ಬೆಂಗಳೂರು, ಸೆ.7- ರಾಜ್ಯಾದ್ಯಂತ ಕಳೆದ ಒಂದು ವಾರದಿಂದ ತೀವ್ರ ಕುತೂಹಲ ಕೆರಳಿಸಿದ್ದ, ಶಾಸಕಿ ಲಕ್ಷ್ಮೀಹೆಬ್ಬಾಳ್ಕರ್, ಜಾರಕಿಹೊಳಿ ಸಹೋದರರ ನಡುವೆ ಪ್ರತಿಷ್ಠೆಯ ಕಣವಾಗಿದ್ದ ಬೆಳಗಾವಿ ಗ್ರಾಮೀಣ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಹೈಕಮಾಂಡ್ ಮಧ್ಯ ಪ್ರವೇಶದ ಹಿನ್ನೆಲೆಯಲ್ಲಿ ಸುಖಾಂತ್ಯವಾಗಿದೆ. ಲಕ್ಷ್ಮೀಹೆಬ್ಬಾಳ್ಕರ್ ಬಣದ ಕೈ ಮೇಲಾಗಿದ್ದು, ಜಾರಕಿಹೊಳಿ ಸೋದರರಿಗೆ ತೀವ್ರ ಹಿನ್ನಡೆಯಾಗಿದೆ.
ಲಕ್ಷ್ಮೀಹೆಬ್ಬಾಳ್ಕರ್ ಬಣದ ಮಹದೇವ್‍ಪಾಟೀಲ್ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಬಾಪುಸಾಹೇಬ್ ಜಮಾದಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸತೀಶ್ ಜಾರಕಿಹೊಳಿ ಬಣದ ಯಾವೊಬ್ಬ ಸದಸ್ಯರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಘೋಷಿಸಿದರು. 14 ಸದಸ್ಯರ ಬಲದ ನಿರ್ದೇಶಕರಲ್ಲಿ ಲಕ್ಷ್ಮೀಹೆಬ್ಬಾಳ್ಕರ್ ಬಣದಲ್ಲಿ 9 ಜನ ಗುರುತಿಸಿಕೊಂಡಿದ್ದರು. ಉಳಿದ ಐವರು ಸತೀಶ್ ಜಾರಕಿಹೊಳಿ ಬಣದಲ್ಲಿದ್ದರು.
ಕಳೆದ 18 ವರ್ಷಗಳಿಂದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆಯುತ್ತಾ ಬಂದಿತ್ತಲ್ಲದೆ. ಜಾರಕಿಹೊಳಿ ಸಹೋದರರು ಪಾರುಪತ್ಯ ಮೆರೆದಿದ್ದರು. ಈ ಪಾರುಪತ್ಯಕ್ಕೆ ಲಕ್ಷ್ಮೀಹೆಬ್ಬಾಳ್ಕರ್ ಬ್ರೇಕ್ ಹಾಕಿದ್ದಾರೆ.
ಕಳೆದ ಒಂದು ವಾರದಿಂದ ಪಿಎಲ್‍ಡಿ ಬ್ಯಾಂಕ್ ಚುನಾವಣೆ ಸಂಬಂಧ ಬೆಳಗಾವಿ ಕಾಂಗ್ರೆಸ್‍ನಲ್ಲಿ ಭಿನ್ನಮತ ಭುಗಿಲೆದ್ದಿತ್ತು. ಲಕ್ಷ್ಮೀಹೆಬ್ಬಾಳ್ಕರ್, ಜಾರಕಿಹೊಳಿ ಸಹೋದರರ ನಡುವೆ ಭಿನ್ನಾಭಿಪ್ರಾಯ ತಾರಕಕ್ಕೇರಿ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ ತಂದಿಟ್ಟಿತ್ತು.
ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಚುನಾವಣೆ ನಮ್ಮ ಪರವಾಗಿರದಿದ್ದರೆ ಪರ್ಯಾಯ ಚಿಂತನೆ ನಡೆಸಬೇಕಾಗುತ್ತದೆ ಎಂಬ ಹೇಳಿಕೆಯನ್ನು ಜಾರಕಿಹೊಳಿ ಸಹೋದರರು ನೀಡಿದ್ದರು.
ನಿನ್ನೆ ಸಚಿವ ರಮೇಶ್‍ಜಾರಕಿಹೊಳಿ ಮಾತನಾಡಿ, ಶಾಸಕಿ ಲಕ್ಷ್ಮೀಹೆಬ್ಬಾಳ್ಕರ್ ಅವರನ್ನು ಹದ್ದುಬಸ್ತಿನಲ್ಲಿ ಇಡದಿದ್ದರೆ ಉಗ್ರ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಹೈಕಮಾಂಡ್‍ಗೆ ರವಾನಿಸಿದ್ದರು.
ಲಕ್ಷ್ಮೀಹೆಬ್ಬಾಳ್ಕರ್ ಕೂಡ ಜಾರಕಿಹೊಳಿ ಸಹೋದರರಿಗೆ ಪ್ರಬಲ ಪೈಪೆÇೀಟಿ ನೀಡಿದ್ದರು. ತಮ್ಮ ಬಣದ 9 ಸದಸ್ಯರನ್ನು ರಕ್ಷಣಾತ್ಮಕವಾಗಿ ತಮ್ಮೊಂದಿಗೆ ಇಟ್ಟುಕೊಂಡು ಇಂದು ಚುನಾವಣೆಗೆ ಸಜ್ಜುಗೊಳಿಸಿದ್ದರು.
ಕೇವಲ ಒಂದು ಪಿಎಲ್‍ಡಿ ಬ್ಯಾಂಕ್‍ನ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಕಾಂಗ್ರೆಸ್ ಪಕ್ಷ ಹಾಗೂ ಸಮ್ಮಿಶ್ರ ಸರ್ಕಾರಕ್ಕೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿತ್ತು.
ಲಕ್ಷ್ಮೀಹೆಬ್ಬಾಳ್ಕರ್ ಕುಗ್ಗಲಿಲ್ಲ, ಜಾರಕಿಹೊಳಿ ಸಹೋದರರು ಜಗ್ಗಲಿಲ್ಲ. ಹೈಕಮಾಂಡ್ ನಾಯಕರು ಹೇಳಿದ ಯಾವುದೇ ಮಾತನ್ನೂ ಕಿವಿಗೆ ಹಾಕಿಕೊಳ್ಳಲಿಲ್ಲ.
ಇಂದು ಚುನಾವಣೆ ನಡೆದು ಯಾರ ಕೈ ಮೇಲಾಗುತ್ತದೆ. ಫಲಿತಾಂಶದ ನಂತರ ಏನಾಗುತ್ತದೆಯೋ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ತೀವ್ರಗೊಂಡಿತ್ತು. ಈ ನಡುವೆ ಸಂಧಾನಕಾರರಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರಖಂಡ್ರೆ ಅವರನ್ನು ನೇಮಿಸಿ ಬೆಳಗಾವಿಗೆ ಕಳುಹಿಸಿಕೊಡಲಾಗಿತ್ತು.
ಈಶ್ವರ್‍ಖಂಡ್ರೆ ಅವರು ಇಂದು ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮೀಹೆಬ್ಬಾಳ್ಕರ್ ಜತೆ ನಡೆಸಿದ ಮಾತುಕತೆ ಯಶಸ್ವಿಯಾಯಿತು. ಹೆಬ್ಬಾಳ್ಕರ್ ಬಣದ ಇಬ್ಬರು ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಹೈಮಾಂಡ್ ನಿರ್ದೇಶನದಂತೆ ಸತೀಶ್ ಜಾರಕಿಹೊಳಿ ಬಣದಿಂದ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣೆ ಸುಗಮವಾಗಿ ನಡೆಯಿತು.
ಇದಕ್ಕೂ ಮುನ್ನ ಬೆಳಗಾವಿ ಗ್ರಾಮೀಣ ಪಿಎಲ್‍ಡಿ ಬ್ಯಾಂಕ್‍ಗೆ ಭಾರೀ ಭದ್ರತೆ ಏರ್ಪಡಿಸಲಾಗಿತ್ತಲ್ಲದೆ, ಸಿಸಿ ಕ್ಯಾಮೆರ ಅಳವಡಿಸಲಾಗಿತ್ತು. ಲಕ್ಷ್ಮೀಹೆಬ್ಬಾಳ್ಕರ್ ಮನೆಗೆ ಹೆಚ್ಚಿನ ಪೆÇಲೀಸ್ ಭದ್ರತೆ ನಿಯೋಜಿಸಲಾಗಿತ್ತು. ಅವರ ಕಡೆಯ 9 ನಿರ್ದೇಶಕರಿಗೂ ವಿಶೇಷ ಭದ್ರತೆ ಕಲ್ಪಿಸಲಾಗಿತ್ತು.
ಏನಾಗುತ್ತದೆಯೋ ಏನೋ ಎಂಬ ಕುತೂಹಲ ಕೆರಳಿಸಿತ್ತು. ಆದರೆ, ಸಂಧಾನ ಮಾತುಕತೆ ನಡೆದ ಅರ್ಧಗಂಟೆಯೊಳಗೆ ಎಲ್ಲವೂ ತಣ್ಣಗಾಗಿತ್ತು.
ಸಂಧಾನ ನಡೆಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರಖಂಡ್ರೆ ಅವರು ಲಕ್ಷ್ಮೀಹೆಬ್ಬಾಳ್ಕರ್, ಸತೀಶ್‍ಜಾರಕಿಹೊಳಿ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಬೆಳಗಾವಿಯಲ್ಲಿ ಅಭಿಪ್ರಾಯ ಭೇದದಿಂದ ಹಾಗೂ ಸಂವಹನ ಕೊರತೆಯಿಂದ ಕೆಲ ಸಮಸ್ಯೆಗಳು ಉಂಟಾಗಿದ್ದು, ಈಗ ಎಲ್ಲವೂ ಬಗೆಹರಿದಿದೆ. ಬೆಳಗಾವಿಯಲ್ಲಿ ಯಾವುದೇ ಭಿನ್ನಮತವಿಲ್ಲ. ಎಲ್ಲರೂ ಒಟ್ಟಾಗಿದ್ದೇವೆ. ಸೌಹಾರ್ದಯುತವಾಗಿ ಬಗೆಹರಿಸಿದ್ದೇವೆ. ಇದ್ದ ಸಣ್ಣಪುಟ್ಟ ಸಮಸ್ಯೆಗಳು ಬಗೆಹರಿದಿವೆ ಎಂದು ಹೇಳಿದರು.
ಮಾಜಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಪಕ್ಷದ ಹಿತದೃಷ್ಟಿಯಿಂದ ನಾವು ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಉಗ್ರ ನಿರ್ಧಾರ ಏನಿಲ್ಲ, ನಮ್ಮಲ್ಲಿ ಯಾವುದೇ ಪ್ರತಿಷ್ಠೆ ಇಲ್ಲ. ಇದು ಸ್ಥಳೀಯ ಸಮಸ್ಯೆ. ಕಳೆದ ಒಂದು ವಾರದಿಂದ ಹೇಳುತ್ತಿದ್ದೆವು. ಅದೇ ರೀತಿ ಬಗೆಹರಿದಿದೆ ಎಂದು ತಿಳಿಸಿದರು.
ಲಕ್ಷ್ಮೀಹೆಬ್ಬಾಳ್ಕರ್ ಮಾತನಾಡಿ, ನಾನು ಪಕ್ಷದ ಶಿಸ್ತಿನ ಸಿಪಾಯಿ, ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳಿದ್ದೆ. ಅದೇ ರೀತಿ ನಮ್ಮ ಪಕ್ಷದ ಕಾರ್ಯಾಧ್ಯಕ್ಷರು ಹೇಳಿದಂತೆ ನಡೆದುಕೊಂಡಿದ್ದೇನೆ. ನಮ್ಮಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ವಿವಾದ ಸುಖಾಂತ್ಯವಾಗಿರುವುದರಿಂದ ಸಂತಸವಾಗಿದೆ ಎಂದು ಹೇಳಿದರು.
ಒಟ್ಟಾರೆ ಕಳೆದ ಒಂದು ವಾರದಿಂದ ತೀವ್ರ ಕುತೂಹಲ ಕೆರಳಿಸಿದ್ದ ರಾಜಕೀಯ ಮೇಲಾಟಕ್ಕೆ ಕಾರಣವಾಗಿದ್ದ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಯಾವುದೇ ಗದ್ದಲ, ಗೊಂದಲ ಇಲ್ಲದೆ ಮುಗಿದಿದ್ದು, ಕಾಂಗ್ರೆಸ್ ಪಕ್ಷದ ಮುಖಂಡರು ಸದ್ಯ ನಿಟ್ಟುಸಿರು ಬಿಡುವಂತಾಗಿದೆ.
ಆದರೆ, ಇಲ್ಲಿಯವರೆಗೆ ಅಬ್ಬರಿಸಿ ಬೊಬ್ಬರಿದಿರುವ ಹಿನ್ನಡೆ ಅನುಭವಿಸಿರುವ ಜಾರಕಿಹೊಳಿ ಸಹೋದರರು ಮುಂದೆ ಯಾವ ಹೆಜ್ಜೆ ಇಡಲಿದ್ದಾರೆ ? ತಮಗಾಗಿರುವ ಅವಮಾನದ ಸೇಡನ್ನು ಯಾವ ರೀತಿ ತೀರಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಭುಗಿಲೆದ್ದ ಭಿನ್ನಮತ:
ಇನ್ನೇನು ಚುನಾವಣೆ ಮುಗಿದು ಕಾಂಗ್ರೆಸ್ ಕಂಪನ ತಣ್ಣಗಾಯಿತು ಎನ್ನುವಷ್ಟರಲ್ಲೇ ಜಾರಕಿಹೊಳಿ ಬೆಂಬಲಿಗರ ಅಸಮಾಧಾನ ಭುಗಿಲೆದಿತ್ತು. ಬೆಳಗಾವಿಯ ಸರ್ಕಾರಿ ಅತಿಥಿ ಗೃಹದ ಬಳಿ ಜಮಾವಣೆಗೊಂಡ ಸತೀಶ್ ಜಾರಕಿಹೊಳಿ ಬೆಂಬಲಿಗರು ಹಾಗೂ ಅವರ ಪರವಿದ್ದ ನಿರ್ದೇಶಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಏಕಾಏಕಿ ಕೈಗೊಂಡ ಈ ತೀರ್ಮಾನವನ್ನು ನಾವು ವಿರೋಧಿಸುವುದಾಗಿ ಅವರು ಹೇಳಿದರು. ಸತೀಶ್ ಅವರಿಗೆ ಅನ್ಯಾಯವಾಗಿದೆ. ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಇವರನ್ನು ಸ್ಥಳೀಯ ನಾಯಕರು ಸಮಾಧಾನಪಡಿಸುವ ಪ್ರಯತ್ನ ನಡೆಸಿದರು. ಇದೇ ರೀತಿ ಹೆಬ್ಬಾಳ್ಕರ್ ಬೆಂಬಲಿಗರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು ಕಂಡು ಬಂತು. ಶಾಸಕರಾದ ನಮ್ಮ ನಾಯಕರಿಗೆ ಏಕವಚನದಲ್ಲಿ ಮಾತನಾಡಿದ್ದು, ತೀವ್ರ ಬೇಸರ ತಂದಿದೆ ಎಂದು ಹೇಳಿದರು.
ಪರ-ವಿರೋಧದ ಘೋಷಣೆಗಳು ಮೊಳಗಿದವು. ಅಸಮಾಧಾನ, ಅತೃಪ್ತಿಯ ಲಾಭಪಡೆಯಲು ಯತ್ನಿಸುತ್ತಿದ್ದ ಪ್ರತಿಪಕ್ಷಗಳಿಗೆ ಯಾವುದೇ ಉಪಯೋಗ ಆದಂತೆ ಕಂಡು ಬರಲಿಲ್ಲ.