ಯಾವನ್ರಿ ಅವನು ಸುರೇಶ್, ನಾನೇಕೆ ಐಟಿ ಇಲಾಖೆಗೆ ಪತ್ರ ಬರೀಲಿ ಎಂದ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು,ಸೆ.10- ಯಾವನ್ರಿ ಅವನು ಸುರೇಶ್, ನಾನೇಕೆ ಐಟಿ ಇಲಾಖೆಗೆ ಪತ್ರ ಬರೀಲಿ. ಇದೆಲ್ಲ ಅವನೇ ಮಾಡಿರುವ ಸೃಷ್ಟಿ. ಸುಮ್ಮನೆ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾನೆ… ಹೀಗೆ ಸಂಸದ ಡಿ.ಕೆ.ಸುರೇಶ್ ವಿರುದ್ಧ ಏಕವಚನದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಸುರೇಶ್ ವಿರುದ್ಧ ಏಕವಚನದಲ್ಲಿ ಹರಿಹಾಯ್ದು ಯಾವನ್ರಿ ಅವ್ನು ಸುರೇಶ್? ನಾನೇಕೆ ಅವನ ಆರೋಪಕ್ಕೆ ಉತ್ತರ ಕೊಡಲಿ. ಇವೆಲ್ಲ ಅವನದೇ ಕಿತಾಪತಿ. ಈಗ ಬೇರೊಬ್ಬರ ಮೇಲೆ ಕಲ್ಲೆಸೆಯುವ ಪ್ರಯತ್ನ ಮಾಡುತ್ತಿದ್ದಾನೆ ಎಂದು ಕಿಡಿಕಾರಿದರು.
2017ರಲ್ಲಿ ನಾನು ಆದಾಯ ಇಲಾಖೆಗೆ ಡಿ.ಕೆ.ಶಿವಕುಮಾರ್ ವಿರುದ್ಧ ಪತ್ರ ಬರೆದಿದ್ದರೆ ಇಲ್ಲಿಯ ತನಕ ಏಕೆ ಬಹಿರಂಗಪಡಿಸಲಿಲ್ಲ. ಒಂದೂವರೆ ವರ್ಷದಿಂದ ಸುಮ್ಮನಿದ್ದು ಈಗ ಪತ್ರ ಬಿಡುಗಡೆ ಮಾಡಿರುವುದು ಏಕೆ? ಎಂದು ಯಡಿಯೂರಪ್ಪ ಪ್ರಶ್ನಿಸಿದರು.

ಇದು ಡಿ.ಕೆ.ಸುರೇಶ್ ಸೃಷ್ಟಿಸಿರುವ ಕುತಂತ್ರ. ಈಗ ಹಳೆ ಪತ್ರ ಇಟ್ಟುಕೊಂಡು ನಾನು ಪತ್ರ ಬರೆದಿದ್ದೆ ಎಂದು ಆರೋಪ ಮಾಡುತ್ತಿದ್ದಾರೆ. ಇದು ಸಂಪೂರ್ಣವಾಗಿ ನಕಲಿ ಪತ್ರ. ಅವರ ಹೇಳಿಕೆಗೆ ನಾನು ಉತ್ತರ ಕೊಡುವ ಅಗತ್ಯವಿಲ್ಲ ಎಂದರು.
ಹಿಂದೆ ಇದೇ ರೀತಿ ಒಮ್ಮೆ ನಕಲಿ ಪತ್ರವನ್ನು ಸೃಷ್ಟಿಸಿ ನನ್ನ ಮೇಲೆ ಆರೋಪ ಮಾಡಿದ್ದರು. ಸುರೇಶ್‍ಗೆ ಮೊದಲಿನಿಂದಲೂ ಇಂತಹ ಛಾಳಿಯಿದೆ. ಯಾವ ಕಾರಣಕ್ಕಾಗಿ ನಾನು ಡಿ.ಕೆ.ಶಿವಕುಮಾರ್ ವಿರುದ್ಧ ಪತ್ರ ಬರೆಯಲಿ. ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಎಂದು ಆರೋಪಿಸಿದರು.

ನಾನು ಈಗಲೂ ಹೇಳುತ್ತಿದ್ದೇನೆ. ಯಾವುದೇ ಇಲಾಖೆ ಅಧಿಕಾರಿಗಳಿಗೆ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಪತ್ರ ಬರೆದಿಲ್ಲ. ನನ್ನ ಮೇಲಿರುವ ಪ್ರಕರಣಗಳನ್ನ ನೋಡಿಕೊಂಡರೆ ಸಾಕು. ಬೇರೆಯವರ ಉಸಾಬರಿ ನನಗೇಕೆ ಎಂದು ಪ್ರಶ್ನಿಸಿದರು.
ಷಡ್ಯಂತ್ರ:
ತೈಲ ಬೆಲೆ ಏರಿಕೆ ವಿರೋಧಿಸಿ ದೇಶಾದ್ಯಂತ ಇಂದು ಕಾಂಗ್ರೆಸ್ ನೀಡಿರುವ ಬಂದ್ ಸಂಪೂರ್ಣವಾಗಿ ವಿಫಲವಾಗಿದೆ. ಕರ್ನಾಟಕದಲ್ಲೂ ಬಂದ್‍ಗೆ ಹೇಳಿಕೊಳ್ಳುವಂತಹ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಆದರೆ ಕಾಂಗ್ರೆಸ್-ಜೆಡಿಎಸ್ ಅಧಿಕಾರ ದುರುಪಯೋಗಪಡಿಸಿಕೊಂಡು ಕೆಲವು ಕಡೆ ಬಲವಂತವಾಗಿ ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುವ ಕುತಂತ್ರ ಮಾಡುತ್ತಿವೆ. ಇದು ಕೇಂದ್ರದ ವಿರುದ್ಧ ಷಡ್ಯಂತ್ರ ಎಂದು ಕಿಡಿಕಾರಿದರು.
ಪೆಟ್ರೋಲ್, ಡೀಸೆಲ್ ಹೆಚ್ಚಳವಾಗಲು ಕಾರಣವೇನೆಂಬುದು ಜಗತ್ತಿಗೆ ಗೊತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ಸಹಿಸದ ವಿರೋಧ ಪಕ್ಷಗಳು ಈ ರೀತಿ ಬಂದ್‍ಗೆ ಕರೆ ಕೊಡುವ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ಸಾರ್ವಜನಿಕರು ಇದಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ