ಪುರುಷರು ಅನಾಗರಿಕತೆಯ ಕಡೆಗೆ ವಾಲುತ್ತಿದ್ದಾರೆ: ಚಿಂತಕ ಡಾ.ಭೆರಮಂಗಲ ರಾಮೇಗೌಡ

Varta Mitra News

ಬೆಂಗಳೂರು , ಸೆ.9- ಸಮಾಜದಲ್ಲಿನ ಪುರುಷರು ಅನಾಗರಿಕತೆಯ ಕಡೆಗೆ ಹೆಚ್ಚು ವಾಲುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆ ಎಂದು ಚಿಂತಕ ಹಾಗೂ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಭೆರಮಂಗಲ ರಾಮೇಗೌಡ ಹೇಳಿದರು.
ಕರ್ನಾಟಕ ಲೇಖಕಿಯರ ಸಂಘ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ ಅಕ್ಕಮಹಾದೇವಿ ಸಭಾಂಗಣದಲ್ಲಿಂದು ಏರ್ಪಡಿಸಿದ್ದ ಎಚ್.ಎಸ್.ಪಾರ್ವತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದಿನ ಜಾಗತೀಕ ಯುಗದಲ್ಲಿ ಮಹಿಳೆಯರಿಗೆ ನಿಜವಾಗಿಯೂ ಸ್ವಾತಂತ್ರ್ಯ ಬಂದಿದೆಯಾ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಮಹಿಳಾ ಸಮಸ್ಯೆಗಳನ್ನು ದೃಷ್ಟಿಕೋನದಲ್ಲಿಟ್ಟು ಕೊಂಡು ಪ್ರಾಚೀನ ಸಾಹಿತ್ಯದಿಂದ ಹಿಡಿದು ನವ್ಯ ಸಾಹಿತ್ಯದವರೆಗೂ ಸ್ತ್ರೀವಾದದ ವಿವಿಧ ಆಯಾಮಗಳನ್ನು ತಮ್ಮ ಕೃತಿಗಳ ಮೂಲಕ ಸಮಾಜಕ್ಕೆ ತೋರಿಸಿಕೊಟ್ಟವರಲ್ಲಿ ಡಾ.ಡಿ.ಮಂಗಳಾ ಪ್ರಿಯದರ್ಶನಿ ಕೂಡ ಒಬ್ಬರು ಎಂದು ಹೇಳಿದರು.

ಸ್ತ್ರೀವಾದ, ಮಹಿಳಾ ಅಧ್ಯಯನ ಹಾಗೂ ಮಹಿಳಾ ಸಾಹಿತ್ಯಕ್ಕೆ ಗಟ್ಟಿ ಬುನಾದಿ ಹಾಕಬೇಕೆಂಬ ದೂರಾಲೋಚನೆ ಇಟ್ಟುಕೊಂಡು ಸ್ತ್ರೀವಾದ ಮತ್ತು ಮಹಿಳಾ ಅಧ್ಯಯನ, ಆಧುನಿಕ ಕನ್ನಡ ಕಾವ್ಯ ಸ್ವರೂಪ , ಬೆಳೆಗೆರೆ ಪಾರ್ವತಮ್ಮ , ಗಾನ ಕೋಗಿಲೆ ಪಂಚಾಕ್ಷರಿ ಗವಾಯಿಗಳು ಮೊದಲಾದ ಹದಿನಾರು ಕೃತಿಗಳನ್ನು ರಚಿಸಿದ್ದಾರೆ. ಅತ್ಯುತ್ತಮ ಮಹಿಳಾ ವಿಮರ್ಶಕಿ ಮೊದಲಾದ ಪ್ರಶಸ್ತಿಗಳು ಇವರಿಗೆ ಸಂದಿವೆ. 38 ವರ್ಷಗಳ ಶೈಕ್ಷಣಿಕ ಅನುಭವದಲ್ಲಿ ಸಾಹಿತ್ಯ ಓದುಗರಿಗೆ ಅದರಲ್ಲೂ ಮಹಿಳೆಯರಿಗೆ ಸ್ತ್ರೀಪರ ಅನುಭಾವಂಶಗಳನ್ನು ತಮ್ಮ ಲೇಖನದ ಮೂಲಕ ಒದಗಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಓದುಗರಿಗೆ ಆಯ್ಕೆಗಳು ಮುಖ್ಯವಾಗಿರುತ್ತದೆ. ಓದುಗರ ಆಯ್ಕೆಗಳಿಗೆ ತಕ್ಕಂತೆ ಕೃತಿಗಳನ್ನು ರಚಿಸುವ ಹಾಗೂ ನವೋದಯ ಕಾವ್ಯ ದೃಷ್ಟಿಕೋನವನ್ನು ವಿಸ್ತಾರಗೊಳಿಸಿರುವುದರಲ್ಲಿ ಮಂಗಳಾ ಪ್ರಿಯದರ್ಶನಿಯವರಿಗೆ ಇದ್ದ ಸಾಹಿತ್ಯ ಪ್ರೇಮವೇ ಸಾಕ್ಷಿ ಎಂದು ವಿಜ್ಞಾನ ಸಾಹಿತಿ ಡಾ.ಟಿ.ಆರ್.ಅನಂತರಾಮು ಹೇಳಿದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ, ರಂಗ ಕಲಾವಿದೆ ಡಾ.ಎಂ.ಎಸ್.ವಿದ್ಯಾ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ