ನವದೆಹಲಿ: ಭಾರತ ಹಾಗೂ ಅಮೆರಿಕ ನಡುವಿನ 2 + 2 ಮೊದಲ ಮಾತುಕತೆಯಲ್ಲಿ, ಭಾರತೀಯ ಸೇನೆಗೆ ರಕ್ಷಣಾ ತಂತ್ರಜ್ಞಾನ ಒದಗಿಸುವ ಮಹತ್ವದ ಒಪ್ಪಂದಕ್ಕೆ ಅಮೆರಿಕ ಸಹಿ ಹಾಕಿದೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ, ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಹಾಗೂ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನೊಳಗೊಂಡ 2 + 2 ಮಾತುಕತೆಯಲ್ಲಿ ಗಡಿ ಭೋಯತ್ಪಾದನೆ, ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ ಮತ್ತು ಎಚ್ 1ಬಿ ವೀಸಾ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಗಿದೆ.
ಪಾಕಿಸ್ಥಾನ ತನ್ನ ನೆಲದಿಂದ ಕಾರ್ಯಾಚರಿಸುತ್ತಿರುವ ಹಕ್ಕಾನಿ, ತಾಲಿಬಾನ್, ಲಷ್ಕರ್, ಜೈಶ್ ಎ ಮೊಹಮ್ಮದ್ ಸೇರಿದಂತೆ ಇನ್ನೂ ಅನೇಕ ಉಗ್ರ ಸಂಘಟನೆಗಳ ವಿರುದ್ಧ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ಭಾರತ ಮತ್ತು ಅಮೆರಿಕ ಪಾಕ್ ಹೊಸ ಸರಕಾರವನ್ನು ಆಗ್ರಹಿಸಿವೆ.
2008ರ ಮುಂಬಯಿ ದಾಳಿಯ 10ನೇ ವರ್ಷಾಚರಣೆಗೆ ಮುನ್ನ ನಡೆದಿರುವ ಈ 2 + 2 ಸಂವಾದದಲ್ಲಿ ಭಾರತ ಮತ್ತು ಅಮೆರಿಕ ಜತೆಗೂಡಿ ಮುಂಬಯಿ ದಾಳಿ (2008), ಪಠಾಣಕೋಟ್ ದಾಳಿ (2016), ಉರಿ ದಾಳಿ (2016) ಮತ್ತು ಇತರ ಗಡಿಯಾಚೆಗಿನ ಭಯೋತ್ಪಾದಕ ದಾಳಿಗಳನ್ನು ಎಸಗಿದ ಉಗ್ರರ ವಿರುದ್ಧ ತ್ವರಿತ ಕಾನೂನು ಕ್ರಮಕೈಗೊಂಡು ಶಿಕ್ಷಿಸುವಂತೆ ಪಾಕಿಸ್ಥಾನದ ಹೊಸ ಸರಕಾರವನ್ನು ಒತ್ತಾಯಿಸಿದವು.
ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸುಷ್ಮಾ ಸ್ವರಾಜ್ ಅವರು, 2 + 2 ಮಾತುಕತೆ ತೃಪ್ತಿ ತಂದಿದೆ. ನಮ್ಮ ಮಾತುಕತೆ ಮತ್ತು ನಿರ್ಧಾರಗಳು ಎರಡೂ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ ಎಂದರು.
ಪ್ರಧಾನಿ ನರೇಂದ್ರ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಫ್ ಅವರು ಉಭಯ ದೇಶಗಳ ಬಾಂಧವ್ಯಕ್ಕೆ ನಿರ್ದಿಷ್ಟತೆಯನ್ನು ನೀಡಿದ್ದಾರೆ. ಎರಡೂ ದೇಶಗಳ ನಡುವಿನ ಬಾಂಧವ್ಯ ನಿರ್ದಿಷ್ಟ ವಿಭಾಗಗಳಲ್ಲಿ ಮುಂಚೆಗಿಂತಲೂ ಉತ್ತಮವಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಮೈಕ್ ಪಾಂಪಿಯೊ, ಭಾರತ – ಅಮೆರಿಕ ನಡುವಿನ ತಂತ್ರಜ್ಞಾನ ಪೂರೈಕೆ ಭದ್ರತಾ ಒಪ್ಪಂದ ಒಂದು ಮೈಲಿಗಲ್ಲು ಎಂದರು. ಎರಡೂ ದೇಶಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಯುವ ಕಾರಣದಿಂದಾಗಿ ಒಂದಾಗಿವೆ ತಿಳಿಸಿದರು.