ಬೆಂಗಳೂರು,ಸೆ.8-ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು(ಐಟಿ) ದೆಹಲಿಯ ಫ್ಲಾಟ್ವೊಂದರಲ್ಲಿ ದಾಳಿ ನಡೆಸಿದ ವೇಳೆ ಸಿಕ್ಕ ಹವಾಲ ವಹಿವಾಟು ಪ್ರಕರಣಕ್ಕೆ ಸಂಬಂಧಪಟ್ಟಂತೆ ನೀರಾವರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸಚಿವ ಡಿ.ಕೆ.ಶಿವಕುಮಾರ್ ವಿರುದ್ದ ಜಾರಿ ನಿರ್ದೇಶನಾಲಯ ಯಾವುದೇ ಸಂದರ್ಭದಲ್ಲಿ ಎಫ್ಐಆರ್ ದಾಖಲಿಸುವ ಸಾಧ್ಯತೆ ಇದೆ.
ಒಂದು ವೇಳೆ ಇಡಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಿದರೆ ಸಮ್ಮಿಶ್ರ ಸರ್ಕಾರದ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ ದೆಹಲಿಯಿಂದ ಜಾರಿ ನಿರ್ದೇಶನಾಲಯದ ಒಂದು ತಂಡ ಬೆಂಗಳೂರಿಗೆ ಯಾವುದೇ ಸಂದರ್ಭದಲ್ಲಿ ಆಗಮಿಸುವ ಸಾಧ್ಯತೆ ಇದೆ. ಇಂದು ಎಫ್ಐಆರ್ ದಾಖಲಸಿ ಸೋಮವಾರು ಇಲ್ಲವೇ ಬುಧವಾರದೊಳಗೆ ಡಿಕೆಶಿ ಹಾಗೂ ಪ್ರಕರಣ ಇತರೆ ಆರೋಪಿಗಳನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಹವಾಲ ದಂಧೆ ನಡೆಸಿರುವುದು ಸಾಬೀತಾದರೆ ಡಿ.ಕೆ.ಶಿವಕುಮಾರ್ ಕನಿಷ್ಟ 5ರಿಂದ 7 ವರ್ಷ ಶಿಕ್ಷೆ ಅನುಭವಿಸುವ ಸಾಧ್ಯತೆ ಇದೆ. ಇದರ ಸುಳಿವು ಅರಿತಿರುವ ಅವರ ಸಹೋದರ ಹಾಗೂ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಇಂದು ಪತ್ರಿಕಾಗೋಷ್ಠಿಯಲ್ಲಿ ಕೆಲವು ಸ್ಪೋಟಕ ಮಾಹಿತಿಗಳನ್ನು ಹೊರ ಹಾಕಿದ್ದಾರೆ.
ದೆಹಲಿಯ ಫ್ಲಾಟ್ನಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ನಾಲ್ಕು ಕೋಟಿ ಅಕ್ರಮ ಹಣ ಪತ್ತೆಯಾಗಿತ್ತು. ತನಿಖೆ ನಂತರ ಡಿಕೆಶಿ ಮತ್ತು ಇತರರ ಹವಾಲ ವಹಿವಾಟು ನಡೆಸಿರುವುದನ್ನು ತನಿಖಾಧಿಕಾರಿಗಳು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಇದನ್ನೇ ಆಧಾರವಾಗಿಟ್ಟುಕೊಂಡಿರುವ ಇಡಿ ಅಧಿಕಾರಿಗಳು ಎಫ್ಐಆರ್ ದಾಖಲಿಸಿ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲಿದ್ದಾರೆ. ಕೇಂದ್ರ ಸರ್ಕಾರ ಜಾರಿ ಮಾಡಿರುವ ನೂತನ ಕಾಯ್ದೆ ಪ್ರಕಾರ ಹವಾಲ ದಂಧೆ ನಡೆಸುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ.
ಇದು ಡಿ.ಕೆ ಹಾಗೂ ಇತರೆ ಆರೋಪಿಗಳಿಗೆ ಮುಳುವಾಗುವ ಸಾಧ್ಯತೆ ಇದೆ.