ಬೆಂಗಳೂರು, ಸೆ.8- ಕರ್ನಾಟಕ ಖಾಸಗಿ ಆಸ್ಪತ್ರೆಗಳು ಮತ್ತು ಶುಶ್ರೂಷತಾ ಸಂಸ್ಥೆಗಳ ಪ್ರಾತಿನಿಧಿಕ ಸಂಸ್ಥೆ- ಫಾನಾ ವತಿಯಿಂದ ನಾಳೆ ಒಂದು ದಿನದ ಕರ್ನಾಟಕ ಆರೋಗ್ಯ ಸಮ್ಮೇಳನವನ್ನು ನಗರದ ಖಾಸಗಿ ಹೋಟೆಲ್ನಲ್ಲಿ ಹಮ್ಮಿಕೊಳ್ಳಲಾಗಿದೆ.
ಸಮ್ಮೇಳನವನ್ನು ಉಪ ಮುಖ್ಯಮಂತ್ರಿಡಾ. ಜಿ. ಪರಮೇಶ್ವರ್ ಉದ್ಘಾಟಿಸಲಿದ್ದು, ಆರೋಗ್ಯ ಸಚಿವ ಶಿವಾನಂದ ಎಸ್. ಪಾಟೀಲ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಮಾಜಿ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಕೆ. ಸುಜಾತ ರಾವ್ ಸಮ್ಮೇಳನ ಮುಖ್ಯ ಉದ್ಘಾಟನಾ ಭಾಷಣ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸಮ್ಮೇಳನದ ಅಂಗವಾಗಿ ಬಹು ಚರ್ಚಿತ ಕೇಂದ್ರ ಸರ್ಕಾರದ ಸಾರ್ವತ್ರಿಕ ಆರೋಗ್ಯ ರಕ್ಷಣಾ ವಿಧೇಯಕ – ಅವಕಾಶಗಳು ಮತ್ತು ಸವಾಲುಗಳು ಹಾಗೂ ಕರ್ನಾಟಕ ಸರ್ಕಾರದ ಕೆಪಿಎಂಇ ಕಾನೂನು ಮತ್ತು ಆರೋಗ್ಯ ವಿಮೆ ಕುರಿತು ಗೋಷ್ಠಿ ಏರ್ಪಡಿಸಲಾಗಿದೆ. ನಾಡಿನ ವೈದ್ಯಕೀಯ ಲೋಕದ ಗಣ್ಯರು ಮತ್ತು ವಿದ್ವಾಂಸರು ವೈದ್ಯಕೀಯ ಸೇವೆಗಳ ಸುಧಾರಿತ ವಿಷಯಗಳ ಕುರಿತು ಅಭಿಪ್ರಾಯ ಮಂಡಿಸಲಾಗುತ್ತದೆ.
ಕೇಂದ್ರ ಸರ್ಕಾರವು ಸಾರ್ವತ್ರಿಕ ವೈದ್ಯಕೀಯ ರಕ್ಷಣಾ ವಿಧೇಯಕವನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದು ಈ ವಿಷಯಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಕ್ಷೇತ್ರದಲ್ಲಿ ದೇಶಾದ್ಯಂತ ಪರ ಹಾಗೂ ಗೊಂದಲಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆಗಳನ್ನು ಗಣನೀಯವಾಗಿ ಸಲ್ಲಿಸುತ್ತಿರುವ ಖಾಸಗಿ ಆಸ್ಪತ್ರೆಗಳು ಹಾಗೂ ಇನ್ನಿತರ ವೈದ್ಯಕೀಯ ಸಂಸ್ಥೆಗಳಿಗೆ ಹಾಗೂ ಸಾರ್ವಜನಿಕರಿಗೆ ಈ ವಿಷಯದ ಕುರಿತು ಹೆಚ್ಚಿನ ಬೆಳಕನ್ನು ಚೆಲ್ಲಲು ಈ ಆರೋಗ್ಯ ಸಮ್ಮೇಳನ ಸಹಕಾರಿಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.