ಭಾರತ್ ಬಂದ್‍ಗೆ ಕರಾವಳಿ ಜಿಲ್ಲೆಗಳಲ್ಲೂ ಉತ್ತಮ ಪ್ರತಿಕ್ರಿಯೆ

ಮಂಗಳೂರು, ಸೆ.10- ಭಾರತ್ ಬಂದ್‍ಗೆ ಕರಾವಳಿ ಜಿಲ್ಲೆಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉತ್ತರ ಕನ್ನಡ, ಮಂಗಳೂರು, ಉಡುಪಿ, ಕುಂದಾಪುರ, ಬಂಟ್ವಾಳ, ಸುಳ್ಯ, ಪುತ್ತೂರು ಸೇರಿದಂತೆ ಹಲವೆಡೆ ಬಂದ್‍ನಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಖಾಸಗಿ ಹಾಗೂ ಸರ್ಕಾರಿ ಬಸ್ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಮಂಗಳೂರಿನ ಜ್ಯೋತಿ ಸರ್ಕಲ್ ಹಾಗೂ ಕುಲಶೇಖರದಲ್ಲಿ ಟಯರ್‍ಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಬಲ್ಮಠ ಸಮೀಪ ಬಸ್ ಗೆ ಕಲ್ಲುತೂರಾಟ ನಡೆಸಲಾಗಿದೆ.
ಹೆಲ್ಮೆಟ್ ಧರಿಸಿ ಬೈಕ್‍ನಲ್ಲಿ ಬಂದ ದುಷ್ಕರ್ಮಿಯೊಬ್ಬ ಕದ್ರಿಯ ಶಿವಭಾಗ್ ರೆಸ್ಟೋರೆಂಟ್ ಮೇಲೆ ಕಲ್ಲುತೂರಾಟ ನಡೆಸಿದ್ದು, ರೆಸ್ಟೋರೆಂಟ್‍ನ ಕಿಟಕಿ ಗಾಜು ಪುಡಿ, ಪುಡಿಯಾಗಿದೆ.

ಮಂಗಳೂರಿನಲ್ಲಿ ಬಹುತೇಕ ಅಂಗಡಿ, ಮುಂಗಟ್ಟುಗಳು ಬಂದ್ ಆಗಿದ್ದು, ಸಂಚಾರ ಬಿಕೋ ಎನ್ನುತ್ತಿದೆ. ಕೆಲವೆಡೆ ಬಲವಂತದಿಂದ ಬಂದ್ ಮಾಡಿಸುತ್ತಿರುವ ಬಗ್ಗೆ ದೂರು ಕೇಳಿ ಬಂದಿದೆ.

ಎರಡು ಕೆಎಸ್‍ಆರ್‍ಟಿಸಿ ಬಸ್‍ಗಳ ಮೇಲೆ ಕಲ್ಲೆಸೆತ:
ಭಾರತ ಬಂದ್ ಹಿನ್ನೆಲೆಯಲ್ಲಿ ಇಲ್ಲಿನ ಬಂಟ್ವಾಳದಲ್ಲಿಂದು ಬೆಳಗ್ಗೆ ಎರಡು ಕೆಎಸ್‍ಆರ್‍ಟಿಸಿ ಬಸ್‍ಗಳಿಗೆ ಕಲ್ಲೆಸೆದ ಘಟನೆ ನಡೆದಿದೆ. ಉಪ್ಪಿನಂಗಡಿ-ಸುಬ್ರಹ್ಮಣ್ಯ ರಸ್ತೆ ಸೇರಿ ಅಲ್ಲಲ್ಲಿ ಟಯರ್‍ಗಳಿಗೆ ಬೆಂಕಿ ಹಾಕಿ ರಸ್ತೆ ತಡೆಗೆ ಯತ್ನಿಸಲಾಗಿದೆ. ಈ ನಡುವೆ ರಸ್ತೆ ತಡೆಗೆ ಯತ್ನಿಸಿದ ಇಬ್ಬರನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ.
ಬಿ.ಸಿ.ರೋಡ್ ಮುಖ್ಯ ವೃತ್ತದ ಬಳಿಯಲ್ಲಿ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಬಸ್‍ನ ಮುಂಭಾಗದ ಗಾಜಿಗೆ ಹಾನಿಯಾಗಿದೆ. ಇದಕ್ಕೂ ಮೊದಲು ಮುಂಜಾನೆ 5:30ರ ವೇಳೆಗೆ ಬಂಟ್ವಾಳದಲ್ಲಿ ಇನ್ನೊಂದು ಬಸ್ ಮೇಲೂ ಕಲ್ಲೆಸೆತ ನಡೆದಿದೆ. ಇದರಿಂದ ಅದರ ಗಾಜಿಗೂ ಹಾನಿಯಾಗಿದೆ.

ಜಕ್ರಿಬೆಟ್ಟುವಿನಲ್ಲಿ ರಸ್ತೆ ತಡೆ ಮಾಡುತ್ತಿದ್ದ ಇಬ್ಬರನ್ನು ಬಂಟ್ವಾಳ ಗ್ರಾಮಾಂತರ ಪೆÇಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತುಂಬೆ ಬಳಿ ಟಯರ್ ಹಾಕಿ ರಸ್ತೆ ತಡೆ ಮಾಡಿದ್ದನ್ನು ಪೆÇಲೀಸರು ತೆರವು ಮಾಡಿದ್ದಾರೆ. ಮಾಣಿ ಸಮೀಪದ ಹಳೀರ ಎಂಬಲ್ಲಿ ರಸ್ತೆ ಮಧ್ಯೆ ಟಯರ್ ಸುಟ್ಟು ಹಾಕಿದ ಘಟನೆ ಬೆಳಗ್ಗೆ ನಡೆದಿದೆ. ಕಲ್ಲಡ್ಕ ಕೆ.ಸಿ.ರೋಡ್, ಮಾಣಿ ನಾರಾಯಣ ಗುರು ಮಂದಿರ ಬಳಿಯ ರಸ್ತೆಯಲ್ಲಿ ಬಂದ್ ಬೆಂಬಲಿಗರು ಟಯರ್‍ಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಲು ಯತ್ನಿಸಿದ್ದಾರೆ. ಪೆÇಲೀಸರು ಸಕಾಲಿಕವಾಗಿ ಆಗಮಿಸಿ ಸಂಚಾರಕ್ಕೆ ಅಡಚಣೆಯಾಗದಂತೆ ಟಯರ್‍ಗಳನ್ನು ಬದಿಗೆ ಸರಿಸಿ, ಬೆಂಕಿ ನಂದಿಸಿದ್ದಾರೆ.
ಬಂದ್ ಹಿನ್ನೆಲೆಯಲ್ಲಿ ಕಲ್ಲಡ್ಕ ಸಹಿತ ಜಿಲ್ಲೆಯ ಪ್ರಮುಖ ನಗರಗಳಲ್ಲಿ ಹೆಚ್ಚುವರಿ ಪೆÇಲೀಸರನ್ನು ನಿಯೋಜನೆ ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ