ಭಾರತ್ ಬಂದ್‍ಗೆ ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ: ಬಹುತೇಕ ಶಾಂತಿಯುತ

 

ಬೆಂಗಳೂರು, ಸೆ.10- ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ನಿರಂತರ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆ ಕೊಟ್ಟಿರುವ ಭಾರತ್ ಬಂದ್‍ಗೆ ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಹುತೇಕ ಶಾಂತಿಯುತವಾಗಿತ್ತು.
ರಾಜಧಾನಿ ಬೆಂಗಳೂರು, ಬೀದರ್‍ನಿಂದ ಕೋಲಾರದವರೆಗೆ, ಬಳ್ಳಾರಿಯಿಂದ ಚಾಮರಾಜನಗರದವರೆಗೆ, ಮಂಗಳೂರಿನಿಂದ ಚಿಕ್ಕಬಳ್ಳಾಪುರದವರೆಗೆ ಬಹುತೇಕ ಎಲ್ಲ ವಹಿವಾಟುಗಳು ಸ್ತಬ್ಧವಾಗಿದ್ದವು. ಶಾಲಾ-ಕಾಲೇಜುಗಳು ತೆರೆದಿರಲಿಲ್ಲ. ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ವರ್ತಕರ ವಹಿವಾಟು ಸ್ಥಗಿತಗೊಂಡಿತ್ತು.

ಜಲಪ್ರಳಯದಿಂದ ಚೇತರಿಸಿಕೊಳ್ಳದ ಕೊಡಗು ಬಂದ್‍ನಿಂದ ಹೊರಗುಳಿದಿತ್ತು. ಅದನ್ನು ಹೊರತುಪಡಿಸಿ ರಾಜ್ಯದ ಹಲವೆಡೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆದವು. ಬೃಹತ್ ರ್ಯಾಲಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಿದವು. ಪೆÇಲೀಸರು, ಪ್ರತಿಭಟನಾಕಾರರ ನಡುವೆ ವಾಗ್ವಾದ, ಅಲ್ಲಲ್ಲಿ ಕಲ್ಲು ತೂರಾಟದ ಘಟನೆಗಳು ಕೂಡ ನಡೆದಿವೆ. ಪೆÇಲೀಸರ ಸಕಾಲಿಕ ಕ್ರಮದಿಂದ ಯಾವುದೇ ಅಹಿತಕರ ಘಟನೆಗಳು ಈವರೆಗೆ ಸಂಭವಿಸಿಲ್ಲ.
ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಆಟೋ, ಟ್ಯಾಕ್ಸಿ, ಆ್ಯಪ್ ಆಧಾರಿತ ಓಲಾ ಕ್ಯಾಬ್‍ಗಳು, ಆಟೋಗಳು ರಸ್ತೆಗಿಳಿಯದ ಪರಿಣಾಮ ನಗರದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಬೆಂಗಳೂರು ಮೆಜೆಸ್ಟಿಕ್ ಬಂದ್‍ನಿಂದ ಸ್ತಬ್ಧವಾಗಿತ್ತು.
ಶಕ್ತಿಕೇಂದ್ರ ವಿಧಾನಸೌಧದ ಮೇಲೆ ಬಂದ್ ಪರಿಣಾಮ ಬೀರಿತ್ತು. ಬಂದ್ ಹಿನ್ನೆಲೆಯಲ್ಲಿ ಬಹುತೇಕ ನೌಕರರು ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ತೈಲಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ರಾಜ್ಯದ ವಿವಿಧೆಡೆ ಹರತಾಳ ನಡೆಸಿದರು.

ಅಂಗಡಿ-ಮುಂಗಟ್ಟುಗಳು, ಹೊಟೇಲ್‍ಗಳನ್ನು ಹಲವೆಡೆ ಪ್ರತಿಭಟನಾಕಾರರು ಬಲವಂತವಾಗಿ ಮುಚ್ಚಿಸಿದರು. ಮಂಗಳೂರು, ಬಳ್ಳಾರಿ, ಚಿತ್ರದುರ್ಗ ಮುಂತಾದೆಡೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲು ಮುಂದಾದ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರನ್ನು ಪೆÇಲೀಸರು ವಶಕ್ಕೆ ಪಡೆದರು.
ಮಂಗಳೂರಿನ ಬೆಂದೂರ್‍ವೆಲ್‍ನಲ್ಲಿ ಬಂದ್‍ಗೆ ಸಹಕರಿಸದ ಹೊಟೇಲ್‍ನವರ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಲು ಮುಂದಾದ ಘಟನೆಯೂ ನಡೆದಿದೆ. ಮೆಡಿಕಲ್ ಶಾಪ್‍ಅನ್ನು ಕೂಡ ಮುಚ್ಚಿಸಲು ಮುಂದಾದಾಗ ಪ್ರತಿಭಟನಾಕಾರರನ್ನು ಪೆÇಲೀಸರು ವಶಕ್ಕೆ ಪಡೆದರು.
ಬೆಳಗಾವಿ: ತೈಲ ದರ ಏರಿಕೆ ಖಂಡಿಸಿ ವಿವಿಧ ಸಂಘಟನೆ ಭಾರತ ಬಂದ್ ಕರೆ ಕೊಟ್ಟ ಹಿನ್ನೆಲೆಯಲ್ಲಿ ಕುಂದಾನಗರಿಯಲ್ಲಿ ಪ್ರತಿಭಟನೆ ಕಾವು ಜೋರಾಗಿ ಪರಿಣಮಿಸಿದೆ.

ನಗರ ಮಹಾಂತೇಶನಗರದಲ್ಲಿ ಕರವೇ ಮುಖಂಡ ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ರಸ್ತೆ ತಡೆದು ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಿ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಕರವೇ ಪ್ರತಿಭಟನೆ ಜತೆಗೆ ರಾಜ್ಯ ಹೆದ್ದಾರಿ ಬಂದ ಮಾಡಿ ಪ್ರತಿಭಟನೆ ಮಾಡುತ್ತಿದ್ದ 30ಕ್ಕೂ ಕಾರ್ಯಕರ್ತರನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ.
ನಾರಯಣಗೌಡ ಬಣದ ಕಾರ್ಯಕರ್ತರು ಗೋಕಾಕ್ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾಗ ನೂರಾರು ಕಾರ್ಯಕರ್ತರನ್ನು ಮುಂಜಾಗ್ರತಾ ಕ್ರಮವಾಗಿ ಪೆÇಲೀಸರು ವಶಕ್ಕೆ ಪಡೆದಿದ್ದಾರೆ.

ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದ್ದು, ನಗರದಲ್ಲಿ ಭಾರೀ ಪೆÇಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ತುಮಕೂರು: ಕೆಎಸ್‍ಆರ್‍ಟಿಸಿ ಬಸ್‍ಗಳು ರಸ್ತೆಗಿಳಿಯದ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿತ್ತು. ಊರುಗಳಿಗೆ ಹೋಗಿದ್ದವರು ತಮ್ಮ ಗ್ರಾಮಗಳಿಗೆ ತೆರಳಲು ಬಂದವರಿಗೆ ಬಸ್‍ಗಳಿಲ್ಲದೆ ನಿಲ್ದಾಣದಲ್ಲೇ ಕಾಲ ಕಳೆಯುತ್ತಿದ್ದರು. ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಸರ್ಕಾರಿ, ಖಾಸಗಿ ಇಲಾಖೆ ಅಧಿಕಾರಿಗಳು ಕಚೇರಿಗೆ ಹೋಗಲು ಪರದಾಡುತ್ತಿದ್ದರು.
ಜಿಲ್ಲೆಯಾದ್ಯಂತ ಪೆÇಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆಂಚಮಾರಯ್ಯ ಹಾಲಪ್ಪ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಕುದುರೆ ಗಾಡಿಗಳೊಂದಿಗೆ ವಿನೂತನ ಪ್ರತಿಭಟನೆ ನಡೆಸಲಾಯಿತು.
ಮೋದಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅವರ ಪ್ರತಿಕೃತಿ ದಹಿಸಲಾಯಿತು. ಇದೇ ಸಂದರ್ಭದಲ್ಲಿ ಪೆÇಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಮೈಸೂರು: ಭಾರತ್ ಬಂದ್‍ಗೆ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಎನ್‍ಆರ್ ಕ್ಷೇತ್ರದಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಆಯುರ್ವೇದಿಕ್ ವೃತ್ತದ ಬಳಿ ಟಯರ್‍ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಳ್ಳುವ ಗಾಡಿಯಲ್ಲಿ ತರಕಾರಿ ಮಾರುವ ಮೂಲಕ ಜೆಡಿಎಸ್ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಹೊಟೇಲ್ ಮೇಲೆ ದಾಳಿ: ಹುಬ್ಬಳ್ಳಿಯಲ್ಲಿ ಬೆಳಗ್ಗೆ ತೆರೆದಿದ್ದ ಸಂತೋಷ್ ಹೊಟೇಲ್ ಮೇಲೆ ಕೈ ಕಾರ್ಯಕರ್ತರು ದಾಳಿ ನಡೆಸಿದರು. ಹೊಟೇಲ್‍ನಲ್ಲಿದ್ದ ಜಗ್, ಪ್ಲೇಟ್‍ಗಳನ್ನು ಹೊರಗೆ ಎಸೆದು ಬಂದ್‍ಗೆ ಸಹಕರಿಸದಿದ್ದಕ್ಕೆ ಘೋಷಣೆಗಳನ್ನು ಕೂಗಿದರು.

ಧಾರವಾಡ, ಬಾಗಲಕೋಟೆ ಮುಂತಾದ ಕಡೆ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ವರ್ತಕರಿಗೆ ಹೂ ನೀಡಿ ಬಂದ್‍ಗೆ ಸಹಕರಿಸುವಂತೆ ಮನವಿ ಮಾಡಿದರು.
ಕೋಲಾರದಲ್ಲಿ ವಿನೂತನ ಪ್ರತಿಭಟನೆ: ಕೋಲಾರದಲ್ಲಿ ರೈತ ಸಂಘಟನೆಯವರು, ಕನ್ನಡಪರ ಸಂಘಟನೆಯವರು ತೈಲ ಬೆಲೆ ಏರಿಕೆ ವಿರೋಧಿಸಿ ರಸ್ತೆಯಲ್ಲೇ ಅಡುಗೆ ಮಾಡಿ ವಿನೂತನವಾಗಿ ಪ್ರತಿಭಟಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಬೆಲೆ ಇಳಿಸುವಂತೆ ಆಗ್ರಹಿಸಿದರು.
ಚಿಕ್ಕಮಗಳೂರಿನಲ್ಲಿ ಯಶಸ್ವಿ: ಚಿಕ್ಕಮಗಳೂರಿನಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಕರೆದ ಭಾರತ್ ಬಂದ್‍ಗೆ ಬಿಜೆಪಿ ಹೊರತುಪಡಿಸಿ ಜೆಡಿಎಸ್, ಬಿಎಸ್‍ಪಿ, ಎಡಪಕ್ಷಗಳು ಕೈ ಜೋಡಿಸಿವೆ. ಇಂದು ಬೆಳಗ್ಗೆಯಿಂದಲೇ ಕಾಂಗ್ರೆಸ್ ಕಾರ್ಯಕರ್ತರು ಬೈಕ್‍ನಲ್ಲಿ ತೆರಳಿ ಅಲ್ಲಲ್ಲಿ ತೆರೆದಿದ್ದ ಅಂಗಡಿಗಳನ್ನು ಮುಚ್ಚಿಸಿದರು.

ಕರಾವಳಿಯಲ್ಲಿ ಕೆಂಡ: ಭಾರತ್ ಬಂದ್‍ಗೆ ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉತ್ತರ ಕರ್ನಾಟಕ, ಮಂಗಳೂರು, ಉಡುಪಿ, ಕುಂದಾಪುರ, ಚಿಕ್ಕಮಗಳೂರು, ಬಂಟ್ವಾಳ, ಸೂಳ್ಯ, ಪುತ್ತೂರು ಸೇರಿದಂತೆ ಹಲವೆಡೆ ಬಂದ್‍ನಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಖಾಸಗಿ ಹಾಗೂ ಸರ್ಕಾರಿ ಬಸ್ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಮಂಗಳೂರಿನ ಜ್ಯೋತಿ ಸರ್ಕಲ್ ಹಾಗೂ ಕುಲಶೇಖರದಲ್ಲಿ ಟಯರ್‍ಗಳಿಗೆ ಬೆಂಕಿ ಹಚ್ಚಿರುವ ಪ್ರತಿಭಟನಾಕಾರರು ಬಲ್ಮಠ ಸಮೀಪ ಬಸ್‍ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಹೆಲ್ಮೆಟ್ ಧರಿಸಿ ಬೈಕ್‍ನಲ್ಲಿ ಬಂದ ದುಷ್ಕರ್ಮಿಯೊಬ್ಬ ಕಬ್ರಿಯ ಶೋಭಾ ರೆಸ್ಟೋರೆಂಟ್ ಮೇಲೆ ಕಲ್ಲು ತೂರಾಟ ಮಾಡಿದ್ದರಿಂದ ಕಿಟಕಿ ಗಾಜು ಪುಡಿಪುಡಿಯಾಗಿದೆ. ಮಂಗಳೂರಿನಲ್ಲಿ ಬಹುತೇಕ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದು, ರಸ್ತೆಗಳು ಬಿಕೋ ಎನ್ನುತ್ತಿದೆ.
ಕೆಎಸ್‍ಆರ್‍ಟಿಸಿ ಬಸ್‍ಗಳಿಗೆ ಕಲ್ಲು ತೂರಾಟ: ಬಂದ್ ಹಿನ್ನೆಲೆಯಲ್ಲಿ ಬಂಟ್ವಾಳದಲ್ಲಿಂದು ಬೆಳಗ್ಗೆ ಎರಡು ಕೆಎಸ್‍ಆರ್‍ಟಿಸಿ ಬಸ್‍ಗಳ ಮೇಲೆ ದುಷ್ಕರ್ಮಿಗಳು ಕಲ್ಲು ಎಸೆದು ಟಯರ್‍ಗಳಿಗೆ ಬೆಂಕಿ ಹಚ್ಚಿ ರಸ್ತೆ ತಡೆ ಮಾಡುವ ಯತ್ನ ನಡೆಸಿದ್ದಾರೆ.

ಈ ಸಂಬಂಧ ಪೆÇಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಬಿಸಿ ರೋಡ್ ಮುಖ್ಯವೃತ್ತದ ಬಳಿ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ಗೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಇದರಿಂದ ಬಸ್ ಮುಂಭಾಗದ ಗಾಜಿಗೆ ಹಾನಿಯಾಗಿದೆ. ಇದಕ್ಕೂ ಮೊದಲು ಮುಂಜಾನೆ 5.30ರ ವೇಳೆಗೆ ಇನ್ನೊಂದು ಬಸ್ ಮೇಲೂ ಕಲ್ಲು ಎಸೆತ ನಡೆದಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು.
ಜಕ್ರಿಬೆಟ್ಟುವಿನಲ್ಲಿ ರಸ್ತೆತಡೆ ಮಾಡುತ್ತಿದ್ದ ಇಬ್ಬರನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೆÇಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತುಂಬೆ ಬಳಿ ಟಯರ್‍ಗೆ ಬೆಂಕಿ ಹಾಕಿ ರಸ್ತೆ ತಡೆ ಮಾಡಿದ್ದನ್ನು ಪೆÇಲೀಸರು ತೆರವುಮಾಡಿದ್ದಾರೆ.

ಬಂದ್ ಹಿನ್ನೆಲೆಯಲ್ಲಿ ಕಲ್ಲಡ್ಕ ಸೇರಿದಂತೆ ಜಿಲ್ಲೆಯ ಪ್ರಮುಖ ನಗರಗಳಲ್ಲಿ ಹೆಚ್ಚುವರಿ ಪೆÇಲೀಸರನ್ನು ನಿಯೋಜನೆ ಮಾಡಲಾಗಿದೆ.
ಬಾಗಲಕೋಟೆ: ಕತ್ತೆ ಮೇಲೆ ಮೋದಿಯ ಭಾವಚಿತ್ರವಿಟ್ಟು ಬಾಯಿ ಬಡಿದುಕೊಂಡು ವಿನೂತನ ಪ್ರತಿಭಟನೆ ಮಾಡಿದ್ದಾರೆ.
ಧಾರವಾಡ, ಹುಬ್ಬಳ್ಳಿಯಲ್ಲಿ ಬಸ್ ಸಂಚಾರ ವಿರಳವಾಗಿದ್ದು, ಬಟ್ಟೆ ಅಂಗಡಿ ಬಂದ್ ಮಾಡದ ಮಾಲೀಕರ ಮೇಲೆ ಪ್ರತಿಭಟನಾಕಾರರು ಹರಿಹಾಯ್ದಿದ್ದು, ಪೆÇಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಗೊಳಿಸಲಾಗಿದೆ.
ಅಂಕೋಲಾದಲ್ಲಿ ಅಂಗಡಿಗಳ ಮೇಲೆ ದಾಳಿ ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ