ಕಲಬುರಗಿ: ಸೆ-11: ಬಡವರ ಪರ ಚಿಂತನೆ ಇರುವ ಸರಕಾರಗಳು ಬಂದರೆ ಹಲವಾರು ಯೋಜನೆಗಳು ಬರಲು ಸಾಧ್ಯ.ಕೇವಲ ರಾಜಕೀಯಕ್ಕಾಗಿ ಸುಳ್ಳು ಹೇಳಿ ದಬ್ಬಾಳಿಕೆ ಮಾಡುವುದರಿಂದ ಸಂವಿಧಾನದ ವಿರುದ್ದ ಹೋಗುವವರ ಬಗ್ಗೆ ಜನರು ಎಚ್ಚರವಹಿಸಬೇಕು ಎಂದು ಕೇಂದ್ರ ಮಾಜಿ ಸಚಿವ ಹಾಗೂ ಸಂಸದರಾದ ಮಲ್ಲಿಕಾರ್ಜುನ ಖರ್ಗೆ ಅವರು ಅಭಿಪ್ರಾಯಪಟ್ಟರು.
ಕಲಬುರಗಿ ನಗರದ ಕಪನೂರು ಕೊಳಗೇರಿ ಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ 150 ಮನೆಗಳ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಯೋಜನೆಗಳು ಚೆನ್ನಾಗಿರುತ್ತವೆ ಆದರೆ ಕಟ್ಟಡಗಳ ನಿರ್ಮಾಣದಲ್ಲಿ ಉತ್ತಮ ಗುಣಮಟ್ಡದ ಕೊರತೆ ಎದ್ದು ಕಾಣುತ್ತದೆ. ಆದರೆ, ಕಾಮಗಾರಿಯಲ್ಲಿ ಉತ್ತಮ ಗುಣಮಟ್ಟ ಕಾಪಾಡಿಕೊಂಡ ಕಟ್ಟಡಗಳ ನಿರ್ಮಾಣಕ್ಕೆ ಅಧಿಕಾರಿಗಳು ಒತ್ತು ನೀಡಬೇಕು ಎಂದು ಖರ್ಗೆ ಸಲಹೆ ನೀಡಿದರು.
ಒಟ್ಟು ರೂ 7.47 ಕೋಟಿ ವರ್ಷದ ವೆಚ್ಚದಲ್ಲಿ 150 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಕೇಂದ್ರದಲ್ಲಿ ಯುಪಿಎ ಸರಕಾರ ಇದ್ದಾಗ ಹಾಗೂ ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಒಟ್ಟು 5 ವರ್ಷದಲ್ಲಿ ಒಟ್ಟು 13 ಲಕ್ಷ ಮನೆ ನಿರ್ಮಾಣ ಮಾಡಲಾಗಿದೆ. ಈ ಯೋಜನೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಅನುದಾನದಲ್ಲಿ ಜಾರಿಗೊಳ್ಳುತ್ತಿದೆ.
ಹೈಕಭಾಗದ ಅಭಿವೃದ್ದಿಗಾಗಿ ಸಂವಿಧಾನದ 371 ಕಲಂ ಗೆ ತಿದ್ದುಪಡಿ ತಂದು ( J ) ಸೇರಿಸಲಾಯಿತು. ಆದರೆ, ಕೆಲ ಲೋಪದೋಷಗಳ ಸರಿಪಡಿಸುವ ಬಗ್ಗೆ ಅನುದಾನ ನೀಡುವ ಬಗ್ಗೆ ರಾಜ್ಯದ ಮುಖ್ಯಂತ್ರಿ ಕುಮಾರಸ್ವಾಮಿ ಹಾಗೂ ಕಾಂಗ್ರೇಸ್ ನಾಯಕರಿಗೆ ಪತ್ರ ಬರೆದಿದ್ದೇನೆ ಎಂದು ಅವರು ಹೇಳಿದರು.
ಸಂವಿಧಾನದಿಂದ ಸ್ವಾಭಿಮಾನ ದಕ್ಕಿದೆ. ಇದನ್ನು ರಕ್ಷಿಸುವ ಕೆಲಸವಾಗಬೇಕು ಎಂದು ಹೇಳಿದ ಅವರು, ಯೋಜನೆಗಳ ಅನುಷ್ಠಾನಕ್ಕೆ ಎಲ್ಲ ಸಾರ್ವಜನಿಕರು ಅಧಿಕಾರಿಗಳ ಸಹಕಾರ ಅಗತ್ಯ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಜಗದೇವ ಗುತ್ತೇದಾರ್, ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ ಸೇರಿದಂತೆ ಹಲವರು ಭಾಗವಹಿಸಿದ್ದರು.