ಬೆಂಗಳೂರು, ಸೆ.7- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸುವ ನಿವೇಶನ ಮತ್ತು ಮನೆಗಳನ್ನು ಮಾರಾಟ ಮಾಡಲು ನಿಯಮಾವಳಿಗಳನ್ನು ಸಡಿಲಗೊಳಿಸಲು ಮತ್ತು ಮುಂದಿನ ಎಲ್ಲಾ ಯೋಜನೆಗಳನ್ನು ಸಾರ್ವಜನಿಕ ಸಹಭಾಗಿತ್ವ(ಪಿಪಿಪಿ )ದಲ್ಲಿ ಕೈಗೆತ್ತಿಕೊಳ್ಳುವ ಕುರಿತು ಚರ್ಚೆ ನಡೆದಿದೆ.
ಬಿಡಿಎ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ನೇತೃತ್ವದಲ್ಲಿಂದು ನಡೆದ ಸಭೆಯಲ್ಲಿ ಬಿಡಿಎ ಆರ್ಥಿಕ ಸಂಕಷ್ಟದ ಬಗ್ಗೆ ಗಂಭೀರ ಚರ್ಚೆ ನಡೆಸಲಾಯಿತು.
2016-17ರಿಂದ ಈವರೆಗೂ ಬಿಡಿಎ ಯಾವುದೇ ಲಾಭ ಮಾಡಿಲ್ಲ. ನಿರ್ಮಿಸಲಾದ ಅಪಾರ್ಟ್ಮೆಂಟ್ಗಳು ಮಾರಾಟವಾಗದೆ ಬಾಕಿ ಉಳಿದಿವೆ. ಇನ್ನು ನಿವೇಶನಗಳು ಕೂಡ ಸರಿಯಾಗಿ ವಿಲೇವಾರಿ ಆಗುತ್ತಿಲ್ಲ. ಬೆಲೆ ಹೆಚ್ಚು ಎಂಬ ಕಾರಣಕ್ಕಾಗಿ ಬಹಳಷ್ಟು ನಿವೇಶನಗಳನ್ನು ಅರ್ಜಿದಾರರು ವಾಪಸ್ ಕೊಟ್ಟಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದರು.
ಬಿಡಿಎ ಸರ್ಕಾರದ ಅಧಿಕೃತ ಸಂಸ್ಥೆ. ಇಲ್ಲಿ ಮಾರಾಟವಾಗುವ ನಿವೇಶನ ಮತ್ತು ಅಪಾರ್ಟ್ಮೆಂಟ್ಗಳಿಗೆ ಕಾನೂನಿನ ಖಾತ್ರಿ ಇದೆ. ಆದರೆ, ಖಾಸಗಿ ಸಂಸ್ಥೆಗಳು ಮಾರಾಟ ಮಾಡುವ ನಿವೇಶನ ಮತ್ತು ಅಪಾರ್ಟ್ಮೆಂಟ್ಗಳಲ್ಲಿ ವಂಚನೆಯಾಗುವ ಸಾಧ್ಯತೆ ಹೆಚ್ಚು. ಸಾರ್ವಜನಿಕರಲ್ಲಿ ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕೆಂದು ಪರಮೇಶ್ವರ್ ಸಲಹೆ ನೀಡಿದರು.
ಬಿಡಿಎ ವತಿಯಿಂದ ಕೈಗೆತ್ತಿಕೊಳ್ಳಲಾಗುವ ಯೋಜನೆಗಳು ಮುಗಿಯಲು ವಿಳಂಬವಾಗುತ್ತಿವೆ. ಇದರಿಂದ ನಿರ್ಮಾಣ ವೆಚ್ಚ ಹೆಚ್ಚಾಗಿ ದುಬಾರಿ ಬೆಲೆ ನಿಗದಿ ಮಾಡಬೇಕಾಗುತ್ತದೆ. ಹಾಗಾಗಿ ಮುಂದಿನ ಎಲ್ಲಾ ಯೋಜನೆಗಳನ್ನು ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಕೈಗೆತ್ತಿಕೊಂಡರೆ ಕಾಲ ಮಿತಿಯಲ್ಲಿ ಪೂರ್ಣಗೊಳ್ಳುತ್ತದೆ. ಸಾರ್ವಜನಿಕರಿಗೂ ಹೊರೆಯಾಗದಂತಹ ದರ ನಿಗದಿ ಪಡಿಸಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ಸಲಹೆ ನೀಡಿದರು.
ಬಿಡಿಎ ಪ್ಲಾಟ್ಗಳನ್ನು ಖರೀದಿ ಮಾಡಲು ಕಡಿಮೆ ಆದಾಯ ಮಿತಿಯನ್ನು ನಿಗದಿ ಮಾಡಲಾಗಿದೆ. ಕನಿಷ್ಠ 10 ವರ್ಷ ನಗರದಲ್ಲಿ ವಾಸವಿರಬೇಕು. ಬಿಡಿಎಯಿಂದ ಈ ಮೊದಲು ಯಾವುದೇ ರೀತಿಯ ಸ್ವತ್ತನ್ನು ಪಡೆದಿರಬಾರದು ಎಂಬೆಲ್ಲಾ ನಿಯಮಗಳಿವೆ. ಇವುಗಳಿಂದಾಗಿ ಬಹಳಷ್ಟು ಮಂದಿ ಅರ್ಜಿ ಸಲ್ಲಿಸುವ ಅರ್ಹತೆ ಕಳೆದುಕೊಳ್ಳುತ್ತಾರೆ. ಬಿಡಿಎ ಪ್ಲಾಟ್ಗಳು ಮಾರಾಟವಾಗದೇ ಉಳಿಯಲು ಇದು ಒಂದು ಕಾರಣ ಎಂದು ಅಧಿಕಾರಿಗಳು ವಿವರಿಸಿದರು. ಅವುಗಳನ್ನು ಸಡಿಲ ಮಾಡಲು ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.