ನವದೆಹಲಿ: ವಿಪಕ್ಷಗಳು ಕರೆ ನೀಡಿರುವ ಭಾರತ್ ಬಂದ್ ನಿಂದಾಗಿ ಆಂಬುಲೆನ್ಸ್ ವ್ಯವಸ್ಥೆ ಸಿಗದೆ ಮಗುವೊಂದು ಸಾವನ್ನಪ್ಪಿದೆ ಎಂದು ಕೇಂದ್ರ ಸಚಿವ ಮತ್ತು ಹಿರಿಯ ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ.
ಇಂಧನ ಬೆಲೆ ಏರಿಕೆ ವಿರೋಧಿಸಿ ದೇಶಾದ್ಯಂತ ಇಂದು ಭಾರತ್ ಬಂದ್ ಪ್ರತಿಭಟನೆ ನಡೆಸುತ್ತಿದ್ದು, ಎರಡು ವರ್ಷದ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲು ಹೋಗುತ್ತಿದ್ದ ಆಂಬುಲೆನ್ಸ್ ಅನ್ನು ಪ್ರತಿಭಟನಾಕಾರರು ತಡೆದಿದ್ದರಿಂದ ಮಗು ಮಾರ್ಗ ಮಧ್ಯೆ ಮೃತಪಟ್ಟಿದೆ ಎಂಬ ಪ್ರಕರಣಕ್ಕೆ ರವಿಶಂಕರ್ ಅವರು ಇದಕ್ಕೆ ಕಾಂಗ್ರೆಸ್ ಹೊಣೆ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮ್ಮ ಜನರು ಆಂಬುಲೆನ್ಸ್ನ್ನು ತಡೆದು ಮಗುವಿನ ಸಾವಿಗೆ ಕಾರಣರಾಗಿದ್ದಾರೆ. ಮೃತ ಮಗು ನಮ್ಮ ದೇಶದ ಮಗಳು. ಅವಳ ಸಾವಿನ ಹೊಣೆಗಾರಿಕೆಯನ್ನು ನೀವು ತೆಗೆದುಕೊಳ್ಳುತ್ತೀರಾ? ಎಂದು ಕಾಂಗ್ರೆಸ್ನ್ನು ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್ ಬೆಂಬಲಿಗರು ರೈಲು, ಬಸ್ಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಪೆಟ್ರೋಲ್ ಪಂಪ್ಗಳನ್ನು ಸುಟ್ಟು ಹಾಕಲು ಮುಂದಾಗುತ್ತಿದ್ದಾರೆ. ಈ ಮೂಲಕ ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಇಂಧನ ದರ ಏರಿಕೆಯಲ್ಲಿ ಕೇಂದ್ರ ಸರ್ಕಾರದ ಪಾತ್ರವಿಲ್ಲ. ಅಲ್ಲದೇ ದೇಶದ ಜನರು ಭಾರತ್ ಬಂದ್ಗೆ ಬೆಂಬಲ ಸೂಚಿಸಿಲ್ಲ. ಇದರಿಂದ ಕಾಂಗ್ರೆಸ್ಗೆ ಆಘಾತವಾಗಿದೆ ಎಂದ ಅವರು ಭಾರತ್ ಬಂದ್ ವಿಫಲವಾಗಿದೆ ಎಂದರು.
ಈ ನಡುವೆ ಮಗು ಸಾವಿಗೆ ಟ್ರಾಫಿಕ್ ಜಾಂ ಕಾರಣವಲ್ಲ ಎಂದು ಸ್ಪಷ್ಟಪಡಿಸಿರುವ ಜೆಹಾನಾಬಾದ್ ಉಪ ವಿಭಾಗಾಧಿಕಾರಿ ಪಾರಿತೋಷ್ ಕುಮಾರ್, ಬಂದ್ ಅಥವಾ ಟ್ರಾಫಿಕ್ ಜಾಂ ಮಗುವಿನ ಸಾವಿಗೆ ಕಾರಣವಲ್ಲ. ಬದಲಿಗೆ ಸಂಬಂಧಿಸಿದವರು ತಡವಾಗಿ ಮನೆಯಿಂದ ಹೊರಟಿರುವುದು ಮಗುವಿನ ಸಾವಿಗೆ ಕಾರಣ ಎಂದು ತಿಳಿಸಿದ್ದಾರೆ.






