ಹಾಸನ : ತೀವ್ರ ಮಳೆಯಿಂದ ಅಲ್ಲಲ್ಲಿ ಗುಡ್ಡ ಕುಸಿತದ ಪರಿಣಾಮ ಕಳೆದ ಕೆಲವು ದಿನಗಳಿಂದ ಸ್ಥಗಿತವಾಗಿದ್ದ ಶಿರಾಡಿಘಾಟ್ ರಸ್ತೆ ಇದೀಗ ಲಘು ಮೋಟಾರ್ ವಾಹನಗಳ ಸಂಚಾರಕ್ಕೆ ಮುಕ್ತಗೊಂಡಿದೆ. ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಆದರೆ ಭಾರಿ ವಾಹನಗಳಿಗೆ ವಿಧಿಸಲಾಗಿರುವ ನಿರ್ಭಂಧ ಮುಂದುವರೆದಿದ್ದು, ಕಾರ್ಯಪಾಲಕ ಇಂಜಿನಿಯರ್ ರಾಷ್ಟ್ರೀಯ ಹೆದ್ದಾರಿ ವಿಭಾಗ ಮಂಗಳೂರು ಇವರ ಪ್ರಸ್ತಾವನೆ ಅನ್ವಯ ಶಿರಾಟಿ ಘಾಟ್‍ರಸ್ತೆ ಮಾರ್ಗ ದುರಸ್ಥಿ ಕಾರ್ಯ ಸಮರೋಪಧಿಯಲ್ಲಿ ಸಾಗಿದೆ. ಗುಡ್ಡ ಕುಸಿತ, ಭೂಕುಸಿತದಿಂದ ಶೇಖರಣೆಯಾಗಿದ್ದ ಮಣ್ಣು ತೆರವುಗೊಳಿಸಿದೆ. ಕೊಡಗು ಜಿಲ್ಲೆಯ ಸಂಪಾಜೆ ರಸ್ತೆ ಬಂದ್ ಆಗಿರುವುದರಿಂದ ಬೆಂಗಳೂರು ಮಂಗಳೂರು ನಡುವಿನ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿವ ದೃಷ್ಠಿಯಿಂದ ಸೆ. 3 ರಿಂದ ಲಘು ಮೋಟಾರ್ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬಹುದಾಗಿದೆ ಎಂದು ತಿಳಿಸಲಾಗಿದೆ ಅದರಂತೆ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ-75(48) ರ ಬೆಂಗಳೂರು-ಮಂಗಳೂರು ರಸ್ತೆಯ ಹಾಸನ ಜಿಲ್ಲಾ ವ್ಯಾಪ್ತಿಯ ಕಿ.ಮೀ.237.00 ರಿಂದ ಕಿ.ಮೀ.256.70 ರವರೆಗಿನ ಶಿರಾಡಿಘಾಟ್ ರಸ್ತೆಯಲ್ಲಿ ಸೆ. 5 ರ ಮಧ್ಯಾಹ್ನದಿಂದ ದ್ವಿಚಕ್ರ ವಾಹನಗಳು, ಕಾರು ಹಾಗೂ ಟೆಂಪೋ ಟ್ರಾವಲರ್ ವಾಹನಗಳಿಗೆ ಮಾತ್ರ ಸಂಚಾರಕ್ಕಾಗಿ ಮುಕ್ತಗೊಳಿಸಿದೆ ಹಾಗೂ ಉಳಿದ ಮಾದರಿಯ ವಾಹನಗಳ ಸಂಚಾರವನ್ನು ಮುಂದಿನ ಆದೇಶದವರೆಗೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ರೋಹಿಣಿ ಸಿಂಧೂರಿ ಆದೇಶಿಸಿದ್ದಾರೆ.
ಕಾರ್ಯಪಾಲಕ ಇಂಜಿನಿಯರ್‍ರವರ ವರದಿ ಮತ್ತು ಶಿಪಾರಸಿನ ಅನ್ವಯ ಕರ್ನಾಟಕ ಮೋಟಾರ್ ವಾಹನಗಳ ನಿಯಮ 1989 ರ ನಿಯಮ 221ಎ(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿರುವ ಮುಜರಾಬಾದ್ ಕೋಟೆ(ಆನೆಮಹಲ್) ಬಳಿ ಇರುವ ಸರಪಳಿ 227.740 ರಿಂದ 228.300 ಮತ್ತು ದೊಡ್ಡತಪ್ಪಲೆ ಗ್ರಾಮದ ಸರಪಳಿ 232.690 ರಿಂದ 233.190 ವರೆಗಿನ ರಸ್ತೆಯನ್ನು ಏಖಮುಖ ಸಂಚಾರವನ್ನಾಗಿ ಪರಿವರ್ತಿಸಿ ಜಿಲ್ಲಾಧೀಕಾರಿಯವರು ಆದೇಶ ಹೊರಡಿಸಿದ್ದಾರೆ.
ಈ ಆದೇಶದ ಅನ್ವಯ ಸದರಿ ರಸ್ತೆಯಲ್ಲಿ ಸಂಚಾರ ನಿಯಂತ್ರಣ ಸಿಬ್ಬಂದಿಗಳನ್ನು ನೇಮಕಗೊಳಿಸಲು ಪೊಲೀಸ್ ಅಧೀಕ್ಷಕರು, ಹಾಸನ ಜಿಲ್ಲೆ, ಹಾಸನ ರವರಿಗೆ ನಿರ್ದೆಶಿಸಿದೆ ಹಾಗೂ ಈ ಬಗ್ಗೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಮತ್ತು ಹೆದ್ದಾರಿ ಆಡಳಿತ ರಾಷ್ಟ್ರೀಯ ಹೆದ್ದಾರಿ ವಿಭಾಗ, ಮಂಗಳೂರು ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ, ಸಕಲೇಶಪುರ ರವರು ವಾಹನಗಳ ಸಂಚಾರಕ್ಕಾಗಿ ಅವಶ್ಯವಿರುವ ಸೂಚನಾಫಲಕ ಅಳವಡಿಸಲು ತಿಳಿಸಿದೆ ಹಾಗೂ ಸಾರ್ವಜನಿಕರ ಮಾಹಿತಿಗಾಗಿ ವ್ಯಾಪಕ ಪ್ರಚಾರಕ್ಕೆ ಕ್ರಮಕೈಗೊಳ್ಳಲು ತಿಳಿಸಿದೆ. ಕಾರ್ಯಪಾಲಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ವಿಭಾಗ, ಮಂಗಳೂರು ಮತ್ತು ಯೋಜನಾ ನಿರ್ದೇಶಕರು, ಪಿ.ಐ.ಯು, ಹಾಸನ ರವರನ್ನು ರಸ್ತೆ ಸಂಚಾರದ ತಾಂತ್ರಿಕ ವ್ಯವಸ್ಥೆಗೆ ಇವರುಗಳನ್ನು ಜವಾಬ್ದಾರಿಯುತರನ್ನಾಗಿಸಿ ಆದೇಶಿಸಿದ್ದಾರೆ.
Shiradi Ghat,opened,for light vehicles