ತಿರುವನಂತಪುರಂ: ನೆರೆಯಿಂದ ಸಂತ್ರಸ್ತಗೊಂಡಿರುವ ಕೇರಳದಲ್ಲಿ 8 ದಿನಗಳ ಕಾಲ ಐಎಎಸ್ ಅಧಿಕಾರಿಯೊಬ್ಬರು ತನ್ನ ಹೆಸರನ್ನು ಎಲ್ಲೂ ಹೇಳದೇ ಸ್ವಯಂಸೇವಕರಂತೆ ಕೆಲಸ ಮಾಡಿದ್ದಾರೆ.
2012ರ ಬ್ಯಾಚ್ ಅಧಿಕಾರಿ ಪ್ರಸ್ತುತ ದಾದ್ರಾ ಮತ್ತು ನಗರ್ ಹವೇಲಿಯ ಜಿಲ್ಲಾಧಿಕಾರಿಯಾಗಿರುವ ಕಣ್ಣನ್ ಗೋಪಿನಾಥನ್ ಸ್ವಯಂಸೇವಕರ ಜೊತೆಯೇ ಕೆಲಸ ಮಾಡಿ ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
8ನೇ ದಿನ ಕೇರಳ ಬುಕ್ ಮತ್ತು ಪಬ್ಲಿಕೇಶನ್ ಕೇಂದ್ರದಲ್ಲಿ ವಸ್ತುಗಳನ್ನು ಲೋಡಿಂಗ್ ಮಾಡುವ ವೇಳೆ ಎರ್ನಾಕುಲಂ ಜಿಲ್ಲಾಧಿಕಾರಿ ಮೊಹಮ್ಮದ್ ಸಫ್ರುಲ್ಲಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸಫ್ರುಲ್ಲಾ ಅವರಿಗೆ ಮೊದಲೇ ಗೋಪಿನಾಥನ್ ಅವರ ಪರಿಚಯ ಇತ್ತು. ಈ ವೇಳೆ ಇಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ ಐಎಎಸ್ ಅಧಿಕಾರಿ ಎಂದು ಪರಿಚಯಿಸಿದಾಗ ಗೋಪಿನಾಥನ್ ಅವರ ವ್ಯಕ್ತಿತ್ವ ಅಲ್ಲಿದ್ದವರಿಗೆ ಗೊತ್ತಾಗಿದೆ.
ದಾದ್ರಾ ಮತ್ತು ನಗರ್ಹವೇಲಿಯ 1 ಕೋಟಿ ರೂ. ನೆರವು ನೀಡಲು ಗೋಪಿನಾಥ್ ಕೇರಳಕ್ಕೆ ಆಗಮಿಸಿದ್ದರು. ಆಗಸ್ಟ್ 26 ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಚೆಕ್ ನೀಡಿದ ಬಳಿಕ ಅವರು ತಿರುವನಂತಪುರಂನಿಂದ ನೇರವಾಗಿ ಸರ್ಕಾರಿ ಬಸ್ಸು ಹತ್ತಿದ್ದು ಚೆಂಗನ್ನೂರಿಗೆ. ಕೇರಳದಲ್ಲಿ ನೆರೆಯಿಂದ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶದಲ್ಲಿ ಒಂದಾಗಿರುವ ಚೆಂಗನ್ನೂರಿನಲ್ಲಿ ಇಳಿದ ಇವರು ಸ್ವಯಂಸೇವಕರಂತೆ ಕೆಲಸ ಮಾಡತೊಡಗಿದರು.
ಜನ ಗೋಪಿನಾಥನ್ ಅವರನ್ನು ಯಾರು ನೀವು ಪ್ರಶ್ನಿಸಿದಾಗ, ನಾನು ಸರ್ಕಾರೇತರ ಸಂಸ್ಥೆಯೊಂದರ ಸ್ವಯಂಸೇವಕ ಎಂದು ಹೇಳಿಕೊಂಡಿದ್ದರು. ಪುನರ್ವಸತಿ ಕೇಂದ್ರದಲ್ಲಿ ಕೆಲಸ ಮಾಡುವ ಜೊತೆ ಅವರು ಭಾಷಾಂತರ ಮಾಡುತ್ತಿದ್ದರು. ಐಎಎಸ್ ಅಧಿಕಾರಿಗಳಿಗೆ ಗೋಪಿನಾಥ್ ಕೇರಳದಲ್ಲಿ ಕೆಲಸ ಮಾಡುತ್ತಿರುವ ವಿಚಾರ ಗೊತ್ತಿತ್ತು. ಕೆಲ ಐಎಎಸ್ ಸಹಪಾಠಿಗಳಿಗೆ ಮಾತ್ರ ಗೋಪಿನಾಥನ್ ಸ್ವಯಂ ಸೇವಕರಂತೆ ಕೆಲಸ ಮಾಡುತ್ತಿದ್ದಾರೆ ಎನ್ನುವ ವಿಚಾರ ತಿಳಿದಿತ್ತು.
ತನ್ನ ಕೆಲಸದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಏನು ದೊಡ್ಡ ಕೆಲಸ ಮಾಡಿಲ್ಲ. ನಾನೊಬ್ಬ ಸಾಮಾನ್ಯ ವ್ಯಕ್ತಿಯಂತೆ ಕೆಲಸ ಮಾಡಿದ್ದೇನೆ ಅಷ್ಟೇ ಎಂದು ತಿಳಿಸಿದರು.
ಕೊನೆಗೆ ನನ್ನ ಪರಿಚಯ ತಿಳಿದಾಗ ಜನ ನನ್ನ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ದರು. ಇದರಿಂದ ನನಗೆ ಬಹಳ ಮುಜುಗರವಾಯಿತು. ಈ ವೇಳೆ ಅಧಿಕಾರಿಗಳಿಗೆ ನಾನು ಐಎಎಸ್ ಅಧಿಕಾರಿ ಎನ್ನುವ ವಿಚಾರ ಗೊತ್ತಾದ ಬಳಿಕ ಅವರು ಕೆಲಸದ ವೇಳೆ ನಾವು ಏನಾದರೂ ನಿಮಗೆ ಬೈದಿದ್ದರೆ ಅದಕ್ಕೆ ಕ್ಷಮೆಯಾಚಿಸುತ್ತೇವೆ ಎಂದಿದ್ದರು. ನೀವು ನನ್ನನ್ನು ಹೀರೋನಂತೆ ಬಿಂಬಿಸಬೇಡಿ. ತಳ ಮಟ್ಟದಲ್ಲಿ ಬಹಳಷ್ಟು ಜನ ಕಷ್ಟಪಟ್ಟು ಸಹಾಯ ಮಾಡುತ್ತಿದ್ದಾರೆ. ಅವರೇ ನಿಜವಾದ ಹೀರೋಗಳು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಕೇರಳದ ಪುದುಪ್ಪಲ್ಲಿಯವರಾದ ಗೋಪಿನಾಥನ್ ಕೇರಳದಿಂದ ತೆರಳಿದ ಬಳಿಕ ಸಾಂದರ್ಭಿಕ ರಜೆಯನ್ನು ಹಾಕಿದ್ದರೂ ದಾದ್ರಾ ಮತ್ತು ನಗರ್ ಹವೇಲಿ ಆಡಳಿತ ಸರ್ಕಾರಿ ಕೆಲಸದ ನಿಮಿತ್ತ ಪ್ರವಾಸ ಕೈಗೊಂಡಿದ್ದಾರೆ ಎಂದು ದಾಖಲು ಮಾಡಿಕೊಂಡಿದೆ.