸರಿಯಿಲ್ಲ. ಸರ್ಕಾರದ ವಿರುದ್ಧ ಅವರದ್ದೇ ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ದಿನಕ್ಕೊಂದು ಬೆಳವಣಿಗೆ ನಡೆಯುತ್ತಿವೆ. ಮನಸ್ಸಿಗೆ ಹಿಡಿಸದೇ ಇದ್ದರೆ ರಾಜೀನಾಮೆ ಕೊಟ್ಟು ಹೊರ ಬರುವ ಮೇಲ್ಪಂಕ್ತಿಯನ್ನು ಈ ಹಿಂದೆ ಜೆಡಿಎಸ್‍ನಲ್ಲಿದ್ದಾಗ ಸಿದ್ದರಾಮಯ್ಯ ಅವರೇ ಮಾಡಿ ತೋರಿಸಿದ್ದಾರೆ. ಕಾಂಗ್ರೆಸ್‍ನಲ್ಲಿರುವ ಶಾಸಕರಿಗೆ ಇಕ್ಕಟ್ಟಿನ ವಾತಾವರಣ ಇದ್ದರೆ ರಾಜೀನಾಮೆ ಕೊಟ್ಟು ಹೊರ ಬರಲಿ. ನಾವಂತೂ ಯಾರನ್ನೂ ಸೆಳೆಯುವ ಪ್ರಯತ್ನ ಮಾಡುತ್ತಿಲ್ಲ. ಸರ್ಕಾರ ಬೀಳಿಸುವ ಕೆಲಸಕ್ಕೂ ಕೈ ಹಾಕುವುದಿಲ್ಲ. ಸರ್ಕಾರ ತಾನಾಗಿಯೇ ಬಿದ್ದರೆ ಬಿಜೆಪಿ ಸರ್ಕಾರ ರಚಿಸಲು ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತದೆ ಎಂದರು.
ರಾಜ್ಯದ ಜನ 122ಶಾಸಕರಿದ್ದ ಕಾಂಗ್ರೆಸ್ ಪಕ್ಷಕ್ಕೆ ಕೇವಲ 79 ಮಂದಿಯನ್ನು ಮಾತ್ರ ಆಯ್ಕೆ ಮಾಡಿದ್ದಾರೆ. 39 ಮಂದಿ ಶಾಸಕರಿರುವ ಜೆಡಿಎಸ್‍ಅನ್ನು ಮುಖ್ಯಮಂತ್ರಿಯಾಗಬೇಕೆಂದು ಜನ ಒಪ್ಪಿಲ್ಲ. 104 ಸ್ಥಾನವಿರುವ ಬಿಜೆಪಿ ಸರ್ಕಾರ ರಚಿಸಬೇಕೆಂಬುದು ಜನರ ಬಯಕೆಯಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕರ ಜತೆ ಬಿಜೆಪಿ ನಾಯಕರು ಚರ್ಚೆ ಮಾಡಬಾರದು ಎಂಬ ನಿಯಮವಿಲ್ಲ. ಇಂಡಿಯಾ, ಪಾಕಿಸ್ತಾನದ ಜತೆ ಮಾತುಕತೆ ನಡೆಯುವಾಗ ಕೆಲವು ರಾಜಕೀಯ ಪಕ್ಷಗಳ ಜತೆ ಮಾತುಕತೆ ನಡೆಯುವುದು ದೊಡ್ಡದಲ್ಲ. ಜೆಡಿಎಸ್ ಸರ್ಕಾರದಲ್ಲಿ ಜನರಿಗೆ ಏನು ಬೇಕು ಎಂಬ ಚಿಂತನೆಗಿಂತಲೂ ನಮಗೆ ಏನು ಸಿಗುತ್ತದೆ ಎಂಬ ಸ್ವಾರ್ಥ ಹೆಚ್ಚಾಗಿದೆ. ಹೀಗಾಗಿ ರಾಜಕಾರಣ ಹದಗೆಟ್ಟಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಸ್ವಾರ್ಥಕ್ಕಿಂತಲೂ ಜನರಿಗೆ ಏನು ಬೇಕು ಎಂಬುದರ ಬಗ್ಗೆ ಗಂಭೀರ ಚಿಂತನೆ ಮಾಡುತ್ತೇವೆ ಎಂದರು.
ಪಾರದರ್ಶಕವಾಗಿ ವ್ಯವಹಾರ ನಡೆಸಿದ್ದರೆ ಡಿ.ಕೆ.ಶಿವಕುಮಾರ್ ಅವರಿಗೆ ಅನಗತ್ಯವಾದ ಭಯ ಏಕೆ, ಐಟಿ ಅಧಿಕಾರಿಗಳು ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.