ಬೆಂಗಳೂರು,ಸೆ.6- ಭ್ರಷ್ಟಾಚಾರ ನಿಗ್ರಹದಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳು ಉದಾಸೀನ ತೋರಿಸುತ್ತಿವೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಈವರೆಗೂ ಲೋಕಪಾಲ್ಗೆ ಮುಖ್ಯಸ್ಥರನ್ನು ನೇಮಕ ಮಾಡಿಲ್ಲ. ಇತ್ತೀಚೆಗೆ ಲೋಕಪಾಲರ ನೇಮಕಾತಿಗೆ ಸಭೆ ಕರೆಯಲಾಗಿತ್ತಾದರೂ ಅದರಲ್ಲಿ ವಿರೋಧ ಪಕ್ಷದ ನಾಯಕರಿಗೆ ಮತ ಚಲಾಯಿಸುವ ಅವಕಾಶ ನೀಡಿರಲಿಲ್ಲ. ಕೇವಲ ಆಹ್ವಾನ ಮಾತ್ರ ನೀಡಲಾಗಿತ್ತು. ಹೀಗಾಗಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸಭೆಯನ್ನು ಬಹಿಷ್ಕರಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದರು.
ಲೋಕಾಯುಕ್ತರನ್ನು ರಾಜಕೀಯ ನೇಮಕಾತಿ ಎಂದು ಪರಿಗಣಿಸಬಾರದು. ನಿಷ್ಪಕ್ಷಪಾತವಾಗಿ ಕೆಲಸ ಮಾಡುವರನ್ನು ನಿಯೋಜಿಸಬೇಕು. ಲೋಕಾಯುಕ್ತವನ್ನು ದುರ್ಬಲಗೊಳಿಸುವ ಸಲುವಾಗಿಯೇ ಎಸಿಬಿಯನ್ನು ರಚಿಸಲಾಗಿದೆ. ಎಸಿಬಿ ಯಾರ ವಿರುದ್ಧವಾದರೂ ಕ್ರಮ ಕೈಗೊಳ್ಳಬೇಕಾದರೆ ಸರ್ಕಾರದ ಪೂರ್ವಾನುಮತಿ ಪಡೆಯಬೇಕಿದೆ.
ಈ ರೀತಿ ಸಾವಿರಾರು ಕಡತಗಳು ಸರ್ಕಾರದಲ್ಲಿ ನೆನೆಗುದಿಗೆ ಬಿದ್ದಿದೆ. ಅಕ್ರಮ ಆಸ್ತಿ ಹೊಂದಿರುವವರ ವಿರುದ್ಧವೂ ಎಸಿಬಿ ಅಧಿಕಾರಿಗಳು ಕ್ರಮ ಕೈಗೊಳ್ಳಲಾಗುತ್ತಿಲ್ಲ. ಸರ್ಕಾರ ಈ ರೀತಿಯ ಕಡತಗಳನ್ನು ಆರು ತಿಂಗಳ ಒಳಗೆ ವಿಲೇವಾರಿ ಮಾಡಬೇಕೆಂದು ಸುಪ್ರೀಂಕೋರ್ಟ್ ಹೇಳಿದೆ. ಒಂದು ವೇಳೆ ನಿಗದಿತ ಅವಧಿಯಲ್ಲಿ ಅನುಮತಿ ನೀಡದಿದ್ದರೆ ಅದನ್ನು ಸಹಮತ ಎಂದು ಪರಿಗಣಿಸಿ ಮುಂದಿನ ಕ್ರಮ ಜರುಗಿಸುವ ಅಧಿಕಾರ ಲೋಕಾಯುಕ್ತ ಅಥವಾ ಎಸಿಬಿ ಅಧಿಕಾರಿಗಳಿಗೆ ಕೊಡುವಂತಹ ಕಾನೂನು ತಿದ್ದುಪಡಿ ತರಬೇಕು.
ನನ್ನ ಪ್ರಕಾರ 6 ತಿಂಗಳ ಬದಲಿಗೆ ಒಂದು ತಿಂಗಳ ಒಳಗೆ ಅನುಮತಿಯ ಪ್ರಸ್ತಾವಗಳು ಇತ್ಯರ್ಥಗೊಳ್ಳಬೇಕು. ಈ ಮೂಲಕ ಕುಲಗೆಟ್ಟು ಹೋಗಿರುವ ಲೋಕಾಯುಕ್ತವನ್ನು ಸರಿ ದಾರಿಗೆ ತರಬೇಕು ಎಂದರು.
ಸಾಮಾಜಿಕ ಹೋರಟಗಾರ ಎಸ್.ಆರ್.ಹಿರೇಮಠ ಮಾತನಾಡಿ, ಲೋಕಾಯುಕ್ತ ಸಂಸ್ಥೆಗೆ ಮುಖ್ಯಸ್ಥರನ್ನು ನೇಮಿಸುವಾಗ ನಡೆದ ರಾಜಕೀಯ ಹುನ್ನಾರಗಳ ಬಗ್ಗೆ ವಿವರಣೆ ನೀಡಿದರು.
ಈ ದೇಶದ ಪ್ರಧಾನಿಯೊಬ್ಬರು ಆರೋಪಿಯ ಜೊತೆ ವೇದಿಕೆ ಹಂಚಿಕೊಂಡಿದ್ದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಿದೆ. ಗಣಿ ಹಗರಣದಲ್ಲಿ ಸಿಲುಕಿಕೊಂಡಿರುವ ಮಾಜಿ ಸಚಿವ ಜನಾರ್ಧನ್ ರೆಡ್ಡಿಗೆ ಜಾಮೀನು ಕೊಡಿಸಲು ಅವರ ಸಹೋದರ ಶಾಸಕ ಸೋಮಶೇಖರ್ ರೆಡ್ಡಿ ನ್ಯಾಯಧೀಶರಿಗೆ 60 ಕೋಟಿ ಲಂಚ ನೀಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಈ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಬಳ್ಳಾರಿಗೆ ಬಂದು ಅಂಥ ವ್ಯಕ್ತಿ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಕಾರ್ಯಕ್ರಮದಲ್ಲಿ ವಿಧಾನಸಭೆ ಮಾಜಿ ಅಧ್ಯಕ್ಷ ಕೃಷ್ಣ, ನಿವೃತ್ತ ಪೆÇಲೀಸ್ ಮಹಾನಿರ್ದೇಶಕ ಶ್ರೀಕುಮಾರ್, ಮಾಜಿ ಸಚಿವ ಬಿ.ಕೆ.ಚಂದ್ರಶೇಖರ್, ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು, ಮಾಜಿ ನ್ಯಾಯಮೂರ್ತಿ ಸಂತೋಷ್ ಹೆಗಡೆ, ಸಾಮಾಜಿಕ ಹೋರಾಟಗಾರರಾದ ಜಯಶ್ರೀ ಹಾಗೂ ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ರವಿಕೃಷ್ಣ ರೆಡ್ಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.