ಬೆಂಗಳೂರು,ಸೆ.6- ನಗರದ ಎಲ್ಲಾ ವಾರ್ಡ್ ವ್ಯಾಪ್ತಿಗಳಲ್ಲಿನ ಅಂಗಡಿ ಹಾಗೂ ಮಳಿಗೆಗಳಲ್ಲಿ ಕನ್ನಡ ನಾಮಫಲಕ ಅಳವಡಿಸದಿದ್ದರೆ ಕನ್ನಡ ನಾಮಫಲಕ ಆಂದೋಲನ ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ, ನಗರದ ಎಲ್ಲಾ ವಾರ್ಡ್ಗಳಲ್ಲಿ ಬಿಬಿಎಂಪಿ ಮಳಿಗೆಗಳು ಸೇರಿದಂತೆ ಇತರೆ ವಾಣಿಜ್ಯ ಮಳಿಗೆಗಳಲ್ಲಿ ಕಡ್ಡಾಯವಾಗಿ ನಾಮಫಲಕ ಅಳವಡಿಸಬೇಕೆಂದು ಬಿಬಿಎಂಪಿ ಆದೇಶ ಹೊರಡಿಸಿದೆ. ಆದರೆ ಅದು ಸಮರ್ಪಕವಾಗಿ ಜಾರಿಗೊಂಡಿಲ್ಲ. ಕೂಡಲೇ ಆದೇಶವನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲು ಸೂಕ್ತ ಕ್ರಮ ಕೈಗೊಳ್ಳಬೇಕು. ಆದೇಶ ಪಾಲಿಸದೇ ಇರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆಯನ್ನು ಸ್ಥಾಪಿಸಬೇಕು. ಕನ್ನಡ ಭಾಷೆ, ನಾಡಿನ ಸಂಪೂರ್ಣ ಮಾಹಿತಿ, ಕೆಂಪೇಗೌಡರ ಸಾಧನೆ ಬಗ್ಗೆ ಮಾಹಿತಿಗಳ ಫಲಕಗಳನ್ನು ಅಳವಡಿಸಬೇಕು ಎಂದರು.
ನಾಮಫಲಕ ಬದಲಾಯಿಸಲು ಕೊಟ್ಟ ಗಡುವು ಮುಗಿದಿದ್ದರೂ ಬದಲಾಯಿಸದೆ ಇರುವ ಅಂಗಡಿಗಳ ಪರವಾನಗಿ ರದ್ದುಪಡಿಸಬೇಕು. ನಗರದಲ್ಲಿರುವ ಎಲ್ಲ ರೀತಿಯ ವಾಣಿಜ್ಯ ವ್ಯಾಪಾರ ಮಳಿಗೆಗಳ ನಾಮಫಲಕಗಳು ಬಿಬಿಎಂಪಿ ಆದೇಶದಂತಿರಬೇಕು ಎಂದು ಹೇಳಿದರು.
ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡೂ ಬದಿಗಳಲ್ಲಿ ಕನ್ನಡ ನಾಡಿನ ಹಿರಿಮೆ ಸಾರುವ ಚಿತ್ರ ಸಹಿತ ಮಾಹಿತಿ ಫಲಕಗಳನ್ನು ಅಳವಡಿಸಬೇಕು ಎಂದು ಮುಖ್ಯಮಂತ್ರಿಗಳು, ವಿಮಾನ ನಿಲ್ದಾಣ ಅಧಿಕಾರಿಗಳು ಹಾಗೂ ಮಹಾಪೌರರನ್ನು ಪ್ರವೀಣ್ ಶೆಟ್ಟಿ ಒತ್ತಾಯಿಸಿದರು.