ಸಲಿಂಗಕಾಮ ಅಪರಾಧವಲ್ಲ: 156 ವರ್ಷದ ಕಾನೂನು ರದ್ದುಪಡಿಸಿದ ಸುಪ್ರೀಂಕೋರ್ಟ್

ನವದೆಹಲಿ: ಸಲಿಂಗಕಾಮ ಅಪರಾಧ ಅಲ್ಲ ಎಂದು ಸುಪ್ರೀಂಕೋರ್ಟ್​ ಮಹತ್ವದ ಆದೇಶ ನೀಡಿದೆ. ಸೆಕ್ಷನ್​ 377 ಅನ್ನು ರದ್ದು ಪಡಿಸಿದ ಸುಪ್ರೀಂಕೋರ್ಟ್​ ಐತಿಹಾಸಿಕ ತೀರ್ಪು ನೀಡಿದೆ.

ಬ್ರಿಟನ್​ನಲ್ಲಿ ಸಲಿಂಗಕಾಮ ಅಪರಾಧವಲ್ಲ. ಆದರೆ,  ಬ್ರಿಟಿಷರು ರೂಪಿಸಿದ ಕಾನೂನು ಪ್ರಕಾರ ನಿಷೇಧ ಹೇರಿರುವುದು ಸರಿಯಲ್ಲ ಎಂದು ಸಲಿಂಗಕಾಮಿಗಳ ಪರ ವಕೀಲರು ವಾದ ಮಂಡಿಸಿದ್ದರು.

ಈ ಬಗ್ಗೆ ಸಂಪೂರ್ಣವಾದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ನ ಐವರು ನ್ಯಾಯಮೂರ್ತಿಗಳ ಪೀಠ ಇಂದು ಮಹತ್ವದ ತೀರ್ಪನ್ನ ಪ್ರಕಟಿಸಿದೆ.  ಅಂತಿಮವಾಗಿ 156 ವರ್ಷಗಳ ಕಾನೂನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಅಂತಿಮವಾಗಿ ತೀರ್ಪು ನೀಡಿದ ಮುಖ್ಯನ್ಯಾಯಮೂರ್ತಿ ದೀಪಕ್​ ಮಿಶ್ರಾ ‘ವೈವಿಧ್ಯತೆ ಶಕ್ತಿಯನ್ನ ಗೌರವಿಸಬೇಕಾಗಿದೆ. ಸಲಿಂಗಿಗಳಿಗೆ ಸ್ವತಂತ್ರವಾಗಿ ಜೀವಿಸುವ ಹಕ್ಕಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಸಲಿಂಗಕಾಮ ಅಪರಾಧವಲ್ಲ ಎಂದು ಘೋಷಿಸಿದ್ದಾರೆ.  ಈ ಮೂಲಕ 156 ವರ್ಷಗಳ ಕಾನೂನಿಗೆ ಎಳ್ಳುನೀರು ಬಿಡಲಾಗಿದೆ.  ಸಲಿಂಗಗಳ ಕಾನೂನು ಹೋರಾಟಕ್ಕೆ ಜಯ ಸಿಕ್ಕಿದೆ. ಈ ತೀರ್ಪಿನ ಮೂಲಕ ಸುದೀರ್ಘ ಕಾನೂನು ಹೋರಾಟಕ್ಕೆ ಅಂತಿಮ ತೆರೆ ಎಳೆಯಲಾಗಿದೆ.  ಅಷ್ಟೇ ಅಲ್ಲ ಐವರು ನ್ಯಾಯಮೂರ್ತಿಗಳ ಪೀಠದಿಂದ ಸಹಮತದ ತೀರ್ಪು ಹೊರಬಿದ್ದಿದೆ.

2009 ರಲ್ಲಿ ದೆಹಲಿ ಹೈಕೋರ್ಟ್​ ಸೆಕ್ಷನ್​ 377 ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಹಿಂದೂ ಹಾಗೂ ಕ್ರಿಶ್ಚಿಯನ್​ ಸಮುದಾಯಗಳು  ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದವು. ಆಗ ವಿಚಾರಣೆ ನಡೆಸಿದ್ದ ಸುಪ್ರೀಂ ದೆಹಲಿ ಹೈಕೋರ್ಟ್​ ತೀರ್ಪನ್ನ ವಜಾ ಮಾಡಿ, ಸೆಕ್ಷನ್​ 377ಗೆ ಸಾಂವಿಧಾನಿಕ ಮಾನ್ಯತೆ ನೀಡಿತ್ತು. ಈ ತೀರ್ಪನ್ನ ಪುನರ್​ ಪರಿಶೀಲಿಸುವಂತೆ ಲೈಂಗಿಕ ಅಲ್ಪಸಂಖ್ಯಾತರು ಸಲ್ಲಿಸಿದ ಪುನರ್​ ಪರಿಶೀಲನಾ ಅರ್ಜಿಯನ್ನ ಸುಪ್ರೀಂಕೋರ್ಟ್​ ವಜಾ ಮಾಡಿತ್ತು.

ಖಾಸಗಿತನ ಮೂಲಭೂತ ಹಕ್ಕು : ಸುಪ್ರೀಂಕೋರ್ಟ್

ಆದರೆ 2017 ರಲ್ಲಿ ಸುಪ್ರೀಂಕೋರ್ಟ್​ ಖಾಸಗಿ ತನ ಸಂವಿಧಾನ ಮೂಲಭೂತ ಹಕ್ಕಾಗಿದೆ ಎಂದು  ಮಹತ್ವದ ತೀರ್ಪು ನೀಡಿತ್ತು. ಇದು ಲೈಂಗಿಕ ಅಲ್ಪಸಂಖ್ಯಾತರ ಕಾನೂನು ಹೋರಾಟಕ್ಕೆ ಬಲ ನೀಡಿತ್ತು. ಇದೇ ಆಧಾರದ ಮೇಲೆ ಅರ್ಜಿ ಸಲ್ಲಿಸಿದ್ದ ಸಂಘಟನೆಗಳು ಸುಪ್ರೀಂಕೋರ್ಟ್​ನಲ್ಲಿ ನ್ಯಾಯ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸಂಭ್ರಮಾಚರಣೆ:

ಸುಪ್ರೀಂಕೋರ್ಟ್​ನಿಂದ ತೀರ್ಪು ಹೊರಬೀಳುತ್ತಿದ್ದಂತೆಯೇ ಲೈಂಗಿಕ ಅಲ್ಪಸಂಖ್ಯಾತರು ಸೇರಿದಂತೆ ಸಲಿಂಗಕಾಮ ಹಕ್ಕಿಗಾಗಿ ಹೋರಾಟ ಮಾಡಿದವರು ಸಂಭ್ರಮಾಚರಣೆ ಮಾಡಿದರು.

ಕರಣ್​ ಜೋಹರ್​,  ಶಶಿ ತರೂರ್​, ಚೇತನ ಭಗತ್​ ಮುಂತಾದವರು ಸುಪ್ರೀಂ ತೀರ್ಪನ್ನು ಸ್ವಾಗತಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ