ಭಾರತ್ ಬಂದ್ ಗೆ ವ್ಯಾಪಕ ಬೆಂಬಲ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್‌ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಬಂದ್‍ ದೇಶಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಕರ್ನಾಟಕ, ಆಂಢ್ರಪ್ರದೇಶಮ್ ತಮಿಳುನಾಡು, ಮಧ್ಯಪ್ರದೇಶ, ಬಿಹಾರ, ಮಹಾರಾಷ್ಟ್ರ, ಓಡಿಶಾ, ದೆಹಲಿ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಕೇಂದ್ರದ ಬೆಲೆ ಏರಿಕೆ ನೀತಿ ವಿರುದ್ಧ ಆಕ್ರೋಶಗಳು ಭುಗಿಲೆದ್ದಿವೆ. ಹಲವು ರಾಜ್ಯಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಮಿಶ್ರ ಪ್ರತಿಕ್ರಿಯೆ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ವಾಹನ ಸಂಚಾರ ಎಂದಿನಂತೆಯೇ ಇದೆ. ಕೊಲ್ಕತ್ತಾದಲ್ಲಿ ಹೆಚ್ಚಿನ ಅಂಗಡಿಗಳು ತೆರೆದಿದ್ದು, ಮೆಟ್ರೋ ಸಂಚಾರ ಸ್ಥಗಿತಗೊಂಡಿಲ್ಲ.

ಥಾಣೆಯಲ್ಲಿ ಎಂಎನ್ಎಸ್, ಕಾಂಗ್ರೆಸ್ ಮತ್ತು ಎನ್‌ಸಿಪಿ ಕಾರ್ಯಕರ್ತರು ತೀನ್ ಹತ್ ನಕಾ ಮತ್ತು ಪೂರ್ವ ಎಕ್ಸ್ಪ್ರೆಸಕ್ ಹೈವೇಯಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದಾರೆ.

ಇನ್ನು ಭಾರತ್ ಬಂದ್ ಗೆ ಬೆಂಬಲ ವ್ಯಕ್ತಪಡಿಸಿರುವ ಸಮಾಜವಾದಿ ಪಾರ್ಟಿಯ ಅಖಿಲೇಶ್ ಯಾದವ್, ಇಂಧನ ಬೆಲೆ ಏರಿಕೆ ಪ್ರತಿಭಟಸಿ ವಿಪಕ್ಷಗಳು ಬಂದ್ ನಡೆಸಿದರೂ ಬಿಜೆಪಿ ಸರ್ಕಾರ ಹೆಮ್ಮೆಯಿಂದಿದೆ. ಹೀಗಿರುವಾಗ ಹಣದುಬ್ಬರದಿಂದಲೂ ಅಭಿವೃದ್ಧಿ ಸಾಧ್ಯ ಎಂದು ಆ ಸರ್ಕಾರ ಹೇಳಲೂ ಬಹುದು ಎಂದು ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಸಮಾಜವಾದಿ ಪಕ್ಷದ ಕಾರ್ಯಕರ್ತರು ವಾರಣಸಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ದೆಹಲಿಯ ಆಡಳಿತಾರೂಢ ಪಕ್ಷವಾದ ಆಮ್ ಆದ್ಮಿ ಪಕ್ಷ ನಿನ್ನೆಯವರೆಗೆ ಬಂದ್‍ನಿಂದ ದೂರವುಳಿದಿದ್ದು, ಇಂದು ಪ್ರತಿಭಟನೆಯಲ್ಲಿ ಭಾಗಿಯಾಗಿದೆ.

ಜಾರ್ಖಂಡ್ ನಲ್ಲಿ ಭಾರತ್ ಬಂದ್ ಗೆ ಬೆಂಬಲ ವ್ಯಕ್ತವಾಗಿದ್ದು, ಒತ್ತಾಯಪೂರ್ವಕ ಬಂದ್ ಮಾಡಿಸುತ್ತಿದ್ದ 58 ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಮಧ್ಯಪ್ರದೇಶದಲ್ಲಿಯೂ ಭಾರತ್ ಬಂದ್ ಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಉಜ್ಜೈನಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪೆಟ್ರೋಲ್ ಪಂಪ್ ಮೇಲೆ ದಾಳಿ ನಡೆಸಿದ್ದಾರೆ.

ಮುಂಬೈಯ ಅಂಧೇರಿ ರೈಲು ನಿಲ್ದಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರೈಲು ತಡೆಗೆ ಯತ್ನಿಸಿರುವುದಾಗಿ ತಿಳಿದುಬಂದಿದೆ. ಎಂಎನ್‍ಎಸ್ ಕಾರ್ಯಕರ್ತರು ಪೆಟ್ರೋಲ್ ಬಂಕ್ ಮುಚ್ಚುವಂತೆ ಬಲವಂತ ಮಾಡಿದ್ದಾರೆ ಎಂದು ಪೆಟ್ರೋಲ್ ಪಂಪ್ ಮಾಲೀಕರು ಆರೋಪಿಸಿದ್ದಾರೆ. ಮುಂಬೈಯ ಚೆಂಬೂರ್, ಸಹರ್ ನಲ್ಲಿ ಕೆಲವು ಪೆಟ್ರೋಲ್ ಪಂಪ್‍ಗಳು ಮುಚ್ಚಿವೆ.

ಇಂಧನ ಬೆಲೆ ಏರಿಕೆ ಖಂಡಿಸಿ ಛತ್ತೀಸ್‍ಗಢದ ರಾಯ್ ಪುರ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ