ಬೆಂಗಳೂರು, ಸೆ.6- ರಾಜ್ಯದ ರೈತರು ತಮ್ಮ ಜಮೀನಿನಲ್ಲಿ ಒಂದು ಎಕರೆಗೆ ಕನಿಷ್ಟ 20 ಮರಗಳನ್ನು ನೆಟ್ಟು ಬೆಳೆಸುವುದನ್ನು ಕಡ್ಡಾಯಗೊಳಿಸಲು ಹೊಸ ಕಾನೂನು ರಚಿಸುವ ಚಿಂತನೆ ನಡೆಸಲಾಗುತ್ತದೆ ಎಂದು ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವ ಆರ್.ಶಂಕರ್ ತಿಳಿಸಿದರು.
ನಗರದ ವಿಕಾಸಸೌಧದಲ್ಲಿಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ವೆಬ್ಸೈಟ್ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀಗಂಧ ಸೇರಿದಂತೆ ತಾವು ಇಷ್ಟಪಟ್ಟ ಮರಗಳನ್ನು ರೈತರು ಬೆಳೆಸಬಹುದಾಗಿದೆ. ಪ್ರತಿ ಮರ ಬೆಳೆಸಲು 100ರೂ. ಪೆÇ್ರೀ ಧನ ನೀಡಲಾಗುವುದು ಎಂದರು.
ಒಂದು ಹೆಕ್ಟೇರ್ಗೆ 400 ಮರಗಳನ್ನು ಬೆಳೆಸಬಹುದಾಗಿದೆ. ಇದರಿಂದ ರೈತರಿಗೆ ಅನುಕೂಲವಾಗುವ ಜತೆಗೆ ಪರಿಸರ ಸಂರಕ್ಷಣೆಗೂ ಅನುಕೂಲವಾಗಲಿದೆ. ಸದ್ಯದಲ್ಲೆ ತಜ್ಞರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಮೀಸಲು ಮತ್ತು ಸುರಕ್ಷಿತ ಅರಣ್ಯ ಪ್ರದೇಶಗಳಲ್ಲಿ ರೆಸಾರ್ಟ್ ಸ್ಥಾಪನೆಗೆ ಅವಕಾಶ ಕಲ್ಪಿಸಿಲ್ಲ. ಅನುಮತಿ ಇಲ್ಲದೆ ರೆಸಾರ್ಟ್ ಸ್ಥಾಪಿಸಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದ ಅವರು, ರಾಜ್ಯದಲ್ಲಿ ಒಟ್ಟಾರೆ ಶೇ.21ರಷ್ಟಿದ್ದ ಅರಣ್ಯ ಪ್ರದೇಶ 22.5ರಷ್ಟಕ್ಕೆ ಹೆಚ್ಚಳವಾಗಿದೆ ಎಂದರು.
ಪ್ರಾಸ್ಟಿಕ್ ನಿಷೇಧ ಮಾಡಲಾಗಿದ್ದು, ಇನ್ನಷ್ಟು ಬಿಗಿಕ್ರಮ ಕೈಗೊಳ್ಳುವ ಮೂಲಕ ಪ್ಲಾಸ್ಟಿಕ್ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಜತೆಗೆ ಪ್ಲಾಸ್ಟಿಕ್ ಹಾನಿ ಬಗ್ಗೆ ಜಾಗೃತಿ ಮೂಡಿಸಲು ಬೀದಿ ನಾಟಕ ಕಾರ್ಯಾಗಾರಗಳನ್ನು ಆಯೋಜಿಸಲಾಗುವುದು ಎಂದರು.
ಮೃಗಾಲಯ ಪ್ರಾಧಿಕಾರದ ವೆಬ್ಸೈಟ್ನಲ್ಲಿ ಮೈಸೂರು, ಬನ್ನೇರುಘಟ್ಟ, ಕಲಬುರಗಿ, ದಾವಣಗೆರೆ, ಬಳ್ಳಾರಿ, ಗದಗ, ಬೆಳಗಾವಿ, ಹೊಸಪೇಟೆ, ಕಮಲಾಪುರ ಮೃಗಾಲಯಗಳ ಮಾಹಿತಿ ಪಡೆಯಬಹುದು. ಹಸಿರು ಕರ್ನಾಟಕ ಅಭಿಯಾನವನ್ನು ಆ.15 ರಿಂದ 18ರ ವರೆಗೆ ಆಯೋಜಿಸಿ 10 ಕೋಟಿ ಸಸಿಗಳನ್ನು ವಿತರಿಸಲಾಗಿದೆ. ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಯೋಜನೆ ತ್ವರಿತಗತಿಯಲ್ಲಿ ಸಾಗುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈ ಉದ್ಯಾನವನ ಹಾಗೂ ವಾಯುಗುಣಮಟ್ಟ ಮಾಪನ ಕೇಂದ್ರ ತೆರೆಯಲಾಗುತ್ತಿದೆ. ಟೆಂಡರ್ ಪ್ರಕ್ರಿಯೆಯೂ ಚಾಲನೆಯಲ್ಲಿದೆ ಎಂದು ವಿವರಿಸಿದರು.
ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್, ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರವಿ, ಐಎಸ್ಎಫ್ ಅಧಿಕಾರಿಗಳಾದ ಸಿ.ಜಯರಾಮ್, ಪುನ್ನಾಚಿ ಶ್ರೀಧರ್, ವಿಜಯ್ಕುಮಾರ್ ಉಪಸ್ಥಿತರಿದ್ದರು.