ಬೆಂಗಳೂರು, ಸೆ.10- ಕರ್ನಾಟಕದಲ್ಲಿ ನೆರೆ ಹಾಗೂ ಬರ ಪರಿಸ್ಥಿತಿಯಿಂದಾಗಿ ಸುಮಾರು 8ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದ್ದು, ಕೇಂದ್ರ ಸರ್ಕಾರ ಪರಿಹಾರ ಕಾಮಗಾರಿಗಳಿಗೆ ಹೆಚ್ಚಿನ ನೆರವು ನೀಡಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ವಪಕ್ಷ ನಿಯೋಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದೆ.
ಕೊಡಗು ಜಿಲ್ಲೆ ಹಾಗೂ ಕರಾವಳಿ, ಮಲೆನಾಡು ಭಾಗದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಕೊಡಗು ಜಿಲ್ಲೆಯೊಂದರಲ್ಲೇ ಸುಮಾರು ಮೂರು ಸಾವಿರ ಕೋಟಿ ರೂ.ನಷ್ಟು ನಷ್ಟ ಸಂಭವಿಸಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲೂ ಭಾರೀ ನಷ್ಟವಾಗಿದೆ. ಕೊಡಗು ಜಿಲ್ಲೆ ಬಹುತೇಕ ಕೊಚ್ಚಿ ಹೋಗಿದ್ದು, ಅದನ್ನು ಪುನರ್ ನಿರ್ಮಿಸುವ ಅಗತ್ಯವಿದೆ. ಅದಕ್ಕಾಗಿ ಕೇಂದ್ರದಿಂದ ಹೆಚ್ಚಿನ ನೆರವು ನೀಡುವಂತೆ ಈ ಮೊದಲು ಕೇಂದ್ರ ಗೃಹ ಸಚಿವ ರಾಜನಾಥ್‍ಸಿಂಗ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಅವರಿಂದ ಯಾವುದೇ ಭರವಸೆಗಳು ಸಿಕ್ಕಿಲ್ಲ ಎಂದು ನಿಯೋಗ ಅಸಮಾಧಾನ ವ್ಯಕ್ತಪಡಿಸಿದೆ.
ಕೊಡಗು ಜಿಲ್ಲೆಯ ನೆರೆ ಭಾಗದಲ್ಲಿರುವ ಕೇರಳಕ್ಕೆ ತಾವು ಭೇಟಿ ನೀಡಿದ್ದು, 500 ಕೋಟಿ ರೂ. ನೆರವು ನೀಡಿದ್ದು, ಅದೇ ರೀತಿ ನೆರವು ನೀಡಿ. ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿ (ಎನ್‍ಡಿಆರ್‍ಎಫ್) ನಿಯಮಾನುಸಾರವೇ ಕೊಡಗು ಜಿಲ್ಲೆಗೆ 1190ಕೋಟಿ ನೆರವು ನೀಡಬೇಕಿದೆ. ತಕ್ಷಣವೇ ನೆರವಿಗೆ ಬನ್ನಿ ಎಂದು ಮನವಿ ಮಾಡಲಾಗಿದೆ.
ಇನ್ನು ಬರ ಪರಿಸ್ಥಿತಿಯೂ ರಾಜ್ಯವನ್ನು ಕಾಡುತ್ತಿದೆ. ಒಂದೆಡೆ ಅತಿವೃಷ್ಟಿಯಿದ್ದರೆ, ಮತ್ತೊಂದೆಡೆ ಅನಾವೃಷ್ಟಿಯಿಂದಾಗಿ ಸುಮಾರು 12 ಜಿಲ್ಲೆಗಳಲ್ಲಿ ಮಳೆ ಕೊರತೆ ಇದೆ. ಮುಂಗಾರು ಸಮಪರ್ಕವಾಗಿ ಆಗಿಲ್ಲ. ಬಿತ್ತನೆ ಮಾಡಿದ ಬೆಳೆಗಳು ಒಣಗಿವೆ. ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಒಣಗಿದೆ. ಇದರಿಂದ ರಾಜ್ಯದ ರೈತರು ಸಂಷ್ಟಕ್ಕೀಡಾಗಿದ್ದಾರೆ.
ಅನಾವೃಷ್ಟಿ ಇರುವ ಜಾಗದಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರು, ಆಹಾರ, ಉದ್ಯೋಗ, ಜಾನುವಾರುಗಳಿಗೆ ಮೇವು ಒದಗಿಸುವಂತಹ ಸಮಸ್ಯೆಗಳು ಎದುರಾಗುತ್ತವೆ. ಸದ್ಯಕ್ಕೆ ಸುಮಾರು 5ಸಾವಿರ ಕೋಟಿಯಷ್ಟು ನಷ್ಟವಾಗಿರುವ ಅಂದಾಜಿದೆ. ಇನ್ನೂ ಮುಂಗಾರು ಮಳೆಯ ನಿರೀಕ್ಷೆಯಲ್ಲಿದ್ದು, ನಷ್ಟದ ಕುರಿತು ಅಂದಾಜು ನಡೆಯುತ್ತಿದೆ.
ಮುಂದಿನ ದಿನಗಳಲ್ಲಿ ವಸ್ತು ನಷ್ಟದ ಸಮಗ್ರ ವರದಿಯನ್ನು ಸಲ್ಲಿಸುತ್ತೇವೆ. ತಾತ್ಕಾಲಿಕವಾಗಿ ಬರಪೀಡಿತ ಪ್ರದೇಶಗಳ ಪರಿಹಾರ ಕಾರ್ಯಕ್ಕೂ ಆರ್ಥಿಕ ನೆರವು ನೀಡುವಂತೆ ಮನವಿ ಸಲ್ಲಿಸಲಾಗಿದೆ.
ಬಿಜೆಪಿ ಗೈರು:
ಕೊಡಗು ಜಿಲ್ಲೆಯಲ್ಲಿ ಸಂಭವಿಸಿರುವ ಭಾರೀ ಅನಾಹುತಗಳಿಗೆ ಪುನರ್‍ವಸತಿ ಕಾರ್ಯ ಕೈಗೊಳ್ಳಲು ಕೇಂದ್ರದಿಂದ ನೆರವು ಪಡೆದುಕೊಳ್ಳುವ ಸಲುವಾಗಿಯೇ ಇಂದು ಪ್ರಧಾನಮಂತ್ರಿಯವರನ್ನು ಭೇಟಿ ಮಾಡಲು ಸಮಯ ಕೇಳಲಾಗಿತ್ತು.
ಇಂದು ಬೆಳಗ್ಗೆ 11.15ಕ್ಕೆ ಸಮಯ ನಿಗದಿಯಾಗಿತ್ತು. ಅದರಲ್ಲಿ ಭಾಗವಹಿಸುವಂತೆ ವಿಧಾನಮಂಡಲದ ಸರ್ವಪಕ್ಷಗಳ ಮುಖಂಡರು, ಸಂಸದರು, ಕೇಂದ್ರದ ಸಚಿವರಿಗೂ ನಿಯೋಗಕ್ಕೆ ಮನವಿ ಮಾಡಲಾಗಿತ್ತು. ಆದರೆ ಸರ್ವಪಕ್ಷಗಳ ನಿಯೋಗದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪತ್ರ ಬರೆದಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನಿಯೋಗಕ್ಕೆ ಮಾರ್ಗದರ್ಶನ ನೀಡಿ ಪ್ರಧಾನಿ ಬಳಿಗೆ ಕರೆದೊಯ್ದಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜತೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಸೇರಿದಂತೆ ಮತ್ತಿತರರು ನಿಯೋಗದಲ್ಲಿ ಭಾಗವಹಿಸಿದ್ದರು. ಬಿಜೆಪಿಯ ಸಂಸದರು ನಿಯೋಗದಿಂದ ದೂರ ಉಳಿದಿದ್ದರು.
ಪ್ರಧಾನಿ ಭೇಟಿ ವೇಳೆ ರೈತರ ಸಾಲ ಮನ್ನಾ ಯೋಜನೆಗೆ ಕೇಂದ್ರದಿಂದ ನೆರವು ನೀಡುವಂತೆಯೂ ಮನವಿ ಸಲ್ಲಿಸಲಾಗಿದೆ.