ಹೊನ್ನಾವರ: ರಜಾದಿನ ಮತ್ತು ಹಬ್ಬದ ಸಂದರ್ಭಗಳಲ್ಲಿ ಏರಿಕೆಯಾಗುತ್ತಿರುವ ಖಾಸಗಿ ಬಸ್ ಪ್ರಯಾಣ ದರವನ್ನು ನಿಯಂತ್ರಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಉತ್ತರ ಕನ್ನಡ ಜಿಲ್ಲೆಯ ನನ್ನ ಹೊನ್ನಾವರ ಸಂಘಟನೆ ಹೈಕೋರ್ಟ್ ಗೆ ಮನವಿ ಮಾಡಿದೆ.
ಹಬ್ಬ, ರಾಷ್ಟ್ರೀಯ ದಿನಾಚರಣೆ, ಸರಣಿ ರಜೆ, ಮಕ್ಕಳ ಬೇಸಿಗೆ ರಜೆ, ವಾರಾಂತ್ಯದಲ್ಲಿ ಬರುವ ಸಾರ್ವತ್ರಿಕ ಚುನಾವಣೆ, ಜಾತ್ರೆ ಹಾಗೂ ಸಾಮುದಾಯಿಕ ಅಗತ್ಯ ಸಂದರ್ಭಗಳಲ್ಲಿ, ಖಾಸಗಿ ಬಸ್ ಸಂಸ್ಥೆಗಳು 100 -200% ಪ್ರಯಾಣ ದರವನ್ನು ಹೆಚ್ಚಿಸುವುದು ವಾಡಿಕೆಯಾಗಿದ್ದು, ಅಘೋಷಿತ ನಿಯಮದಂತೆ ಪಾಲಿಸಲಾಗುತ್ತಿದೆ. ಈ ಕುರಿತು ಹೈಕೋರ್ಟ್ ಗಮನಹರಿಸಿ, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವಂತೆ ನನ್ನ ಹೊನ್ನಾವರ ಸಂಘಟನೆಯ ರಾಜೇಶ್ ಶೇಟ್ ಒತ್ತಾಯಿಸಿದ್ದಾರೆ.
ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮೈಸೂರು ಸೇರಿದಂತೆ ರಾಜ್ಯದ ಬಹುತೇಕ ಪ್ರಮುಖ ನಗರಗಳಲ್ಲಿಯೂ ಇಂದು ಖಾಸಗಿ ಬಸ್ ಗಳ ಹಗಲು ದರೋಡೆ ರಾಜಾರೋಷವಾಗಿ ಸಾಗುತ್ತಿದೆ. ಇದರಿಂದ ರಾಜ್ಯದ ನಾನಾ ಭಾಗದಿಂದ ಬಂದ ಉದ್ಯೋಗಾದಾರಿತ ವಲಸಿಗರು, ವಿದ್ಯಾರ್ಥಿಗಳು, ಕಾರ್ಮಿಕರು, ಖಾಸಗಿ ಮತ್ತು ಸರ್ಕಾರಿ ನೌಕರರು, ಅಸಂಘಟಿತ ವಲಯದ ದಿನಗೂಲಿ ಕಾರ್ಮಿಕರು ಹಾಗೂ ಅವರ ಅವಲಂಬಿತ ಕುಟುಂಬಗಳು ಹಬ್ಬ-ಹರಿದಿನಗಳಲ್ಲಿ, ರಜಾದಿನಗಳಲ್ಲಿ ಊರಿಗೆ ಹೋಗಲೂ ಯೋಚಿಸುವಂತಾಗಿದೆ.
ರಜಾದಿನಗಳನ್ನು ಖಾಸಗಿ ಬಸ್ ನವರು, ಸಮಯ ಸಾಧಕವಾಗಿ ಬಳಸಿ, ಪ್ರಯಾಣಿಕರಿಂದ ಕಾನೂನು ಬಾಹಿರವಾಗಿ ಬಸ್ ಪ್ರಯಾಣ ದರದ ಮೂಲಕ ಹೆಚ್ಚಿಗೆ ಹಣ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದ ಜನರ ಹಿತಾಸಕ್ತಿಗಾಗಿ ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಒದಗಿಸಿಕೊಡುವಂತೆ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ದಿನೆಶ್ ಮಹೇಶ್ವರಿ ಅವರಿಗೆ ಪತ್ರದ ಮೂಲಕ ರಾಜೇಶ್ ಮನವಿ ಮಾಡಿದ್ದಾರೆ.