ಬೆಂಗಳೂರು, ಸೆ.8- ಸುಮಾರು ಒಂದು ಸಾವಿರ ಕೋಟಿ ರೂ. ಮೌಲ್ಯದ 60 ಎಕರೆ ಸರ್ಕಾರಿ ಜಮೀನನ್ನು ಕಬಳಿಸಿ ಅಕ್ರಮ ಬಡಾವಣೆಗಳನ್ನು ನಿರ್ಮಿಸಿ, ನಿವೇಶನಗಳನ್ನು ಮಾರಾಟ ಮಾಡಿ ಸಾವಿರಾರು ಅಮಾಯಕರಿಗೆ ಶಾಸಕ ಎಸ್.ಟಿ.ಸೋಮಶೇಖರ್ ಬೆಂಬಲಿಗರು ವಂಚಿಸಿದ್ದಾರೆ ಎಂದು ಆರೋಪಿಸಿರುವ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್ ಈ ಸಂಬಂಧ ಎಸಿಬಿ ಮತ್ತು ಬಿಎಂಟಿಎಫ್ನಲ್ಲಿ ದೂರು ದಾಖಲಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಶಾಸಕ ಎಸ್.ಟಿ.ಸೋಮಶೇಖರ್ ಹಿಂಬಾಲಕರಾದ ಹಣ್ಣು ಮತ್ತು ತರಕಾರಿ ಉತ್ಪನ್ನಗಳ ಮಾರಾಟ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಚನ್ನೇನಹಳ್ಳಿ ಗ್ರಾಪಂ ಅಧ್ಯಕ್ಷೆ ರಾಧಿಕಾ ಅವರ ಪತಿ ರಮೇಶ್, ಸುರೇಶ್, ಕಾಂಗ್ರೆಸ್ ಮುಖಂಡರಾದ ರವಿಕುಮಾರ್, ಪುಟ್ಟರಾಜು, ದೊಡ್ಡವೀರಯ್ಯ ಮುಂತಾದವರು ಸೇರಿ ಈ ಬೃಹತ್ ಅಕ್ರಮವೆಸಗಿದ್ದಾರೆ ಎಂಬ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದರು.
ಈ ಸಂಬಂಧ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ತಹಸೀಲ್ದಾರ್. ಕಂದಾಯ ಅಧಿಕಾರಿಗಳಿಗೂ ದೂರು ನೀಡಲಾಗಿದೆ ಎಂದು ಹೇಳಿದರು.
ಯಶವಂತಪುರ ಕ್ಷೇತ್ರದ ತಾವರೆಕೆರೆ ಹೋಬಳಿಯ ಯಲಚಗುಪ್ಪೆ, ಚನ್ನೇನಹಳ್ಳಿ, ವರ್ತೂರು, ನರಸೀಪುರ, ಗಂಗೇನಹಳ್ಳಿ ಮತ್ತು ಪೆದ್ದನಪಾಳ್ಯ ಗ್ರಾಮಗಳಿಗೆ ಸೇರಿರುವ 600 ಎಕರೆಗಳಷ್ಟು ವಿಸ್ತೀರ್ಣದ ಹಸಿರು ವಲಯ ಪ್ರದೇಶದಲ್ಲಿ ಅನಧಿಕೃತ ಬಡಾವಣೆಗಳನ್ನು ನಿರ್ಮಿಸಲಾಗಿದೆ. ವ್ಯವಸಾಯಕ್ಕೆ ಮೀಸಲಾಗಿರುವ ಈ ಜಾಗದಲ್ಲಿ 2013ರಿಂದ 18ರವರೆಗೆ ಅಕ್ರಮ ರೆವಿನ್ಯೂ ಬಡಾವಣೆಗಳು ತಲೆ ಎತ್ತಿದ್ದು, 60ಕ್ಕೂ ಹೆಚ್ಚು ಎಕರೆ ಜಮೀನನ್ನು ಕಬಳಿಸಲಾಗಿದೆ ಎಂದರು.
ಕಾಂಗ್ರೆಸ್ ಮುಖಂಡ ರವಿಕುಮಾರ್ 300 ಎಕರೆಗೂ ಹೆಚ್ಚು ವಿಸ್ತೀರ್ಣದ ಕೃಷಿ ಭೂಮಿಯಲ್ಲಿ ಸಾಯಿ ರೆಸಿಡೆನ್ಸಿ ಎಂಬ ಬಡಾವಣೆ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದರು.
ಅರ್ಕಾವತಿ ನದಿಯ ಅಕ್ಕಪಕ್ಕದ ಬಫರ್ಝೋನ್ ಪ್ರದೇಶಗಳಲ್ಲೂ ಅಕ್ರಮ ಬಡಾವಣೆಯನ್ನು ನಿರ್ಮಿಸಲಾಗಿದೆ. ಹಸಿರು ವಲಯ ಪ್ರದೇಶಗಳಲ್ಲಿ ನಿರ್ಮಾಣವಾಗಿರುವ ಎಲ್ಲಾ ಅನಧಿಕೃತ ಬಡಾವಣೆಗಳನ್ನು ತೆರವುಗೊಳಿಸಬೇಕು. ಕಬಳಿಕೆಯಾಗಿರುವ ಸಾವಿರಾರು ಕೋಟಿ ಮೌಲ್ಯದ ಸರ್ಕಾರಿ ಜಮೀನನ್ನು ವಶಕ್ಕೆ ತೆಗೆದುಕೊಳ್ಳಬೇಕು. ಭೂಕಳ್ಳರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.
ಇವರಿಗೆ ಸಹಕಾರ ನೀಡಿದ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕೈಗೊಳ್ಳಬೇಕು. ಈ ಅಕ್ರಮ ಹಗರಣವನ್ನು ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ರಮೇಶ್ ಒತ್ತಾಯಿಸಿದ್ದಾರೆ.