ಬೆಂಗಳೂರು: ಮೈಸೂರು ರಸ್ತೆ ಭಾಗದಲ್ಲಿ ಬಿಡಿಎ ನಿರ್ಮಿಸಿರುವ ಬಿಡಿಎ ಅಪಾರ್ಟ್ಮೆಂಟ್ ಖರೀದಿಗೆ ಮುಂದಾಗುವ ಸಾರ್ವಜನಿಕರಿಗೆ ಶೇ.೫ ರಷ್ಟು ಹಾಗೂ ಒಮ್ಮೆಲೆ ೧೦ಕ್ಕೂ ಹೆಚ್ಚು ಅಪಾರ್ಟ್ಮೆಂಟ್ ಖರೀದಿಸುವವರಿಗೆ ಶೇ.೧೦ ರಷ್ಟು ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ಬಿಡಿಎ ಕಚೇರಿಯಲ್ಲಿ ನಡೆದ ಬಿಡಿಎ ಆಡಳಿತ ಮಂಡಳಿ ಸಭೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು. ಮೈಸೂರು ರಸ್ತೆ ಭಾಗದಲ್ಲಿ ಅಪಾರ್ಟ್ಮೆಂಟ್ ನಿರ್ಮಿಸಿದ್ದು, ಇದರ ಖರೀದಿಗೆ ಮುಂದಾಗುವವರಿಗೆ ಆಫರ್ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ಶೀಘ್ರವೇ ಅಪಾರ್ಟ್ಮೆಂಟ್ ಖರೀದಿಯಾದರೆ ಮುಂದಿನ ಪ್ರಾಜೆಕ್ಟ್ ಕೈಗೊಳ್ಳಲು ಸಾಧ್ಯ. ಹೀಗಾಗಿ ರಿಯಾಯಿತಿ ಘೋಷಿಸಿದ್ದೇವೆ ಎಂದರು.
ಡಾ.ಶಿವರಾಂ ಕಾರಂತರ ಬಡಾವಣೆ ೧೭ ಗ್ರಾಮಗಳಲ್ಲಿ 3564 ಎಕರೆ ಜಮೀನು ಸ್ವಾಧೀನ ಮಾಡಿ, ಸಾರ್ವಜನಿಕರಿಗೆ ನಿವೇಶನ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿ್ದೆ. ಈ ಪ್ರಕರಣ ಕುರಿತು ಸುಪ್ರೀಂಕೋರ್ಟ್ ಮೂರು ತಿಂಗಳೊಳಗೆ ನೋಟಿಫೈ ಮಾಡಲು ಆದೇಶ ನೀಡಿತ್ತು. ಅಂತೆಯೇ, ನಿವೇಶ ಹಂಚಿಕೆ ಸಂಬಂಧ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿ, ಸಚಿವ ಸಂಪುಟದಿಂದ ಒಪ್ಪಿಗೆ ಪಡೆದುಕೊಳ್ಳಲಾಗುವುದು ಎಂದು ಹೇಳಿದರು.
ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ. ೬೫ ಕಿ.ಮೀ. ಉದ್ದದ ರಸ್ತೆ ನಿರ್ಮಾಣಕ್ಕೆ ೫ ಸಾವಿರ ಕೋಟಿ ರು. ಅಂದಾಜು ಮಾಡಲಾಗಿದೆ. ಜೈಕಾ ಕಂಪನಿ ಸಹಯೋಗದೊಂದಿಗೆ ಈ ಯೋಜನೆ ಕಾರ್ಯಗತವಾಗಲಿದೆ.
ಹಳೇ ಮದ್ರಾಸ್ ರಸ್ತೆ ಕೋಣದಾಸಪುರದ ಬಳಿ ೧೬೫ ಎಕರೆಯಲ್ಲಿ ಇನೋವೇಟಿವ್ ಸಿಟಿ ನಿರ್ಮಾಣಕ್ಕೂ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಹಿಂದಿನ ಸರಕಾರದಲ್ಲಿಯೇ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಈ ಯೋಜನೆಯನ್ನು ಬಿಡಿಎ ಕೈಗೆತ್ತಿಕೊಂಡಿದ್ದು, ಆದಷ್ಟು ಶೀಘ್ರವೇ ಯೋಜನೆಯ ವರದಿ ಸಲ್ಲಿಸಲು ಸಂಬಂಧ ಪಟ್ಟ ಖಾಸಗಿ ಕಂಪನಿಗೆ ಸೂಚಿಸಲಾಗಿದೆ. ಇದರ ಡಿಪಿಆರ್ ಆದ ಮೇಲೆ ಅಂದಾಜು ವೆಚ್ಚ ತಿಳಿಯಲಿದೆ ಎಂದರು.
ಬನಶಂಕರಿ ೬ನೇ ಹಂತದಲ್ಲಿ ೬ ಎಕರೆಯಲ್ಲಿ ಪಿಪಿಪಿ ಮಾದರಿಯಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಲು ತೀರ್ಮಾನಿಸಲಾಗಿದೆ. ತುಮಕೂರು ರಸ್ತೆ ದಾಸನಪುರ ಹಳ್ಳಿದಲ್ಲಿ ವಿಲ್ಲಾ ಕಟ್ಟಿದ್ದೇವೆ. ಇದಕ್ಕೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ೨೫೦ ಕೋಟಿ ರು. ವೆಚ್ಚದಲ್ಲಿ ಇನ್ನಷ್ಟು ವಿಲ್ಲಾ ಕಟ್ಟಲು ಮಂಜೂರಾತಿ ಕೊಟ್ಟಿದ್ದೇವೆ ಎಂದರು.