ಬೆಂಗಳೂರು, ಸೆ.8- ಹೃದ್ರೋಗಗಳು ಬಡವರು, ಶ್ರೀಮಂತರು ಎಂಬ ಭೇದವಿಲ್ಲದೆ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತಿವೆ. ಅದಕ್ಕೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲು ಖಾಸಗಿ ಸಂಸ್ಥೆಗಳು ಮುಂದಾಗಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ಹೃದಯ ಮತ್ತು ಶ್ವಾಸಕೋಶದ ಶಸ್ತ್ರ ಚಿಕಿತ್ಸಕರ ಸಂಸ್ಥೆಯ ಮೂರನೇ ವರ್ಷದ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, 1960ರಲ್ಲಿ ಹೃದಯಾಘಾತಗಳ ಪ್ರಮಾಣ ಶೇ.4ರಷ್ಟಿತ್ತು. ಪ್ರಸ್ತುತ ಶೇ.12ರಷ್ಟಾಗಿದೆ. 2020ರ ಒಳಗೆ ಅದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದರು.
ಸಾವಿನ ಪ್ರಮಾಣದಲ್ಲಿ ಹೃದಯಾಘಾತದ ಕಾರಣಗಳು ಶೇ.25ಕ್ಕೂ ಹೆಚ್ಚಿದೆ. ಮಧುಮೇಹ, ರಕ್ತದೊತ್ತಡದಿಂದಾಗಿ ಹೃದಯ ಸಂಬಂಧಿತ ಕಾಯಿಲೆಗಳು ಅಧಿಕವಾಗಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಈ ಮೊದಲು ವಯಸ್ಸಾದವರಿಗೆ, ಶ್ರೀಮಂತರಿಗೆ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತದೆ ಎಂಬ ನಂಬಿಕೆ ಇತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಬಡವರು, ಸ್ಲಮ್‍ಗಳಲ್ಲಿ ವಾಸಿಸುವವರು ಮತ್ತು ಗ್ರಾಮೀಣ ಭಾಗದ ಜನರಲ್ಲೂ ಹೃದಯ ಸಂಬಂಧಿಸಿದ ಕಾಯಿಲೆಗಳು ಸಾಮಾನ್ಯವಾಗಿವೆ. ಒಟ್ಟು ಹೃದಯಾಘಾತದ ಪ್ರಕರಣಗಳಲ್ಲಿ 40 ವರ್ಷಗಳ ಒಳಗಿನವರ ಪ್ರಮಾಣ ನಾಲ್ಕನೇ ಒಂದು ಭಾಗದಷ್ಟಿದೆ. ಇದು ಅತ್ಯಂತ ಆತಂಕಕಾರಿಯಾಗಿದ್ದು, ಅದೃಷ್ಟವಶಾತ್ ಹೃದ್ರೋಗಗಳಿಗೆ ಉತ್ತಮ ಚಿಕಿತ್ಸೆ ನೀಡುವ ಸಂಸ್ಥೆಗಳೂ ಹೆಚ್ಚಿವೆ ಎಂದರು.
ಇದಕ್ಕೆ ಬೆಂಗಳೂರಿನಲ್ಲಿ ಜಯದೇವ ಸಂಸ್ಥೆ ಮಾದರಿಯಾಗಿದೆ. ಅಪೆÇೀಲೊ ಆಸ್ಪತ್ರೆ ಹಾಗೂ ಇನ್ನೂ ಅನೇಕ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹೃದ್ರೋಗಕ್ಕೆ ಚಿಕಿತ್ಸೆ ನೀಡುತ್ತಿವೆ. ನಾನೂ ಕೂಡ ಕೆಲ ದಿನಗಳ ಹಿಂದೆ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಸ್ಟಂಟ್ ಹಾಕಿಸಿಕೊಂಡಿದ್ದೆ. ಇತ್ತೀಚೆಗೆ ಮತ್ತೊಂದು ಬಾರಿ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಸ್ಟಂಟನ್ನು ಬದಲಾಯಿಸಲಾಗಿದೆ. ನನಗೆ ಚಿಕಿತ್ಸೆ ನೀಡಿದ ಮತ್ತು ಆರೋಗ್ಯ ಮಾರ್ಗದರ್ಶನ ನೀಡುವ ಡಾ.ಸಿ.ಎನ್.ಮಂಜುನಾಥ್, ಡಾ.ಸತ್ಯಕಿ ಪಿ ನಂಬಾಲ, ಡಾ.ವಿವೇಕ್‍ಜವಳಿ ಅವರು ಈ ಕಾರ್ಯಕ್ರಮದಲ್ಲೇ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಸ್ಮರಿಸಿದರು.
ಹೃದಯ ಮತ್ತು ಶ್ವಾಸಕೋಶದ ಶಸ್ತ್ರ ಚಿಕಿತ್ಸಕರ ಸಂಸ್ಥೆಯ ಅಧ್ಯಕ್ಷರಾದ ಡಾ.ಯುಗಲ್ ಮಿಶ್ರ ಅವರು ಅಧ್ಯಕ್ಷೀಯ ಭಾಷಣ ಮಾಡಿ, ಹೃದಯ ಮತ್ತು ಶ್ವಾಸಕೋಶ ಚಿಕಿತ್ಸೆ ಸವಾಲುಗಳು ಮತ್ತು ಅವುಗಳ ಪರಿಹಾರ ಕುರಿತು ವಿವರಣೆ ನೀಡಿದರು.
ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪರೀಕ್ಷೆ ಮತ್ತು ಚಿಕಿತ್ಸೆಯಿಂದ ಜನ ಸಾಮಾನ್ಯರ ಮೇಲೆ ಆಗುತ್ತಿರುವ ಆರ್ಥಿಕ ಒತ್ತಡವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿದೆ ಎಂದುಹೇಳಿದರು.
ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.