ಪ್ರತಿಯೊಬ್ಬರೂ ಮೊದಲು ಮಾನವರಾಗಲು ಪ್ರಯತ್ನಿಸಬೇಕು: ಸಾಹಿತಿ ಚಂದ್ರಶೇಖರ್ ಪಾಟೀಲ್

 

ಬೆಂಗಳೂರು, ಸೆ.9- ಏನಾದರೂ ಆಗು, ಮೊದಲು ಮಾನವನಾಗು ಎಂಬ ನುಡಿಯಂತೆ ಪ್ರತಿಯೊಬ್ಬರೂ ಮೊದಲು ಮಾನವರಾಗಲು ಪ್ರಯತ್ನಿಸಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹಿರಿಯ ಸಾಹಿತಿ ಚಂದ್ರಶೇಖರ್ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿಂದು ಬುದ್ಧ,ಬಸವ, ಗಾಂಧಿ ಸಾಂಸ್ಕøತಿಕ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಸಾಹಿತಿ ಕೆ.ಎಂ.ರೇವಣ್ಣ -71 ಅಭಿನಂದನೆ ಹಾಗೂ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಕುವೆಂಪು ಅವರ ಬದುಕು ಆದರ್ಶಮಯವಾಗಿದೆ. ಈ ಆದರ್ಶವನ್ನು ನಾವು ಅಳವಡಿಸಿಕೊಂಡರೆ ನಾವು ಕೂಡ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಸಾಧ್ಯ ಎಂದು ಅವರು ಹೇಳಿದರು.
ರೇವಣ್ಣನವರ ಕೃತಿಗಳನ್ನು ಅಧ್ಯಯನ ಮಾಡಿ ಅವರು ಬದುಕಿನಲ್ಲಿ ಅಳವಡಿಸಿಕೊಂಡಿರುವ ಮೌಲ್ಯಗಳನ್ನು ತಿಳಿದುಕೊಳ್ಳಬೇಕು. ಧರ್ಮ, ಜಾತಿ ವೈಷಮ್ಯದಿಂದ ದೇಶ ಹಿನ್ನಡೆ ಸಾಧಿಸಿದ್ದು, ಧರ್ಮ ನಮ್ಮ ಬದುಕಿನಲ್ಲಿ ಶಾಂತಿ ಮತ್ತು ನೆಮ್ಮದಿ ತರಬೇಕೆ ಹೊರತು ಅಶಾಂತಿ ತರಬಾರದು. ಸಾಧನೆಯನ್ನು ಜಾತಿ, ಧರ್ಮದ ಮೂಲದ ಅಳೆಯಬಾರದು. ಆದರೆ ನಮ್ಮ ದೇಶದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರನ್ನು ಜಾತಿಯ ಮೂಲಕ ನೋಡುತ್ತಿರುವ ದೃಷ್ಟಿಕೋನ ಸರಿಯಲ್ಲ ಎಂದು ಹೇಳಿದರು.

ಕವಿಯಾದವರು ಪಕ್ಷಿಯಂತೆ ಇರಬಾರದು, ಹಸುವಿನಂತೆ ಆಗಬೇಕು. ಹಸು ತಾನು ತಿಂದಿದ್ದನ್ನು ಮತ್ತೊಮ್ಮೆ ಮೆಲುಕು ಹಾಕಿ ರಸಪಾಕ ಮಾಡಿ ಹಾಲು ಕೊಡುತ್ತದೆ. ಅದೇ ರೀತಿ ಕವಿಯಾದವರು ವಿಷಯವನ್ನು ಗ್ರಹಿಸಬೇಕು. ಅದನ್ನು ಮನಸ್ಸಿನಲ್ಲಿಯೆ ಮೆಲುಕು ಹಾಕುತ್ತಾ ಪಕ್ವವಾದ ನಂತರ ಅದನ್ನು ಹೊರಹಾಕಬೇಕು ಎಂದು ಹೇಳಿದರು.

ರೇವಣ್ಣ ಅವರು ಓದುಗರಿಗೆ ಅರ್ಥವಾಗುವ ಭಾಷೆಯಲ್ಲಿ ಸರಳ ವಾಕ್ಯಗಳ ಮೂಲಕ ಕೃತಿಗಳನ್ನು ರಚಿಸಿದ್ದಾರೆ ಎಂದರು.
ಹಿರಿಯ ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿ, ರೇವಣ್ಣ ಅವರ ಎರಡು ಕೃತಿಗಳು ಮಹತ್ವವಾದ ತಲೆಬರಹ ಹೊಂದಿವೆ. ಈ ಪುಸ್ತಕಗಳಿಂದ ಅವರ ಮನಸ್ಸಿನ ಭಾವನೆಗಳನ್ನು ತಿಳಿದುಕೊಳ್ಳಬಹುದು. ನಾವು ಇತ್ತೀಚೆಗೆ ದಿನಗಳಲ್ಲಿ ಧಾರ್ಮಿಕ ಉಗ್ರವಾದ, ಸಾಂಸ್ಕøತಿಕ ಭಯೋತ್ಪಾದನೆ ನಡುವೆ ಬದುಕುತ್ತಿದ್ದೇವೆ. ನಾವು ಏನು ಮಾತನಾಡಬೇಕು ಎಂಬುದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆ.ಎಂ.ರೇವಣ್ಣ ಅವರ ಕಾವ್ಯಧರ್ಮ ಮತ್ತು ವಚನಯುಗದ ದಲಿತ ಶರಣರು ಎಂಬ ಕೃತಿಗಳನ್ನು ಲೋಕಾರ್ಪಣೆ ಮಾಡಿ, ರೇವಣ್ಣ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಕರ್ನಾಟಕ ಕೈಗಾರಿಕಾ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ, ಟ್ರಸ್ಟ್ ಅಧ್ಯಕ್ಷ ಎಸ್. ರಾಮಲಿಂಗೇಶ್ವರ, ಉಪನ್ಯಾಸಕರಾದ ಪ್ರತಿಮಾ ನಾಗರಾಜ್ ಮತ್ತಿತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ