ದಸರಾ ಗಜಪಡೆ ಕ್ಯಾಪ್ಟನ್‌ ಅರ್ಜುನನ ತೂಕ 5650 ಕೆ.ಜಿ., 2ನೇ ಸ್ಥಾನದದಲ್ಲಿ ಗೋಪಿ

ಮೈಸೂರು: ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಕಾಡಿನಿಂದ ಆಗಮಿಸಿರುವ ಅರ್ಜುನ ನೇತೃತ್ವದ ಗಜಪಡೆ ಮೈಸೂರಿನ ರಸ್ತೆಗಳಲ್ಲಿ ತಾಲೀಮು ಆರಂಭಿಸಿವೆ. ಗಜಪಡೆಯ ಆರೋಗ್ಯದ ಮೇಲೆ ನಿಗಾ ಇಡುವ ಜತೆಗೆ ಅವುಗಳ ಆರೈಕೆ ದೃಷ್ಟಿಯಿಂದ  ಈ ವರ್ಷವೂ ತಾಲೀಮು ನಡೆಸುವ ಮುನ್ನ ಆನೆಗಳ ತೂಕ ಪರೀಕ್ಷೆ ಮಾಡಿಸಲಾಯಿತು.

ದಸರಾ ಗಜಪಡೆಯ ಕ್ಯಾಪ್ಟನ್‌ ಅರ್ಜುನ ಬರೋಬ್ಬರಿ 5650 ಕೆ.ಜಿ. ತೂಕದೊಂದಿಗೆ ತನ್ನ ಬಾಹುಬಲ ಪ್ರದರ್ಶಿಸಿದರೆ, ಮೊದಲ ತಂಡದಲ್ಲಿ ಬಂದಿರುವ ಉಳಿದ ಆನೆಗಳಾದ ವರಲಕ್ಷ್ಮೀ 3120 ಕೆ.ಜಿ., ಧನಂಜಯ 4045 ಕೆ.ಜಿ., ಗೋಪಿ 4435 ಕೆ.ಜಿ., ವಿಕ್ರಮ 3985 ಕೆ.ಜಿ. ಹಾಗೂ ಚೈತ್ರ 2920 ಕೆ.ಜಿ. ತೂಕವಿದೆ. ಕಳೆದ ವರ್ಷ 5250 ಕೆ.ಜಿ. ತೂಕವಿದ್ದ ಅರ್ಜುನ, ಒಂದು ವರ್ಷದಲ್ಲಿ ಬರೋಬ್ಬರಿ 400 ಕೆ.ಜಿ. ತೂಕ ಹೆಚ್ಚಿಸಿಕೊಂಡಿದ್ದಾನೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅರಣ್ಯ ಇಲಾಖೆಯ ಪಶು ವೈದ್ಯಾಧಿಕಾರಿ ಡಾ.ನಾಗರಾಜ್‌, ಇಂದಿನಿಂದ ಆನೆಗಳಿಗೆ ವಿಶೇಷ ಆರೈಕೆ ನೀಡಲಾಗುತ್ತಿದ್ದು, ಬೆಲ್ಲ, ತೆಂಗಿನಕಾಯಿ, ಮುದ್ದೆ, ಭತ್ತದ ಕುಸುರೆ, ಬೆಣ್ಣೆ ಸೇರಿದಂತೆ ಪೌಷ್ಠಿಕ ಆಹಾರ ಪದಾರ್ಥಗಳನ್ನು ತಿನ್ನಿಸಲಾಗುತ್ತದೆ. ಆನೆಗಳ ಮಾವುತರು ಮತ್ತು ಕಾವಾಡಿಗಳು ಆನೆಗಳಿಗೆ ನಿತ್ಯ ಮೈತೊಳೆದು ಹಣೆಗೆ ಹರಳೆಣ್ಣೆ ಹಚ್ಚಿ, ಭತ್ತದ ಕುಸುರೆ ತಿನ್ನಿಸಿ ವಿಶೇಷ ಆರೈಕೆ ಮಾಡುತ್ತಾರೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ