ಬೆಂಗಳೂರು, ಸೆ.11- ಕಾಂಗ್ರೆಸ್ ಹಾಗೂ ಜೆಡಿಎಸ್ನಲ್ಲಿ ಉಂಟಾಗಿರುವ ಭಿನ್ನಮತ ಕುರಿತಂತೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ಪಕ್ಷದ ಪ್ರಮುಖರ ಜತೆ ಚರ್ಚೆ ನಡೆಸಿದರು.
ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಪಕ್ಷದ ಪ್ರಮುಖರಾದ ಜಗದೀಶ್ ಶೆಟ್ಟರ್, ಉಮೇಶ್ಕತ್ತಿ, ಗೋವಿಂದಕಾರಜೋಳ, ಶೋಭಾ ಕರಂದ್ಲಾಜೆ ಸೇರಿದಂತೆ ಮತ್ತಿತರ ಪ್ರಮುಖರ ಜತೆ ಗೌಪ್ಯವಾಗಿ ಮಾತುಕತೆ ನಡೆಸಿದರು.
ಸಚಿವ ರಮೇಶ್ ಜಾರಕಿಹೊಳಿ ಹಾಗೂ ಅವರ ಸಹೋದರ ಮಹಾರಾಷ್ಟ ಮುಖ್ಯಮಂತ್ರಿ ಜತೆ ಮಾತುಕತೆ ನಡೆಸಿದ್ದಾರೆ ಎಂಬ ವದಂತಿ ಹಬ್ಬಿರುವ ಬೆನ್ನಲ್ಲೇ ಯಡಿಯೂರಪ್ಪ ಪಕ್ಷದ ಪ್ರಮುಖರ ಜತೆ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಈ ಎರಡೂ ಪಕ್ಷಗಳಿಂದ ಅಸಮಾಧಾನಗೊಂಡಿರುವ ಕೆಲವು ಭಿನ್ನಮತೀಯ ಶಾಸಕರು ಬಿಜೆಪಿಗೆ ಸೇರಲು ಒಲವು ತೋರಿದ್ದಾರೆ ಎಂಬ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬ್ಗೆ ಪಕ್ಷದ ಪ್ರಮುಖರಿಂದ ಮಾಹಿತಿ ಪಡೆದರು.
ಎಷ್ಟು ಶಾಸಕರು ಬರಲಿದ್ದಾರೆ, ಒಂದು ವೇಳೆ ಶಾಸಕರು ರಾಜೀನಾಮೆ ನೀಡಿದರೆ ಪಕ್ಷದಲ್ಲಿ ನೀಡಬಹುದಾದ ಸ್ಥಾನಮಾನ, ಪಕ್ಷದ ಶಾಸಕರು ಭಿನ್ನಮತ ನಡೆಸದಂತೆ ತೆಗೆದುಕೊಳ್ಳಬೇಕಾದ ತೀರ್ಮಾನಗಳ ಬಗ್ಗೆಯೂ ಚರ್ಚೆ ನಡೆದಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ಶಾಸಕರು ಬಂದರೆ ನಮ್ಮ ಪಕ್ಷದಲ್ಲಿನ ಶಾಸಕರು ಯಾವುದೇ ಕಾರಣಕ್ಕೂ ಭಿನ್ನಮತ ನಡೆಸಬಾರದು. ಕೆಲವು ಶಾಸಕರು ಕಾಂಗ್ರೆಸ್ ಹಾಗೂ ಜೆಡಿಎಸ್ ಸಂಪರ್ಕದಲ್ಲಿರುವುದರಿಂದ ಅವರ ಚಲನವಲನಗಳ ಬಗ್ಗೆ ನಿಗಾವಹಿಸುವಂತೆ ಯಡಿಯೂರಪ್ಪ ಸೂಚಿಸಿದ್ದಾರೆ.
ಸರ್ಕಾರ ರಚಿಸುವಾಗ ಪಕ್ಷದ ಶಾಸಕರೆಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು. ನನಗೆ ಸ್ಥಾನಮಾನ ಸಿಕ್ಕಿಲ್ಲ ಎಂಬ ಕಾರಣಕ್ಕೆ ಭಿನ್ನಮತ ಸಾರುವುದು. ಇಲ್ಲವೇ ಆಸೆ, ಆಮಿಷಗಳಿಗೆ ಬಲಿಯಾಗದೆ ಸಂಖ್ಯಾಬಲಕ್ಕೆ ಕೊರತೆಯಾಗುತ್ತದೆ. ಪ್ರತಿಪಕ್ಷ ರೂಪಿಸುವ ತಂತ್ರಕ್ಕೆ ನಾವೂ ಕೂಡ ಪ್ರತಿ ತಂತ್ರವನ್ನೇ ಹೆಣೆಯಬೇಕು. ಕಳೆದ ಬಾರಿ ಉಂಟಾದ ಮುಜುಗರಕ್ಕೆ ಈ ಬಾರಿ ನಾವು ಮುಜಗರಕ್ಕೆ ಸಿಲುಕಬಾರದು. ಎಚ್ಚರಿಕೆಯ ಹೆಜ್ಜೆ ಇಡಬೇಕೆಂದು ಸಲಹೆ ಮಾಡಿದ್ದಾರೆ ಎನ್ನಲಾಗಿದೆ.
ಯಡಿಯೂರಪ್ಪ ಅವರ ನಿವಾಸದಲ್ಲಿ ನಡೆದಿರುವ ಇಂದಿನ ಸಭೆ ರಾಜಕೀಯ ವಲಯದಲ್ಲಿ ಎಡೆ ಮಾಡಿಕೊಟ್ಟಿದೆ.