ಬೆಂಗಳೂರು: ಐಟಿ ದಾಳಿ, ದೆಹಲಿ ಫ್ಲ್ಯಾಟ್ನಲ್ಲಿ ಹಣ ಪತ್ತೆ ಪ್ರಕರಣದಲ್ಲಿ ಸಚಿವ ಡಿ ಕೆ ಶಿವಕುಮಾರ್ ವಿರುದ್ಧ ಎಫ್ ಐ ಆರ್ ದಾಖಲಿಸಲು ಮುಂದಾಗಿರುವ ಜಾರಿ ನಿರ್ದೇಶನಾಲಯಯದ ಅಧಿಕಾರಿಗಳು ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದು, ಕಾನೂನಿನ ಕ್ರಮದ ಬಗ್ಗೆ ರಾಜ್ಯಪಾಲರನ್ನು ಭೇಟಿಮಾಡಿ ಮನವಿಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಸಚಿವ ಡಿ ಕೆ ಶಿವಕುಮಾರ್ ಬಂಧನ ಭೀತಿಯಲ್ಲಿದ್ದಾರೆ. ಈ ನಡುವೆ ಸಚಿವರ ಸಹೋದರ, ಸಂಸದ ಡಿ.ಕೆ.ಸುರೇಶ್ ರಾಜ್ಯ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ ಕೆ ಸುರೇಶ್, ಸಿಬಿಐ, ಇಡಿ ಮತ್ತು ಆದಾಯ ತೆರಿಗೆ ಇಲಾಖೆಯನ್ನ ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳತ್ತಿದೆ. ನಾವು ಯಾವುದಕ್ಕೂ ಹೆದರುವುದಿಲ್ಲ. ನಾವು ಈಗಾಗಲೇ ಹಿರಿಯ ಅಧಿಕಾರಿಗಳನ್ನ ಮತ್ತು ವಕೀಲರನ್ನು ಭೇಟಿ ಮಾಡಿ ಸತ್ಯಾಸತ್ಯತೆಯ ಬಗ್ಗೆ ಚರ್ಚೆ ಮಾಡಿದ್ದೇವೆ. ನಾವು ಯಾವುದೇ ತಪ್ಪು ಮಾಡಿಲ್ಲ. ನಮ್ಮ ಬಳಿ ಇರುವ ಎಲ್ಲ ಲೆಕ್ಕಗಳಿಗೆ ಐಟಿಗೆ ಉತ್ತರ ಕೊಟ್ಟಿದ್ದೇವೆ ಎಂದು ಹೇಳಿದರು.
ಸದ್ಯಕ್ಕೆ ಯಾವುದೇ ನೋಟಿಸ್ ಬಂದಿಲ್ಲ. ಕಾನೂನು, ಸಂವಿಧಾನದ ಮೇಲೆ ಗೌರವವಿದೆ. ಭಯದಿಂದ ಈ ಸುದ್ದಿಗೋಷ್ಠಿ ಮಾಡುತ್ತಿಲ್ಲ. ಬಿಜೆಪಿ ಅವರ ದುರಾಡಳಿತ, ಅವರು ಯಾವ ರೀತಿ ವಿರೋಧ ಪಕ್ಷದ ಮೇಲೆ ಅಧಿಕಾರ ದುರುಪಯೋಗ ಮಾಡುತ್ತಿದ್ದಾರೆ ಎಂಬುದನ್ನು ಈ ರಾಜ್ಯದ ಜನರಿಗೆ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇನೆ ಎಂದರು.
ಕೇಂದ್ರದ ಅಧೀನ ಸಂಸ್ಥೆಗಳು ಮೋರ್ಚಾಗಳ ರೀತಿ ಕೆಲಸ ಮಾಡುತ್ತಿವೆ. ಸಿಬಿಐ ಮೋರ್ಚಾ, ಐಟಿ ಮೋರ್ಚಾ, ಇ.ಡಿ. ಮೋರ್ಚಾ ಎಂಬಂತಾಗಿದೆ ಎಂದು ಆರೋಪಿಸಿದರು. ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಈ ಸರ್ಕಾರಕ್ಕೆ ಡಿಕೆಶಿ ಒತ್ತಾಸೆಯಾಗಿ ನಿಂತಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಗುರಿಯಾಗಿಸಿಕೊಂಡು ಈ ರೀತಿಯ ತಂತ್ರ ಹೆಣೆಯಲಾಗುತ್ತಿದೆ. ಗುಜರಾತ್ ಶಾಸಕರಿಗೆ ರಕ್ಷಣೆ ನೀಡಿದ್ದರ ಸೇಡು ತೀರಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಗುಡುಗಿದರು.
ವರ್ಷದ ಹಿಂದೆ ಡಿಕೆಶಿ ಮನೆ ಮೇಲೆ ನಡೆದ ಐಟಿ ದಾಳಿ ನಂತರ ಅವರ ವಿರುದ್ಧ 4 ಪ್ರಾಸಿಕ್ಯೂಷನ್ ಪ್ರಕರಣಗಳನ್ನು ಹಾಕಲಾಗಿದೆ. ಆದರೆ, ಅದ್ಯಾವುದರಲ್ಲೂ ಅವರನ್ನು ಬಂಧಿಸಲಾಗಲಿಲ್ಲ. ಈಗ ಪ್ರಕರಣವನ್ನು ಇಡಿಗೆ ಶಿಫಾರಸು ಮಾಡಲಾಗಿದೆ. ಡಿಕೆಶಿ ಫೆರಾ ಉಲ್ಲಂಘನೆ, ಫೆಮಾ ಉಲ್ಲಂಘನೆ ಮಾಡಿದ್ದರೆ ಪ್ರಕರಣವನ್ನು ಇ.ಡಿ.ಗೆ ನೀಡಬಹುದುದಿತ್ತು. ಆದರೆ, ಅದ್ಯಾವುದೂ ಇಲ್ಲದೆಯೇ ಇ.ಡಿ.ಗೆ ನೀಡಲಾಗಿದೆ ಎಂದರು.
ಈ ದೇಶದ ವಿವಿಧ ಪಕ್ಷದ ನಾಯಕರ ವಿರುದ್ಧ ಅದರಲ್ಲೂ, ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿ, ಅರವಿಂದ ಕೇಜ್ರಿವಾಲ್, ವೀರಭದ್ರ ಸಿಂಗ್, ಭೂಪೇಂದ್ರ ಹೂಡ ಅವರನ್ನೆಲ್ಲ ಅಧೀನ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಬಗ್ಗುಬಡಿಯುವ, ಪಕ್ಷದತ್ತ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ದ್ವೇಷದ ರಾಜಕಾರಣ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಬೆಳೆದಿದೆ ಎಂದೂ ಸುರೇಶ್ ಆರೋಪಿಸಿದರು.