ಬೆಂಗಳೂರು, ಸೆ.7- ಕೇಬಲ್ ಅಳವಡಿಕೆ ಕೆಲಸಕ್ಕೆ ಆಂಧ್ರದಿಂದ ಬಂದಿದ್ದ ಕಾರ್ಮಿಕ ವಾಹನ ಕೆಳಗೆ ಮಲಗಿರುವುದು ಗಮನಕ್ಕೆ ಬಾರದೆ ವಾಹನ ಚಲಾಯಿಸಿದ್ದರಿಂದ ಆತ ಮೃತಪಟ್ಟಿರುವ ಘಟನೆ ಕೋಣನಕುಂಟೆ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸುಬ್ರಮಣಿ (35) ಮೃತಪಟ್ಟ ಆಂಧ್ರ ಮೂಲದ ವ್ಯಕ್ತಿ.
ಬನ್ನೇರುಘಟ್ಟ ರಸ್ತೆಯ ಮೀನಾಕ್ಷಿ ಲೇ ಔಟ್ನಲ್ಲಿ ಕೇಬಲ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ಈ ಕೆಲಸಕ್ಕಾಗಿ ಆಂಧ್ರದಿಂದ 10 ರಿಂದ 15 ಮಂದಿ ಕಾರ್ಮಿಕರು ನಗರಕ್ಕೆ ಬಂದು ಕೇಬಲ್ ಅಳವಡಿಕೆ ಕಾರ್ಯದಲ್ಲಿ ತೊಡಗಿಕೊಂಡಿದ್ದರು.
ಕೇಬಲ್ ಕೆಲಸಕ್ಕೆಂದು ಬುಲೆರೋ ವಾಹನವನ್ನು ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ಈ ವಾಹನದಲ್ಲಿ ಕೆಲವು ಸಲಕರಣೆಗಳನ್ನು ಇಟ್ಟುಕೊಂಡಿದ್ದರು.
ನಿನ್ನೆ ಸಂಜೆ 5.30ರಲ್ಲಿ ಕೇಬಲ್ ಅಳವಡಿಕೆ ಕೆಲಸ ನಡೆಯುತ್ತಿದ್ದಾಗ ಕಾರ್ಮಿಕ ಸುಬ್ರಮಣಿ ಕುಡಿದು ಈ ಬುಲೆರೋ ವಾಹನದ ಕೆಳಗೆ ಮಲಗಿದ್ದಾನೆ. ಇದು ಯಾರ ಗಮನಕ್ಕೂ ಬಂದಿಲ್ಲ. ಈ ವೇಳೆ ಬುಲೆರೋ ವಾಹನವನ್ನು ಚಾಲಕ ಚಲಾಯಿಸಿದಾಗ ಕೆಳಗೆ ಮಲಗಿದ್ದ ಸುಬ್ರಮಣಿ ಕಾಲಿನ ಮೇಲೆ ಹರಿದಿದ್ದಲ್ಲದೆ, ಅದರಲ್ಲಿದ್ದ ಸಲಕರಣೆಗಳು ಈತನಿಗೆ ತಗುಲಿದೆ.
ಈ ಸಂದರ್ಭದಲ್ಲಿ ಸುಬ್ರಮಣಿ ಕೂಗಿಕೊಂಡಿದ್ದಾನೆ. ತಕ್ಷಣ ವಾಹನ ನಿಲ್ಲಿಸಿ ನೋಡಿದಾಗ ಈತ ಕೆಳಗೆ ಇದ್ದಿದ್ದು ಗೊತ್ತಾಗಿ ಗಾಯಗೊಂಡಿದ್ದ ಈತನನ್ನು ಗೊಟ್ಟಿಗೆರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಮತ್ತೆ ಈ ಸ್ಥಳಕ್ಕೆ ಕರೆದುಕೊಂಡು ಬಂದಿದ್ದರು. ಕೆಲಸ ಮಾಡುತ್ತಿದ್ದ ಜಾಗದಲ್ಲಿ ಮಲಗಿದ್ದ ಸುಬ್ರಮಣಿ ಮೃತಪಟ್ಟಿದ್ದಾನೆ.
ಶವವನ್ನು ಕೆಂಪೇಗೌಡ ಆಸ್ಪತ್ರೆಯಲ್ಲಿಡಲಾಗಿದೆ. ಈ ಬಗ್ಗೆ ಕೋಣನಕುಂಟೆ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.