ಬೆಂಗಳೂರು, ಸೆ.8- ಪೆಟ್ರೋಲ್, ಡೀಸೆಲ್, ಗ್ಯಾಸ್ ತೆರಿಗೆ ದರಗಳ ನಿರಂತರ ಹೆಚ್ಚಳದಿಂದ ದೇಶದ ಜನ ಸಂಕಷ್ಟದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅಚ್ಚೇದಿನ್ ಎಂದು ಹೇಳಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಆರೋಪಿಸಿದರು.
ಪೆಟ್ರೋಲ್, ಡೀಸೆಲ್ ದರ ಏರಿಕೆ ವಿರುದ್ಧ ಸೋಮವಾರ ಕಾಂಗ್ರೆಸ್ ಕೈಗೊಂಡಿರುವ ಭಾರತ್ ಬಂದ್ ಅಂಗವಾಗಿ ಬೆಂಗಳೂರು ಕೇಂದ್ರ ಕಾಂಗ್ರೆಸ್ ಪ್ರಚಾರ ಸಮಿತಿ ಕೈಗೊಂಡಿದ್ದ ಜನಜಾಗೃತಿ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಪ್ರಧಾನಿ ಮೋದಿ ಅವರು ಕೇವಲ ಸುಳ್ಳು ಭರವಸೆಗಳನ್ನು ನೀಡಿದರು. ನಿರುದ್ಯೋಗ ನಿವಾರಣೆಯಾಗಲಿಲ್ಲ. ಕಪ್ಪು ಹಣ ವಾಪಸ್ ಬರಲಿಲ್ಲ. ಜನರ ಮೇಲೆ ನಿರಂತರ ತೆರಿಗೆ ಹೆಚ್ಚಳ, ಸಿಲಿಂಡರ್ ಬೆಲೆ ಹೆಚ್ಚಳ ಮಾಡುತ್ತಾ ಬಂದಿದ್ದರಿಂದ ಜನ ಸಂಕಷ್ಟಕ್ಕೀಡಾದರು. ಕೇಂದ್ರದ ದುರಾಡಳಿತದ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಲು ನಿರ್ಧರಿಸಿದೆ. ಇದಕ್ಕೆ ಎಡಪಕ್ಷಗಳು ಸೇರಿದಂತೆ ಎಲ್ಲಾ ಪಕ್ಷಗಳು ಬೆಂಬಲ ನೀಡಿವೆ.
ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಬೆಂಬಲ ನೀಡುವಂತೆ ಮನವಿ ಮಾಡಿದರು.
ದೇಶದ ಹಿತಕ್ಕಾಗಿ ಕೈಗೊಂಡಿರುವ ಈ ಬಂದನ್ನು ಬೆಂಬಲಿಸಿ, ಕೇಂದ್ರದ ಆಡಳಿತವನ್ನು ಕೊನೆಗಾಳಿಸಿ ಎಂದು ಮನವಿ ಮಾಡಿದರು.
ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಕವಿಕಾ ಮಾಜಿ ಅಧ್ಯಕ್ಷ ಎಸ್.ಮನೋಹರ್, ನಗರ ಕೇಂದ್ರ ಪ್ರಚಾರ ಸಮಿತಿ ಅಧ್ಯಕ್ಷ ಜನಾರ್ಧನ್, ಸಲೀಂ, ಆನಂದ್, ಆದಿತ್ಯ ಮುಂತಾದವರು ಭಾಗವಹಿಸಿದ್ದರು.