ಬೆಂಗಳೂರು, ಸೆ.6-ಬೆಳಗಾವಿಯ ಪ್ರತಿಷ್ಠಿತ ಕರ್ನಾಟಕ ಲಾ ಸೊಸೈಟಿ ಮತ್ತು ರಾಜ ಲಖಮ್ಗೌಡ ಕಾನೂನು ಕಾಲೇಜಿಗೆ ಈಗ ಅಮೃತ ಮಹೋತ್ಸವದ ಸಡಗರ-ಸಂಭ್ರಮ.
ಉತ್ತರ ಕರ್ನಾಟಕದ ಅತ್ಯಂತ ಹಳೆಯ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾದ ಕೆಎಲ್ಎಸ್ ಮತ್ತು ಆರ್.ಎಲ್. ಲಾ ಕಾಲೇಜಿನ ಪ್ಲಾಟಿನಂ ಜ್ಯೂಬಿಲಿ ಸಮಾರಂಭ ಇದೇ ತಿಂಗಳ 15ರಂದು ಶನಿವಾರ ಬೆಳಗ್ಗೆ 11.30ಕ್ಕೆ ಬೆಳಗಾವಿಯ ಉದಯಂಬಾಗ್ನಲ್ಲಿರುವ ಕೆಎಲ್ಎಸ್ ಜಿಐಟಿ ಕ್ಯಾಂಪಸ್ನಲ್ಲಿ ನಡೆಯಲಿದೆ ಎಂದು ಹಿರಿಯ ವಕೀಲರಾದ ಪ್ರದೀಪ್ ಸಾಹುಕರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಕೆಎಲ್ಎಸ್ ಅಧ್ಯಕ್ಷ ಅನಂತ್ ಮಂಡಗಿ ಅಧ್ಯಕ್ಷತೆ ವಹಿಸುವರು.
ರಾಜ್ಯಪಾಲ ವಜುಭಾಯಿ ಆರ್. ವಾಲಾ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಮೋಹನ್ ಎಂ.ಶಾಂತಗೌಡರ್, ಎಸ್. ಅಬ್ದುಲ್ ನಜೀರ್, ವಿನೀತ್ ಸರನ್, ಭಾರತದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರುಗಳು. ಸಂಸದ ಸುರೇಶ್ ಅಂಗಡಿ ಮೊದಲಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಅಮೃತ ಮಹೋತ್ಸವ ಕಟ್ಟಡದ ಉದ್ಘಾಟನೆ ಸಮಾರಂಭ ಸಹ ನೆರವೇರಲಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಕೆ. ನಂಬ್ಯಾರ್ ಅವರ ಪುತ್ಥಳಿ ಹಾಗೂ ಮಾಜಿ ನ್ಯಾಯಮೂರ್ತಿಗಳಾದ ಇ.ಎಸ್.ವೆಂಕಟರಾಮಯ್ಯ ಮತ್ತು ವಿ.ಎಸ್.ಮಳೀಮಠ್ ಅವರ ಅಳೆತ್ತರದ ಭಾವಚಿತ್ರಗಳನ್ನೂ ಅನಾವರಣಗೊಳಿಸಲಾಗುವುದು. ಕೆ.ಕೆ.ವೇಣುಗೋಪಾಲ್ ಸಭಾಂಗಣವನ್ನು ಸಹ ಸಮರ್ಪಿಸಲಾಗುವುದು ಎಂದು ತಿಳಿಸಿದರು.