ನವದೆಹಲಿ: ಸಲಿಂಗಕಾಮ ಅಪರಾಧವಲ್ಲ ಹೀಗಂತಾ ಸುಪ್ರೀಂಕೋರ್ಟ್ ಮಹತ್ವದ ತೀರ್ಪುಕೊಟ್ಟಿದೆ. ಅಷ್ಟೇ ಅಲ್ಲ ಈ ಸಂಬಂಧ ಇದ್ದ 377 ಕಾನೂನನ್ನೇ ರದ್ದು ಪಡಿಸಿ ಮಹತ್ವದ ಆದೇಶ ನೀಡಿದೆ. ಹೌದು ಸುಪ್ರೀಂಕೋರ್ಟ್ ನಲ್ಲಿ ಇಂದು ಗೆಲುವು ಸಾಧಿಸಿರುವುದರ ಹಿಂದೆ ಒಬ್ಬ ವ್ಯಕ್ತಿಯ ಹಾಗೂ ಸಂಘಟನೆಯ ಅವಿರತ ಶ್ರಮವಿದೆ. ನಾಜ್ ಪೌಂಡೇಶನ್ ಹಾಗೂ ಅದರ ಅರ್ಜಿದಾರ ವಕೀಲ ಆನಂದ ಗ್ರೋವರ್ ಇದ್ದಾರೆ.
ಸುಪ್ರೀಂಕೋರ್ಟ್ ಇವತ್ತು ನೀಡಿರುವ ಮಹತ್ವದ ಆದೇಶದ ಬಳಿಕ ಮಾತನಾಡಿರುವ ಗ್ರೋವರ್, ಸೆಕ್ಷನ್ 377 ಭಾರತೀಯ ದಂಡ ಸಂಹಿತೆಯಿಂದ ಕೊನೆಗೊಳ್ಳಲಿದೆ ಎಂಬ ಬಗ್ಗೆ ನನಗೆ ವಿಶ್ವಾಸವಿತ್ತು. ಪದೇ ಪದೇ ನಾವು ಕಾನೂನು ಹೋರಾಟದಲ್ಲಿ ಸೋತಿರಬಹುದು. ಆದರೆ ಗೆಲ್ಲುವ ವಿಶ್ವಾಸ ಮಾತ್ರ ಕಡಿಮೆ ಆಗಿರಲಿಲ್ಲ ಎಂದು ಗ್ರೋವರ್ ವಿಶ್ವಾಸದಿಂದ ಹೇಳಿಕೊಂಡಿದ್ದಾರೆ.
1998 ರಲ್ಲಿ ಆರಂಭವಾದ ಹೋರಾಟ
ಅಂದ ಹಾಗೆ ಈ ಹೋರಾಟ ಆರಂಭವಾಗಿದ್ದು 1998 ರಲ್ಲಿ ಹೆಚ್ಐವಿ ಪೊಸಿಟಿವ್ ನೌಕರನೊಬ್ಬ ತಾರತಮ್ಯ ನೀತಿ ಪ್ರಶ್ನಿಸಿ ಬಾಂಬೆ ಹೈಕೋರ್ಟ್ ಮೆಟ್ಟಿಲು ಏರಿದ್ದರು. ಆಗ ಗೇ ಸೆಕ್ಸ್ನಿಂದಾಗಿ ಹೆಚ್ಐವಿ ಬರುತ್ತೆ ಎಂಬ ವಾದ ಬಲವಾಗಿತ್ತು. ಈ ವೇಳೆಯೇ ಪ್ರಕರಣ ಕೈಗೆತ್ತಿಕೊಂಡ ಗ್ರೋವರ್ ಸೆಕ್ಷನ್ 377 ರ ನಿರ್ಮೂಲನೆಗಾಗಿ ಹೋರಾಟ ಆರಂಭಿಸಿದ್ದರು. ನಾಜ್ ಪೌಂಡೇಶನ್ನಿಂದ ಈ ಹೋರಾಟಕ್ಕೆ ಮುನ್ನುಡಿ ಬರೆಯಲಾಗಿತ್ತು.
ಅದಾದ ಬಳಿಕ ದೆಹಲಿಯ ನಾಜ್ ಪೌಂಡೇಶನ್ ಇದರ ಮೇಲೆ ಅಧ್ಯಯನ ಮಾಡಿ 2001 ರಲ್ಲಿ ಪಿಟಿಷನ್ ಸಲ್ಲಿಸಿದ್ದೇವು ಎಂದು ಮಾಹಿತಿ ನೀಡಿರುವ ಗ್ರೋವರ್, 2009 ರಲ್ಲಿ ಅಂತಿಮವಾಗಿ ದೆಹಲಿ ಹೈಕೋರ್ಟ್ನಲ್ಲಿ LGBTQI ಸಮುದಾಯದ ಪರ ತೀರ್ಪು ಬಂದು ಗೆಲುವು ಸಾಧಿಸಿದ್ದೆವು ಎಂದಿದ್ದಾರೆ. ಆದರೆ, ಕೆಲ ಹಿಂದೂ ಹಾಗೂ ಕ್ರಿಶ್ಚಿಯನ್ ಸಂಘಟನೆಗಳು ಸುಪ್ರೀಂಕೋರ್ಟ್ ಮೆಟ್ಟಿಲೇರುವ ಮೂಲಕ ದೆಹಲಿ ಹೈಕೋರ್ಟ್ ತೀರ್ಪನ್ನೇ ಸುಪ್ರೀಂಕೋರ್ಟ್ ರದ್ದು ಮಾಡಿತ್ತು.