ಬೆಂಗಳೂರು, ಸೆ.10- ನಗರದಲ್ಲಿ ಇದೇ ಪ್ರಪ್ರಥಮ ಬಾರಿಗೆ ಉದ್ಯಾನವನದಲ್ಲಿ ಹೈಡ್ರಾಲಿಕ್ ವ್ಯಾಯಾಮ ಉಪಕರಣ ಅಳವಡಿಕೆ ಮಾಡಲಾಗಿದೆ.
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್ನಲ್ಲಿರುವ ಸಂಜೀವಿನಿ ಮತ್ತು ಧನ್ವಂತರಿ ವನಗಳ ನಡುವಿನ ಪ್ರದೇಶದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ಹೈಡ್ರಾಲಿಕ್ ಉಪಕರಣಗಳನ್ನು ಬಳಕೆ ಮಾಡಿ ನಿರ್ಮಿಸಿರುವ ಮಹಾಕಾಯ ವ್ಯಾಯಾಮ ಕೇಂದ್ರವನ್ನು ಇಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹಾಗೂ ಮೇಯರ್ ಸಂಪತ್ರಾಜ್ ಅವರು ಲೋಕಾರ್ಪಣೆ ಮಾಡಿದರು.
ಉದ್ಯಾನವನಗಳಲ್ಲಿ ತೆರೆದ ವ್ಯಾಯಾಮ ಕೇಂದ್ರ ನಿರ್ಮಾಣ ಮಾಡುವುದು ಮಾಮೂಲು. ಆದರೆ, ಸ್ಥಳೀಯ ಪಾಲಿಕೆ ಸದಸ್ಯೆ ಪೂರ್ಣಿಮಾ ಆರ್.ರಮೇಶ್ ಹಾಗೂ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಅವರು ಇದೇ ಮೊದಲ ಬಾರಿಗೆ ತೆರೆದ ವ್ಯಾಯಾಮ ಕೇಂದ್ರಗಳಲ್ಲಿ ಹೈಡ್ರಾಲಿಕ್ ವ್ಯಾಯಾಮ ಉಪಕರಣಗಳನ್ನು ಬಳಕೆ ಮಾಡಿರುವುದು ಸ್ವಾಗತಾರ್ಹ ಎಂದು ಸಂಪತ್ರಾಜ್ ಹೇಳಿದರು.
ಈಗಾಗಲೇ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಯಡಿಯೂರು ವಾರ್ಡ್ ಮುನ್ನುಡಿ ಬರೆದಿದ್ದು, ಇತರ ವಾರ್ಡ್ಗಳ ಸದಸ್ಯರುಗಳು ಇದೇ ಮಾದರಿಯನ್ನು ಅನುಸರಿಸುವುದು ಸೂಕ್ತ ಎಂದು ಅವರು ಹೇಳಿದರು.
ರಾಜ್ಯದ ಪ್ರಪ್ರಥಮ ಗಿಡಮೂಲಿಕೆಗಳ ಉದ್ಯಾನವನವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಂಜೀವಿನಿ ಮತ್ತು ಧನ್ವಂತರಿ ವನಗಳ ನಡುವೆ ಹೈಡ್ರಾಲಿಕ್ ಉಪಕರಣಗಳ ವ್ಯಾಯಾಮ ಕೇಂದ್ರ ನಿರ್ಮಾಣ ಮಾಡಲಾಗಿದ್ದು, ಇಲ್ಲಿ 15 ರಿಂದ 90 ವಯೋಮಾನದ ಎಲ್ಲರೂ ಅತ್ಯಂತ ಸುಲಭವಾಗಿ ವ್ಯಾಯಾಮ ಮಾಡಬಹುದಾಗಿದೆ ಎಂದು ಎನ್.ಆರ್.ರಮೇಶ್ ಹೇಳಿದರು.
ಇದೇ ಸಂದರ್ಭದಲ್ಲಿ ಮಾಜಿ ಡಿಸಿಎಂ ಹಾಗೂ ಶಾಸಕ ಆರ್.ಅಶೋಕ್ ಅವರು ಯಡಿಯೂರು ವಾರ್ಡ್ನ 82 ಮಂದಿ ಹೆಣ್ಣು ಮಕ್ಕಳಿಗೆ ತಲಾ 3 ಸಾವಿರ ರೂ.ಗಳ ಟೈಲರಿಂಗ್ ತರಬೇತಿ ಸಹಾಯ ಧನ ಹಾಗೂ ಬಡ ಪದವೀಧರ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ಗಳನ್ನು ವಿತರಿಸಿದರು.