
ಹುಬ್ಬಳ್ಳಿ: ಪ್ರಯಾಣಿಕರೊಬ್ಬರು ಆಟೋದಲ್ಲಿ ಬಿಟ್ಟು ಹೋದ 2 ಲಕ್ಷಕ್ಕೂ ಅಧಿಕ ಹಣವನ್ನ ಪೊಲೀಸರಿಗೆ ಮರಳಿಸುವ ಮೂಲಕ ಆಟೋ ಚಾಲಕನೋರ್ವ ಪ್ರಾಮಣಿಕತೆ ಮೆರೆದಿದ್ದಾರೆ.
ಹುಬ್ಬಳ್ಳಿಯ ನೇಕಾರ ನಗರದ ನಿವಾಸಿ ನಾಗರಾಜ್ ಸುಬ್ಬಣ್ಣವರ್ ಪೊಲೀಸರಿಗೆ ಹಣ ಮರಳಿಸಿದ ಆಟೋ ಚಾಲಕ. ದಿನವಿಡೀ ಆಟೋ ಚಾಲನೆ ಮಾಡಿದ್ದ ನಾಗರಾಜ್, ಸಂಜೆ ಮನೆಗೆ ಬಂದು ನೋಡಿದಾಗ ಆಟೋದಲ್ಲಿ ಹಣವಿದ್ದ ಬ್ಯಾಗ್ ಪತ್ತೆಯಾಗಿದೆ. ಹಣ ಯಾರೆದ್ದೆಂದು ಗೊತ್ತಾಗದೇ ಆಟೋ ಸಮೇತ ಹಣದ ಬ್ಯಾಗಿನೊಂದಿಗೆ ಪೊಲೀಸ್ ಠಾಣೆಗೆ ತೆರಳಿ, ಸಂಬಂಧಪಟ್ಟ ಪ್ರಯಾಣಿಕರನ್ನು ಪತ್ತೆ ಹಚ್ಚಿ ಹಣ ಮರಳಿಸುವಂತೆ ಮನವಿ ಮಾಡಿದ್ದಾರೆ.
ಹಣ ಸ್ವೀಕರಿಸಿದ ಹುಬ್ಬಳ್ಳಿ ದಕ್ಷಿಣ ಉಪ ವಿಭಾಗ ಎಸಿಪಿ ಎನ್.ಬಿ ಸಕ್ರಿ ಅವರು, ಆಟೋ ಚಾಲಕನ ಪ್ರಾಮಾಣಿಕತೆಗೆ ಮೆಚ್ಚಿ 5 ಸಾವಿರ ಬಹುಮಾನ ನೀಡಿದ್ದಾರೆ. ಈ ಸಂಬಂಧ ಹುಬ್ಬಳ್ಳಿ ಶಹರ ಠಾಣಾ ಪೊಲೀಸರು ಹಣದ ಮಾಲೀಕರ ಪತ್ತೆಗೆ ಶೋಧಕಾರ್ಯ ನಡೆಸಿದ್ದಾರೆ.