ಬೆಂಗಳೂರು,ಸೆ.6- ಅಕ್ರಮ ಗಣಿ ಹಗರಣದಲ್ಲಿ ಲೋಕಾಯುಕ್ತ ವರದಿ ಮುಂದಿಟ್ಟುಕೊಂಡು ಪಾದಯಾತ್ರೆ ನಡೆಸಿ ಅಧಿಕಾರಕ್ಕೆ ಬಂದ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರ ಕಾಲಾನಂತರದಲ್ಲಿ ಲೋಕಾಯುಕ್ತ ಸಂಸ್ಥೆಯನ್ನೇ ದುರ್ಬಲಗೊಳಿಸಿತು. ಆದರೆ ಚುನಾವಣೆ ವೇಳೆ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬಂದರೆ ಲೋಕಾಯುಕ್ತವನ್ನು ಬಲಪಡಿಸುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿದರು. ಜನ ನಾವು ಏನು ಹೇಳಿದರೂ ನಂಬುತ್ತಾರೆ ಎಂಬ ಅವರ ಉದ್ಧಟತನವನ್ನು ಸಹಿಸಬಾರದು ಎಂದು ಮಾಜಿ ಲೋಕಾಯುಕ್ತ ನ್ಯಾ.ಸಂತೋಷ್ ಹೆಗಡೆ ಕಿಡಿಕಾರಿದ್ದಾರೆ.
ಶಾಸಕರ ಭವನದಲ್ಲಿ ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ವತಿಯಿಂದ ಏರ್ಪಡಿಸಲಾಗಿದ್ದ ಲೋಕಾಯುಕ್ತ ಬಲಪಡಿಸಿ ವಿಚಾರ ಸಂಕಿರಣದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಲೋಕಾಯುಕ್ತ ಸಂಸ್ಥೆಯ ಇತಿಹಾಸ ಮತ್ತು ಈಗ ಅದನ್ನು ದುರ್ಬಲಗೊಳಿಸಿರುವ ಹುನ್ನಾರಗಳ ಬಗ್ಗೆ ಪ್ರಮುಖ ಗಣ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಲೋಕಾಯುಕ್ತವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಸುತ್ತವೆ. ಅಧಿಕಾರ ಇಲ್ಲದಾಗ ಲೋಕಾಯುಕ್ತವನ್ನು ಬಲಪಡಿಸುತ್ತವೆ ಎಂಬ ಆರೋಪ ಕೇಳಿಬಂದಿತು.
ಸಂತೋಷ್ ಹೆಗಡೆ ಅವರು ಲೋಕಾಯುಕ್ತ ಮತ್ತು ಕೇಂದ್ರದಲ್ಲಿ ಲೋಕಪಾಲ್ ಸಂಸ್ಥೆಗಳ ಸ್ಥಾಪನೆಯ ಹಿನ್ನೆಲೆಯನ್ನು ವಿವರಿಸಿ , 1984ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಕರ್ನಾಟಕ ಲೋಕಾಯುಕ್ತ ಕಾಯ್ದೆಯನ್ನು ಜಾರಿಗೆ ತಂದರು. ಎರಡು ವರ್ಷಗಳ ನಂತರ ಲೋಕಾಯಕ್ತ ಸಂಸ್ಥೆ ಅಸ್ತಿತ್ವಕ್ಕೆ ಬಂತು. ಮೊದಲ ಬಾರಿಗೆ ಲೋಕಾಯುಕ್ತರಾಗಿದ್ದ ಪಂಜಾಬ್ನ ನ್ಯಾಯಮೂರ್ತಿಯೊಬ್ಬರು ನಾನು ನ್ಯಾಯಾಧೀಶ. ಜನರ ಜೊತೆ ಮಾತನಾಡುವುದಿಲ್ಲ ಎಂದು ಜನರಿಂದ ದೂರ ಇದ್ದರು. 2ನೇ ಅವಧಿಗೆ ಬಾಂಗ್ಲಾದೇಶದ ನ್ಯಾಯಧೀಶರೊಬ್ಬರು ಲೋಕಾಯುಕ್ತರಾಗಿದ್ದರು. 3ನೇ ಅವಧಿಗೆ ನ್ಯಾಯಮೂರ್ತಿ ಹಾಕೀಂ ಲೋಕಾಯುಕ್ತರಾಗಿದ್ದರು. ಅನಾರೋಗ್ಯದಿಂದ ಅವರು ಹೆಚ್ಚು ಕೆಲಸ ಮಾಡಲಿಲ್ಲ.
ನಂತರ 4ನೇ ಅವಧಿಗೆ ವೆಂಕಟಾಚಲಯ್ಯ ಅವರು ಲೋಕಾಯುಕ್ತರಾದರು. ಭ್ರಷ್ಟಾಚಾರ ನಿಗ್ರಹಕ್ಕೆ ದಾಳಿಗಳನ್ನು ನಡೆಸಿ ಕೇಸ್ ದಾಖಲಿಸಿ ಒಳ್ಳೆಯ ಕೆಲಸ ಮಾಡಿದರು. 5ನೇ ಅವಧಿಗೆ ನಾನು ಲೋಕಾಯುಕ್ತನಾದೆ. ನನ್ನ ಅವಧಿಯಲ್ಲಿ 470 ಪ್ರಕರಣಗಳು ಮುಖ್ಯಮಂತ್ರಿ ಹಾಗೂ ಐಎಎಸ್ ಐಪಿಎಸ್ ಅಧಿಕಾರಿಗಳು ಸೇರಿದಂತೆ ಹಲವರ ವಿರುದ್ಧ ದಾಖಲಾದವು.
ಅಹವಾಲು ಸ್ವೀಕಾರ ವಿಭಾಗದಲ್ಲಿ 23 ಸಾವಿರ ಪ್ರಕರಣಗಳು ದಾಖಲಾದವು. ನಂತರ ಭಾಸ್ಕರ್ ರಾವ್ ಅವರನ್ನು ನೇಮಕ ಮಾಡಲು ಮುಂದಾದಾಗ ವಕೀಲರ ಸಂಘ ವಿರೋಧ ವ್ಯಕ್ತಪಡಿಸಿ ಅವರ ವಿರುದ್ದ ಭ್ರಷ್ಟಾಚಾರ ಆರೋಪವಿದೆ ನೇಮಿಸಬೇಡಿ ಎಂದು ಆಗಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಮಾಡಿತು. ಆದರೆ ಅದನ್ನು ಪರಿಗಣಿಸದೆ ನೇಮಕ ಮಾಡಲಾಗಿತ್ತು.
ಭಾಸ್ಕರ್ ರಾವ್ ಅವರು ತಮ್ಮ ಮಗನ ಮೂಲಕ ಹಲವಾರು ಸರ್ಕಾರಿ ಅಧಿಕಾರಿಗಳನ್ನು ಎದುರಿಸಿದ ಆರೋಪಗಳಿವೆ ಎಂದು ಹೇಳಿದರು.
ತಾವು ಲೋಕಾಯುಕ್ತರಾಗಿದ್ದಾಗ ಅಕ್ರಮ ಗಣಿಗಾರಿಕೆ, ಮರಳು ಮಾಫಿಯಾ ಸೇರಿದಂತೆ ಹಲವಾರು ವರದಿಗಳನ್ನು ಸರ್ಕಾರಕ್ಕೆ ನೀಡಿದ್ದೆ. ಸಿದ್ದರಾಮಯ್ಯನವರ ಸರ್ಕಾರ ಅದನ್ನು ಬದಿಗಿಟ್ಟು, ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ಗಣಿ ಅಕ್ರಮದ ವಿರುದ್ಧ ಪಾದಯಾತ್ರೆ ಮಾಡಿಯೇ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಿದ್ದರು. ಅವರು ಬಂದ ನಂತರ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿದರು. ಆಡಳಿತದಿಂದ ಜನರಿಗಾಗುವ ಅನ್ಯಾಯವನ್ನು ಸರಿಪಡಿಸುವ ಅಧಿಕಾರವನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಸಲಾಗಿತ್ತು. ಅದಕ್ಕೆ ತೀವ್ರ ವಿರೋಧ ವ್ಯಕ್ತವಾದಾಗ ಆ ಪ್ರಯತ್ನ ಕೈ ಬಿಟ್ಟರು. ಆದರೆ ಪೆÇಲೀಸ್ ಅಧಿಕಾರವನ್ನು ಲೋಕಾಯುಕ್ತದಿಂದ ಕಸಿಯಲಾಗಿದೆ.
2017ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಲೋಕಾಯುಕ್ತವನ್ನು ಬಲಪಡಿಸುವ ಭರವಸೆ ನೀಡಲಾಗಿದೆ. ರಾಜಕೀಯ ಪಕ್ಷಗಳು ಜನರನ್ನು ಮೂರ್ಖರು ಎಂದು ಭಾವಿಸಿದಂತಿದೆ. ನಾವು ಏನೇ ಮಾಡಿದರೂ, ಏನೇ ಹೇಳಿದರೂ ನಂಬುತ್ತಾರೆ ಎಂದು ತಿಳಿದುಕೊಂಡಿದೆ. ಲೋಕಾಯುಕ್ತ ದುರ್ಬಲಗೊಳ್ಳಲು ಸಿದ್ದರಾಮಯ್ಯನವರೇ ಸರ್ಕಾರವೇ ಕಾರಣ. ಕಾಂಗ್ರೆಸ್ ಈಗ ಮತ್ತೆ ಬಲಪಡಿಸುತ್ತೇವೆ ಎನ್ನುವುದು ಜನರ ಕಣ್ಣಿಗೆ ಮಣ್ಣು ಎರಚುವ ಪ್ರಯತ್ನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೇಡಿಕೆ: ಲೋಕಾಯುಕ್ತ ಸಂಸ್ಥೆಗೆ ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಹಂತದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ವಿಚಾರಣೆಗೊಳಪಡಿಸುವ ಅಧಿಕಾರ ಕೊಡಬೇಕು, ಲೋಕಾಯುಕ್ತರನ್ನು ನೇಮಿಸಲು ರಾಜಕಾರಣಿಗಳ ಹೊರತಾದ ಸಂಸ್ಥೆಯೊಂದನ್ನು ನಿಯೋಜಿಸಬೇಕು ಎಂದು ಅವರು ಒತ್ತಾಯಿಸಿದರು.
ಈಗಿರುವ ಲೋಕಾಯುಕ್ತರಿಗೆ ಒಂದು ಕಾರು, ಕಚೇರಿ ಮಾತ್ರ ಕೊಟ್ಟಿದ್ದಾರೆ ಉಳಿದ ಯಾವ ಅಧಿಕಾರವೂ ಇಲ್ಲ. ಭ್ರಷ್ಟಾಚಾರ ನಿಗ್ರಹ ದಳ ಲಂಚ ಪಡೆಯುವ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕಾದರೆ ಪೂರ್ವಾನುಮತಿ ಪಡೆಯಬೇಕು. ಇಂಥ ದುರ್ಬಲ ವ್ಯವಸ್ಥೆಯನ್ನು ರೂಪಿಸಿದ್ದು ಸರಿಯಲ್ಲ ಎಂದು ಅವರು ಅಮಾಧಾನ ವ್ಯಕ್ತಪಡಿಸಿದರು.