ಬೆಂಗಳೂರು,ಸೆ.7- ಒಂದೊಂದು ಕ್ಷೇತ್ರವು ಈ ಬಾರಿ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದರಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೆಲವು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸುವ ಸಾಧ್ಯತೆ ಇದೆ.
2014ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 17 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಒಂದೊಂದು ಸ್ಥಾನವು ಕೂಡ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಹಾಲಿ 5ರಿಂದ 7 ಸಂಸದರಿಗೆ ಟಿಕೆಟ್ ನೀಡದಿರಲು ಪಕ್ಷ ತೀರ್ಮಾನಿಸಿದೆ.
ದೆಹಲಿಗೆ ತೆರಳುತ್ತಿರುವ ಯಡಿಯೂರಪ್ಪ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಆಯ್ಕೆ ಮಾಡಿದ್ದು, ಕೆಲವು ಹಾಲಿ ಸಂಸದರಿಗೆ ಟಿಕೆಟ್ ನೀಡಿದರೆ ಗೆಲ್ಲುವ ಸಾಧ್ಯತೆಗಳು ತೀರಾ ಕಡಿಮೆ ಎಂಬುದನ್ನು ರಾಷ್ಟ್ರೀಯ ನಾಯಕರ ಗಮನಕ್ಕೆ ತರಲಿದ್ದಾರೆ.
ಹಾಲಿ ಸಂಸದರಾಗಿರುವ ಬೀದರ್ನ ಮಲ್ಲಿಕಾರ್ಜುನ ಖೂಬಾ, ವಿಜಾಪುರದ ಸಂಸದ ಹಾಗೂ ಸಚಿವ ರಮೇಶ್ ಜಿಗಜಿಣಗಿ, ಉತ್ತರ ಕನ್ನಡದ ಸಂಸದ ಮತ್ತು ಸಚಿವ ಅನಂತಕುಮಾರ್ ಹೆಗಡೆ, ಬೆಳಗಾವಿಯ ಸುರೇಶ್ ಅಂಗಡಿ, ಬಾಗಲಕೋಟೆಯ ಪಿ.ಸಿ.ಗದ್ದಿಗೌಡರ್, ಕೊಪ್ಪಳದ ಕರಡಿ ಸಂಗಣ್ಣ ಅವರಿಗೆ ಟಿಕೆಟ್ ನೀಡುವ ಬಗ್ಗೆ ಮರು ನಿರ್ಧಾರ ಕೈಗೊಳ್ಳುವಂತೆ ಯಡಿಯೂರಪ್ಪ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ಮನವಿ ಮಾಡಲಿದ್ದಾರೆ.
ಈ ಎಲ್ಲ ಸಂಸದರಿಗೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಕಷ್ಟು ವಿರೋಧಿ ಅಲೆ ಇರುವುದರಿಂದ ಗೆಲ್ಲುವ ಸಾಧ್ಯತೆಗಳು ಇಲ್ಲ. ಬದಲಿಗೆ ಹೊಸಬರಿಗೆ ಟಿಕೆಟ್ ನೀಡಿದರೆ ಗೆಲ್ಲಬಹುದು. ಹೀಗಾಗಿ ವರಿಷ್ಠರು ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಮನವರಿಕೆ ಮಾಡಲಿದ್ದಾರೆ.
ಕಳೆದ ಮೇ ತಿಂಗಳಿನಲ್ಲಿ ನಡೆದ ವಿಧಾನಸಭೆ ಚುನಾವಣೆ ಹಾಗೂ ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಈ ಸಂಸದರು ಪ್ರತಿನಿಧಿಸುವ ಜಿಲ್ಲೆಗಳಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ಫಲಿತಾಂಶ ಬಂದಿಲ್ಲ.
ಗೆಲ್ಲುವಂತಹ ಅಭ್ಯರ್ಥಿಗಳೇ ಪಕ್ಷದಲ್ಲಿರುವುದರಿಂದ ಹೊಸಬರಿಗೆ ಅವಕಾಶ ಮಾಡಿಕೊಡಬೇಕು. ಇದರಿಂದ ಹೆಚ್ಚಿನ ಸ್ಥಾನ ಗಳಿಸಲು ಅನುಕೂಲವಾಗುತ್ತದೆ ಎಂದು ಯಡಿಯೂರಪ್ಪ ರಾಜ್ಯದ ಸ್ಥಿತಿಗತಿಯ ಬಗ್ಗೆ ಮನವರಿಕೆ ಮಾಡುವರು.
ಅದರಲ್ಲೂ ಅನಂತಕುಮಾರ್ ಹೆಗಡೆ, ರಮೇಶ್ ಜಿಗಜಿಗಣಿ, ಕರಡಿ ಸಂಗಣ್ಣ ಗೆಲ್ಲುವ ಸಾಧ್ಯತೆಗಳು ಇಲ್ಲದಿರುವುದರಿಂದ ಈಗಾಗಲೇ ಹೊಸ ಅಭ್ಯರ್ಥಿಗಳ ಶೋಧ ನಡೆದಿದೆ. ರಾಜ್ಯದಲ್ಲಿ ಹೆಚ್ಚಿನ ಸ್ಥಾನಗಳಿಸಿಬೇಕಾದರೆ ಹೊಸ ಮುಖಗಳಿಗೆ ಮಣೆ ಹಾಕುವುದು ಅನಿವಾರ್ಯ ಎಂದು ಯಡಿಯೂರಪ್ಪ ಹೈಕಮಾಂಡ್ಗೆ ತಿಳಿಸಲಿದ್ದಾರೆ.
ಮೀಸಲು ಕ್ಷೇತ್ರಗಳ ಮೇಲೆ ಕಣ್ಣು:
ಇನ್ನು ವಿಧಾನಸಭೆ ಚುನಾವಣೆಯಲ್ಲಿ ಹಲವು ವಿರೋಧಗಳ ನಡುವೆಯೂ ಬಿಜೆಪಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಮೀಸಲು ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನ ಗಳಿಸಿತ್ತು. ಈಗ ರಾಜ್ಯದ ಮೀಸಲು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದೆ.
ವಿಶೇಷವಾಗಿ ಸೋಲಿಲ್ಲದ ಸರದಾರರೆಂದೇ ಗುರುತಿಸಿಕೊಂಡಿರುವ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ.ಎಚ್. ಮುನಿಯಪ್ಪ ಅವರನ್ನು ಮಣಿಸಲು ರಣತಂತ್ರ ರೂಪಿಸುತ್ತಿದೆ.
ಖರ್ಗೆ ಪ್ರತಿನಿಧಿಸುವ ಕಲಬುರಗಿ, ಕೆ.ಎಚ್.ಮುನಿಯಪ್ಪ ಅವರು ಪ್ರತಿನಿಧಿಸುವ ಕೋಲಾರ ಇದರ ಜೊತೆಗೆ ಆರ್.ಕೆ.ಧ್ರುವನಾರಾಯಣ್ ಪ್ರತಿನಿಧಿಸುವ ಚಾಮರಾಜನಗರ ಲೋಕಸಭಾ ಕ್ಷೇತ್ರಗಳನ್ನು ವಿಶೇಷ ಕ್ಷೇತ್ರಗಳೆಂದು ಪರಿಗಣಿಸಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ತಂತ್ರ ಹೆಣೆಯುತ್ತಿದೆ.
ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಈ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಭವವಿದೆ.ಅದರಲ್ಲೂ ಮೋದಿ ವಿರುದ್ಧ ಪದೇ ಪದೇ ಗುಡುಗುತ್ತಿರುವ ಖರ್ಗೆಗೆ ಈ ಬಾರಿ ಸೋಲಿನ ರುಚಿ ತೋರಿಸಿ ರಾಜಕೀಯ ವಿದಾಯ ಹೇಳಬೇಕೆಂದು ರಾಜ್ಯ ನಾಯಕರಿಗೆ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಉಳಿದಂತೆ ಮೈಸೂರು, ಬೆಂಗಳೂರು, ದಕ್ಷಿಣ ಕನ್ನಡ ಮತ್ತಿತರ ಕಡೆ ಹಾಲಿ ಅಭ್ಯರ್ಥಿಗಳಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ.
ಸಂಭವನೀಯ ಅಭ್ಯರ್ಥಿಗಳು
ಬೆಂಗಳೂರು ದಕ್ಷಿಣ -ಅನಂತ್ಕುಮಾರ್
ಬೆಂಗಳೂರು ಉತ್ತರ- ಡಿ.ವಿ.ಸದಾನಂದಗೌಡ/ಮುನಿರಾಜು
ಬೆಂಗಳೂರು ಕೇಂದ್ರ- ಪಿ.ಸಿ.ಮೋಹನ್
ಬೆಂಗಳೂರು ಗ್ರಾಮಾಂತರ- ಸಿ.ಪಿ.ಯೋಗೇಶ್ವರ್
ಚಿಕ್ಕಬಳ್ಳಾಪುರ- ಬಚ್ಚೇಗೌಡ/ಕಟ್ಟಾ ಸುಬ್ರಹ್ಮಣ್ಯ ನಾಯ್ಡು
ಕೋಲಾರ- ಡಿ.ಎಸ್.ವೀರಯ್ಯ
ಮೈಸೂರು-ಕೊಡುಗು- ಪ್ರತಾಪ್ ಸಿಂಹ
ದಕ್ಷಿಣ ಕನ್ನಡ- ನಳೀನ್ಕುಮಾರ್ ಕಟೀಲ್
ಉತ್ತರ ಕನ್ನಡ- ಅನಂತಕುಮಾರ್ ಹೆಗಡೆ/ಸೂಲಿಬೆಲೆ ಚಕ್ರವರ್ತಿ
ಚಿಕ್ಕೋಡಿ- ರಮೇಶ್ ಕತ್ತಿ
ಬೆಳಗಾವಿ-ಸುರೇಶ್ ಅಂಗಡಿ
ಧಾರವಾಡ-ಪ್ರಹ್ಲಾದ್ ಜೋಷಿ
ಹಾವೇರಿ- ಶಿವಕುಮಾರ್ ಉದಾಸಿ
ದಾವಣಗೆರೆ- ಜಿ.ಎಂ.ಸಿದ್ದೇಶ್ವರ್
ಶಿವಮೊಗ್ಗ-ಬಿ.ವೈ.ರಾಘವೇಂದ್ರ
ಬಳ್ಳಾರಿ- ಜೆ.ಶಾಂತ/ಎನ್.ವೈ.ಹನುಮಂತಪ್ಪ
ಚಿತ್ರದುರ್ಗ-ಜನಾರ್ಧನ್ ಸ್ವಾಮಿ
ತುಮಕೂರು-ಜಿ.ಎಚ್.ಬಸವರಾಜ್
ಬಾಗಲಕೋಟೆ- ಪಿ.ಸಿ.ಗದ್ದಿಗೌಡರ್
ಬೀದರ್- ಮಲ್ಲಿಕಾರ್ಜುನ್ ಖೂಬಾ
ವಿಜಾಪುರ-ರಮೇಶ್ ಜಿಗಜಿಣಗಿ
ಉಡುಪಿ-ಚಿಕ್ಕಮಗಳೂರು-ಶೋಭಾ ಕರಂದ್ಲಾಜೆ/ಜಯಪ್ರಕಾಶ್ ಹೆಗಡೆ
ಕೊಪ್ಪಳ- ಕರಡಿ ಸಂಗಣ್ಣ