ತುಮಕೂರು: ಪ್ರತಿ ತಾಲೂಕಿನಲ್ಲಿ ದಿನಚರಿ ನಿರ್ವಹಣೆ ಮಾಡುವುದರ ಜೊತೆಗೆ ನಾಲ್ಕು ತಿಂಗಳಿಗೊಮ್ಮೆಯಾದರೂ ಅಧಿಕಾರಿಗಳು ಆಯಾ ತಾಲೂಕಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಬೇಕು. ಇಲ್ಲದಿದ್ದರೆ ಅಂಥ ಅಧಿಕಾರಿಗಳನ್ನು ಇಲ್ಲಿ ಮುಂದುವರೆಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಎಚ್ಚರಿಕೆ ನೀಡಿದರು.
ತುಮಕೂರು ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ತುಮಕೂರು ಜಿಲ್ಲೆಯಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಕುಟುಂಬಕ್ಕೆ ಪರಿಹಾರ ಹಣ ನಿಧಾನ ಗತಿಯಾಗುತ್ತಿರುವ ಬಗ್ಗೆ ಪರಮೇಶ್ವರ್ ಅವರು ಆಕ್ರೋಶ ವ್ಯಕ್ತಪಡಿಸಿದರು ಸರಕಾರ ಕೊಟ್ಟರೂ ನೀವೇಕೆ ತಡಾ ಮಾಡುತ್ತಿದ್ದೀರಾ? ಸರಕಾರ ಸುಮ್ಮನೆ ಅವರಿಗೆ ಪರಿಹಾರ ಘೋಷಿಸಿರುವುದಿಲ್ಲ. ಅವರ ಕುಟುಂಬಕ್ಕೆ ಕೂಡಲೇ ನೆರವಾಗುವ ದೃಷ್ಟಿಯಿಂದ ಪರಿಹಾರ ನೀಡಿದರೆ ನಿಮ್ಮ ಬೇಜವಾಬ್ದಾರಿಯಿಂದ ಸರಕಾರಕ್ಕೆ ಕೆಟ್ಟ ಹೆಸರು ತರುತ್ತಿದ್ದೀರಾ ಎಂದು ಗದರಿದರು.
ಅರಣ್ಯ ಇಲಾಖೆಯಿಂದ ತುಮಕೂರಿನಲ್ಲಿ ವರ್ಷಕ್ಕೆ 11 ಲಕ್ಷ ಸಸಿ ನೆಡಲಾಗಿದೆ ಎಂದು ಅಧಿಕಾರಿಗಳ ಉತ್ತರಕ್ಕೆ ಹೌಹಾರಿದ ಪರಮೇಶ್ವರ್, ಹಾಗಿದ್ದರೆ ಈ ಒಳಗಾಗಿ ತುಮಕೂರು ದೊಡ್ಡ ಕಾಡಾಗಬೇಕಿತ್ತಲ್ಲವೇ? ಎಂದು ಪ್ರಶ್ನಿಸಿದರು. ಈ ಬಗ್ಗೆ ಮರುಪ್ರಶ್ನೆ ಕೇಳಿದ್ದಕ್ಕೆ ಅಧಿಕಾರಿಗಳು ಉತ್ತರಿಸಲು ತಡಬಡಾಯಿಸಿದರು.
ಇನ್ನು, ತುಮಕೂರಿನಲ್ಲಿ ಇರುವ ಕುಟುಂಬಗಳ ಸಂಖ್ಯೆಗಿಂತ ಬಿಪಿಎಲ್ ವಿತರಣೆ ಮಾಡಿರುವ ಕುಟುಂಬಗಳ ಸಂಖ್ಯಯೇ ಹೆಚ್ಚಿರುವುದಕ್ಕೆ ಅಧಿಕಾರಿಯನ್ನು ತರಾಟೆ ತೆಗೆದುಕೊಂಡರು. ತುಮಕೂರುನಲ್ಲಿ ಶೇ.100 ರಷ್ಟು ಜನರು ಕಡುಬಡವರೇ ಇದ್ದಾರಾ? ಯಾವ ಮಾನದಂಡದಲ್ಲಿ ಈ ರೀತಿ ಬೋಗಸ್ ಕಾರ್ಡ್ ವಿತರಿಸುತ್ತಿದ್ದೀರಾ ಎಂದು ಗುಡುಗಿದರು. ಈ ಕೂಡಲೇ ಮರು ಸರ್ವೆ ನಡೆಸಿ ಸರಿಯಾದ ಮಾಹಿತಿ ಸಂಗ್ರಹಿಸಿ ಎಂದು ಸೂಚನೆ ನೀಡಿದರು.
ಬಹುತೇಕ ಅಧಿಕಾರಿಗಳು ನೀಡಿದ ಮಾಹಿತಿ ತಪ್ಪಾಗಿದ್ದರಿಂದ ಪರಮೇಶ್ವರ್ ಅವರು ಆಕ್ರೋಶಗೊಂಡರು. ಕೆಲ ಅಧಿಕಾರಿಗಳ ಬೇಜವಾಬ್ದಾರಿ ಉತ್ತರಕ್ಕೂ ಸಿಟ್ಟಿಗೆದ್ದ ಅವರು, ಅಧಿಕಾರಿಗಳಿಗೆ ಬೆವರಿಳಿಸಿದರು.
ಜಿಲ್ಲಾಧಿಕಾರಿ ಹಾಗೂ ನೋಡೆಲ್ ಅಧಿಕಾರಿಗಳು ನಿಮ್ಮ ಇಲಾಖೆಯ ಬಗ್ಗೆಯೇ ಗೊಂದಲದಲ್ಲಿ ಬರಬೇಡಿ. ಮೊದಲು ನಿಮ್ಮ ಇಲಾಖೆಯ ಸಂಪೂರ್ಣ ಮಾಹಿತಿ ತಿಳಿದು ನಂತರ ಸಭೆಗೆ ಬನ್ನಿ. ಮುಂದಿನ ಸಭೆಯಲ್ಲಿ ತಪ್ಪು ಮಾಹಿತಿ ಕೊಟ್ಟರೆ ಸುಮ್ಮನಿರುವುದಿಲ್ಲ. ಇರುವ ಒಂದು ಇಲಾಖೆಯನ್ನೂ ಸಮರ್ಪಕವಾಗಿ ನಿರ್ವಹಣೆ ಮಾಡಲು ಆಗಿಲ್ಲವೆಂದರೆ ಹೇಗೆ? ಮುಂದಿನ ಸಭೆಯಲ್ಲೂ ಹೀಗೆ ಮುಂದುವರೆದರೆ ಕೂಡಲೇ ಅಮಾನತು ಮಾಡುವೆ. ಯೋಜನೆ ಅನುಷ್ಠಾನದಲ್ಲೂ ಅಧಿಕಾರಿಗಳು ತೀರ ಹಿಂದುಳಿದಿದ್ದೀರ. ಇದು ಮುಂದುವರೆದರೆ ಕ್ರಮ ಕೈಗೊಳ್ಳುವೆ ಎಂದು ಎಚ್ಚರಿಸಿದರು.
ಪ್ರತಿ ಜಿಲ್ಲಾ ಅಧಿಕಾರಿಗಳು ತಮ್ಮ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಬೇಕು. ಜನರ ಸಮಸ್ಯೆ ಆಲಿಸಬೇಕು ಎಂದು ಸೂಚನೆ ನೀಡಿದರು.
ಸಭೆಗು ಮುನ್ನ, ಕೊಡಗು ನೆರೆ ನಿರಾಶ್ರುತರಿಗೆ ಗೊರವನಹಳ್ಳಿ ದೇವಸ್ಥಾನದ ವತಿಯಿಂದ ೧೦ ಸಾವಿರ ಸೀರೆಗಳನ್ನೊತ್ತ ಟ್ರಕ್‌ಗೆ ಚಾಲನೆ ನೀಡಿದರು.