ಬಂಡಾಯವಾಗಿ ಸ್ಪರ್ಧಿಸಿದ್ದವರನ್ನು ವಿಶ್ವಾಸಕ್ಕೆ ತೆಗೆದುಕೊಂಳ್ಳುವ ಬಗ್ಗೆ ಕಾಂಗ್ರೆಸ್ ನಿರ್ಧಾರ

ಬೆಂಗಳೂರು, ಸೆ.7- ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ಉಂಟಾಗಿರುವ ಕಡೆ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಲು, ಬಂಡಾಯವಾಗಿ ಸ್ಪರ್ಧಿಸಿದ್ದವರನ್ನು ವಿಶ್ವಾಸಕ್ಕೆ ತೆಗೆದುಕೊಂಳ್ಳುವ ಬಗ್ಗೆಯೂ ಕಾಂಗ್ರೆಸ್ ಸಚಿವರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ಇಂದು ಸದಾಶಿವನಗರದ ಅವರ ಕಚೇರಿಯಲ್ಲಿ ಕಾಂಗ್ರೆಸ್ ಸಚಿವರ ಉಪಹಾರ ಕೂಟದಲ್ಲಿ ಪ್ರಸ್ತುತ ರಾಜಕೀಯ ಬೆಳವಣಿಗೆಗಳು, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಸೇರಿದಂತೆ ಇನ್ನಿತರೆ ಮಹತ್ವದ ವಿಚಾರಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.

ಅತಂತ್ರ ಸ್ಥಿತಿ ನಿರ್ಮಾಣವಾಗಿರುವ ಕಡೆ ಪಕ್ಷೇತರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರಹಿಡಿಯುವ ಪ್ರಯತ್ನ ನಡೆಸಲಾಗುವುದು. ಸಂಖ್ಯಾಬಲ ಕೊರತೆ ಎದುರಾಗುವ ಕಡೆ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

ಮುಂದಿನ ಲೋಕಸಭೆ ಚುನಾವಣೆಯಲ್ಲೂ ಜೆಡಿಎಸ್ ಜತೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದರಿಂದ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಇದಕ್ಕೆ ಹೈಕಮಾಂಡ್‍ನ ಸಹಮತಿಯೂ ಇದೆ. ಜಾತ್ಯತೀತ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಂಡು ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಹಿಡಿಯುವ ಮೂಲಕ ತಳಮಟ್ಟದಲ್ಲಿ ಪಕ್ಷ ಸಂಘಟನೆಯನ್ನು ಬಲಪಡಿಸಬೇಕೆಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಈಗಾಗಲೇ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದೇವೆ. ಸ್ಥಳೀಯ ಸಂಸ್ಥೆಗಳಲ್ಲೂ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

ಬಹಳಷ್ಟು ಕಡೆ ಸ್ವಂತ ಬಲದ ಮೇಲೆ ನಾವು ಅಧಿಕಾರ ಹಿಡಿದಿದ್ದೇವೆ. ಆದರೆ, ಕೆಲವು ಕಡೆ ಅತಂತ್ರ ಸ್ಥಿತಿ ನಿರ್ಮಾಣವಾಗಿರುವುದರಿಂದ ಮೈತ್ರಿ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.
ಸಚಿವರು ತಮ್ಮ ಕ್ಷೇತ್ರಗಳಲ್ಲಿ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕಿದೆ. ಲೋಕಸಭೆ ಚುನಾವಣೆಗೆ ತಯಾರಿಯೂ ನಡೆದಿದೆ. ಈ ಹಿನ್ನೆಲೆಯಲ್ಲಿ ಸಚಿವರು ತಮ್ಮ ಉಸ್ತುವಾರಿ ಇರುವ ಕ್ಷೇತ್ರಗಳಿಗೆ ತೆರಳಬೇಕು. ಅಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು. ಬರ ಹಾಗೂ ನೆರೆ ಸಮಸ್ಯೆಯಿಂದ ರಾಜ್ಯ ಸಂಕಷ್ಟಕ್ಕೀಡಾಗಿದೆ. ಆಯಾ ಜಿಲ್ಲೆಗಳ ಪರಿಸ್ಥಿತಿಗೆ ಅನುಗುಣವಾಗಿ ಸಚಿವರು ಕ್ರಮ ಕೈಗೊಂಡು ಜನರ ಸಮಸ್ಯೆಗೆ ಸ್ಪಂದಿಸಿ ಎಂದು ಪರಮೇಶ್ವರ್ ಸಲಹೆ ನೀಡಿದ್ದಾರೆ.
ಕೆಪಿಸಿಸಿ ಹಾಗೂ ಎಐಸಿಸಿ ನಿರ್ದೇಶನವನ್ನು ಪಾಲಿಸಲು ಎಲ್ಲರೂ ಬದ್ಧರಾಗಿರಬೇಕು. ಈ ನಿಟ್ಟಿನಲ್ಲಿ ಸಚಿವರಾದಿಯಾಗಿ ಕಾರ್ಯಕರ್ತರು ಸಹ ಕಾರ್ಯನಿರ್ವಹಿಸಲು ತಾಕೀತು ಮಾಡಿದರು.

ಬೆಳಗಾವಿ ಸಮಸ್ಯೆ ಬಗೆಹರಿದಿದೆ:
ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಎದುರಾಗಿರುವ ಗುಂಪುಗಾರಿಕೆ ವಿರುದ್ಧ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹಿರಿಯ ನಾಯಕರು ಕೂಡಲೇ ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಬೇಕು. ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಈ ರೀತಿಯ ಗುಂಪುಗಾರಿಕೆಗಳು ಪಕ್ಷದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸಭೆಯಲ್ಲಿದ್ದ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಮಾರ್ಗದರ್ಶನದಂತೆ ಈಗಾಗಲೇ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರಖಂಡ್ರೆ ಬೆಳಗಾವಿಗೆ ತೆರಳಿದ್ದಾರೆ. ಲಕ್ಷ್ಮೀಹೆಬ್ಬಾಳ್ಕರ್ ಅವರ ಜತೆ ಮಾತುಕತೆ ನಡೆಸಿ ಮನವೊಲಿಸಲಾಗಿದೆ. ಜಾರಕಿಹೊಳಿ ಸಹೋದರರ ಜತೆಯೂ ಮಾತುಕತೆ ನಡೆದಿದೆ. ಯಾವುದೇ ಸಮಸ್ಯೆಗಳು ಎದುರಾಗದಂತೆ ಪರಿಸ್ಥಿತಿಯನ್ನು ನಿಭಾಯಿಸಲಾಗಿದೆ ಎಂದು ದಿನೇಶ್‍ಗುಂಡೂರಾವ್ ತಿಳಿಸಿದರು.
ಸಚಿವರು ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡಿದಾಗ ಕಡ್ಡಾಯವಾಗಿ ಸ್ಥಳೀಯ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ ಪಕ್ಷ ಸಂಘಟನೆ ಹಾಗೂ ಪಕ್ಷದ ಬಲವರ್ಧನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಪ್ರತಿಯೊಬ್ಬರೂ ಶಿಸ್ತು ಪಾಲಿಸಬೇಕು. ಸಚಿವರಾಗಲಿ, ಕಾರ್ಯಕರ್ತರಾಗಲಿ ಎಲ್ಲರೂ ಶಿಸ್ತು ಪಾಲಿಸಲೇಬೇಕು ಎಂದ ಅವರು, ಬೆಳಗಾವಿ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ನಾನೂ ಸೇರಿದಂತೆ ಉಪಮುಖ್ಯಮಂತ್ರಿ ಪರಮೇಶ್ವರ್, ಹೈಕಮಾಂಡ್‍ನ ವರಿಷ್ಠರು ಮಾತುಕತೆ ನಡೆಸಿದ್ದೇವೆ. ಸಮಸ್ಯೆ ಇರುವುದು ನಿಜ. ಅದನ್ನು ಬಗೆಹರಿಸುವ ಸಾಮಥ್ರ್ಯವೂ ಪಕ್ಷಕ್ಕಿದೆ. ಜಾರಕಿಹೊಳಿ ಸಹೋದರರು ಎಚ್ಚರಿಕೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ಲಕ್ಷ್ಮಿಹೆಬ್ಬಾಳ್ಕರ್ ಅವರು ಹಠಕ್ಕೆ ಬಿದ್ದಿರುವುದು ಸರಿಯಲ್ಲ. ಚುನಾವಣೆಯ ಸಂದರ್ಭದಲ್ಲಿ ಈ ರೀತಿಯ ಬೆಳವಣಿಗೆಗಳಿಂದ ಪಕ್ಷಕ್ಕೆ ಸಂಕಷ್ಟ ತಂದೊಡ್ಡುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಾರಕಿಹೊಳಿ ಅವರು ತಮ್ಮ ಹೆಸರು ಪ್ರಸ್ತಾಪಿಸಿರುವ ವಿಷಯ ಕುರಿತಂತೆ ಸಭೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದು, ನಾನು ಯಾರನ್ನೂ ಬೆಂಬಲಿಸಿಯೂ ಇಲ್ಲ. ವಿರೋಧಿಸಿಯೂ ಇಲ್ಲ. ಪಕ್ಷದ ನಿಯಮಗಳನ್ನು ಪಾಲಿಸಿದ್ದೇನೆ. ನನ್ನ ಹೆಸರು ಪ್ರಸ್ತಾಪಿಸಿರುವುದು ನೋವು ತಂದಿದೆ ಎಂದರು.
ಇಂದು ನಡೆದ ಈ ಸಭೆಯಲ್ಲಿ ಒಟ್ಟು 11 ಸಚಿವರು ಪಾಲ್ಗೊಂಡಿದ್ದು, ಉಳಿದಂತೆ ಆರ್.ವಿ.ದೇಶಪಾಂಡೆ ಹಾಗೂ ಶಿವಶಂಕರರೆಡ್ಡಿ ವಿದೇಶಪ್ರವಾಸದಲ್ಲಿದ್ದರೆ, ಯು.ಟಿ.ಖಾದರ್, ಜಯಮಾಲಾ ಉಡುಪಿ ಜಿಲ್ಲೆಯ ಪ್ರವಾಸದಲ್ಲಿದ್ದಾರೆ. ರಮೇಶ್‍ಜಾರಕಿಹೊಳಿ ಬೆಳಗಾವಿ ಚುನಾವಣೆ ನಿಮಿತ್ತ ತೆರಳಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ