ಬೆಂಗಳೂರು,ಸೆ.7- ಪತ್ರಕರ್ತರ ಆರೋಗ್ಯ ದೃಷ್ಟಿಯಿಂದ ಬಿಬಿಎಂಪಿ ಬಜೆಟ್ನಲ್ಲಿ ಮೀಸಲಿಟ್ಟಿರುವ ಒಂದು ಕೋಟಿ ರೂ.ಗಳ ಅನುದಾನವನ್ನು ಸದ್ಬಳಕೆ ಮಾಡಬೇಕೆಂದು ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಎ.ಎಚ್.ಬಸವರಾಜ್ ಅವರು ಮೇಯರ್ ಸಂಪತ್ರಾಜ್ ಹಾಗೂ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಇಂದು ಬೆಳಗ್ಗೆ ಮೇಯರ್ ಸಂಪತ್ ರಾಜ್ ಹಾಗೂ ಆಯುಕ್ತ ಮಂಜುನಾಥ್ ಪ್ರಸಾದ್ ಅವರನ್ನು ಭೇಟಿಯಾಗಿ ಈ ಮನವಿ ಸಲ್ಲಿಸಿದರು.
ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಪತ್ರಕರ್ತರ ಆರೋಗ್ಯ ವಿಮಾ ಯೋಜನೆಗೆ ಒಂದು ಕೋಟಿ ರೂ.ಗಳನ್ನು ಮೀಸಲಿಟ್ಟಿರುವುದು ಸ್ವಾಗತಾರ್ಹ. ಆದರೆ ಈ ಅನುದಾನ ಸದ್ಬಳಕೆ ಕುರಿತಂತೆ ಮಾರ್ಗಸೂಚಿ ಇಲ್ಲ. ಹೀಗಾಗಿ ಕೂಡಲೇ ಮಾರ್ಗಸೂಚಿ ರಚಿಸಿ ಪತ್ರಕರ್ತರು ಮತ್ತು ಅವರ ಕುಟುಂಬ ವರ್ಗದವರಿಗೆ ಅನುಕೂಲ ಮಾಡಿಕೊಡುವಂತೆ ಬಸವರಾಜ್ ಮನವಿ ಮಾಡಿಕೊಂಡರು.
ಅನಾರೋಗ್ಯಕ್ಕೀಡಾಗುವ ಪತ್ರಕರ್ತರಿಗೆ ಆರೋಗ್ಯ ವಿಮೆ ಹಣ ಬಿಡುಗಡೆ ಮಾಡಲು ಯೋಜನಾ ಸಮಿತಿಯೊಂದನ್ನು ರಚಿಸಬೇಕು. ಆ ಸಮಿತಿಯಲ್ಲಿ ಇಬ್ಬರು ಹಿರಿಯ ಪತ್ರಕರ್ತರಿಗೆ ಸದಸ್ಯತ್ವ ನೀಡಬೇಕು.
ಆರೋಗ್ಯಾಧಿಕಾರಿಗಳು ಹಾಗೂ ಪತ್ರಕರ್ತರನ್ನೊಳಗೊಂಡ ಸಮಿತಿ ಶಿಫಾರಸು ಮಾಡುವ ಪತ್ರಕರ್ತರಿಗೆ ಕೂಡಲೇ ವಿಮೆ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.