ಪ್ರತಿಷ್ಠೆಯನ್ನು ಪಣಕ್ಕಿಟ್ಟಿ ಲಕ್ಷ್ಮಿ ಹೆಬ್ಬಾಳ್ಕರ್-ಜಾರಕಿಹೊಳಿ ಬಣ

 

ಬೆಂಗಳೂರು, ಸೆ.6- ಬೆಳಗಾವಿಯಲ್ಲಿ ಉಂಟಾಗಿರುವ ಕಾಂಗ್ರೆಸ್‍ನ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ. ಜಾರಕಿಹೊಳಿ ಸಹೋದರರು-ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಪ್ರತಿಷ್ಠೆಯ ಕಣವಾಗಿರುವ ಪಿಎಲ್‍ಡಿ ಬ್ಯಾಂಕ್ ಚುನಾವಣೆ ನಾಳೆ ನಡೆಯಲಿದ್ದು, ಎರಡೂ ಬಣಗಳ ನಡುವೆ ಭಿನ್ನಮತ ತಾರಕಕ್ಕೇರಿದೆ.
ಇಬ್ಬರ ಪರ-ವಿರೋಧದ ಹೇಳಿಕೆಗಳು ತೀವ್ರಗೊಂಡಿವೆ. ಪರಿಸ್ಥಿತಿ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪಿದೆ. ಉಭಯ ಬಣಗಳು ಯಾರಿಗೂ ಜಗ್ಗುತ್ತಿಲ್ಲ. ಲಕ್ಷ್ಮಿ ಹೆಬ್ಬಾಳ್ಕರ್-ಜಾರಕಿಹೊಳಿ ಸಹೋದರರು ಪಕ್ಷದ ಮುಖಂಡರಿಗಾಗಲಿ, ಹೈಕಮಾಂಡ್ ನಾಯಕರ ಹೇಳಿಕೆಗಾಗಲಿ ಮಾನ್ಯತೆ ನೀಡದೆ ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದಾರೆ.

ಬೆಳಗಾವಿ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ನಡೆಸಲು ಮುಂದಾಗುತ್ತಿದ್ದಂತೆ ಸಚಿವ ರಮೇಶ್ ಜಾರಕಿಹೊಳಿ ಅವರು ತಾಲೂಕು ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಮತ್ತು ಪಿಡಿಒಗಳ ಸಭೆ ಕರೆದಿರುವುದು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಆಕ್ರೋಶಕ್ಕೆ ಕಾರಣವಾಗಿದೆ.
ನಾಳಿನ ಪಿಎಲ್‍ಡಿ ಬ್ಯಾಂಕ್ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಣ ಮೇಲುಗೈ ಸಾಧಿಸದಂತೆ ಅಧಿಕಾರಿಗಳಿಗೆ ಸಚಿವರು ಆದೇಶ ಹೊರಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಳೆದ 18 ವರ್ಷಗಳಿಂದ ಅವಿರೋಧವಾಗಿ ಆಯ್ಕೆಯಾಗುತ್ತಿದ್ದ ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಸ್ಥಾನಗಳಿಗೆ ನ್ಯಾಯಾಲಯದಿಂದ ಚುನಾವಣೆ ನಡೆಯುವಂತೆ ಮಾಡಿರುವ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಕೆಂಡ ಕಾರುತ್ತಿರುವ ಜಾರಕಿಹೊಳಿ ಸಹೋದರರು ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟು ಚುನಾವಣೆ ನಡೆಸುತ್ತಿದ್ದರಾದರೂ 14 ನಿರ್ದೇಶಕರ ಸ್ಥಾನಗಳಲ್ಲಿ 9 ಜನ ಲಕ್ಷ್ಮಿ ಹೆಬ್ಬಾಳ್ಕರ್ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಐದು ಜನ ನಿರ್ದೇಶಕರು ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಎಲ್ಲ ಸದಸ್ಯರಿಗೂ ರಕ್ಷಣೆ ನೀಡುವಂತೆ ಚುನಾವಣಾಧಿಕಾರಿ ಮಂಜುಳಾ ನಾಯಕ್ ಪತ್ರ ಬರೆದಿದ್ದಾರೆ.
ಜಿಲ್ಲೆಯ ಕಾಂಗ್ರೆಸ್ ಘಟಕದ ಭಿನ್ನಾಭಿಪ್ರಾಯ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿ, ಈ ಬೆಳವಣಿಗೆ ಸರ್ಕಾರದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ. ಪಕ್ಷದ ಮುಖಂಡರು ಬೆಳಗಾವಿ ಕಾಂಗ್ರೆಸ್ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ. ಸಮಸ್ಯೆ ಬಗೆಹರಿಯುತ್ತದೆ ಎಂದು ಹೇಳಿದರು.

ಮಾಜಿ ಸಚಿವರಾದ ಎಂ.ಬಿ.ಪಾಟೀಲ್ ಮಾತನಾಡಿ, ಪಕ್ಷದಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯವನ್ನು ನಾಯಕರು ಬಗೆಹರಿಸಿದ್ದಾರೆ. ಎಲ್ಲ ಪಕ್ಷಗಳಲ್ಲಿ ಗೊಂದಲ ಉಂಟಾಗುವುದು ಸಹಜ. ಬಿಜೆಪಿಯಲ್ಲಿ ಏನೂ ಗೊಂದಲವಿಲ್ಲವೆ? ಜಗದೀಶ್ ಶೆಟ್ಟರ್, ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರಲ್ಲಿ ಭಿನ್ನಾಭಿಪ್ರಾಯಗಳಿಲ್ಲವೆ ಎಂದು ಪ್ರಶ್ನಿಸಿದ್ದಾರೆ.
ಬೆಳಗಾವಿ ನಾಯಕರ ಭಿನ್ನಾಭಿಪ್ರಾಯ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ