ಬೆಂಗಳೂರು,ಸೆ.6- ಇಂದಿನ ವಿದ್ಯಾರ್ಥಿಗಳೇ ಮುಂದಿನ ಉತ್ತಮ ಪ್ರಜೆಗಳು. ದೇಶ ಬಲಿಷ್ಠವಾಗಬೇಕಾದರೆ ವಿದ್ಯಾರ್ಥಿಗಳು ಬಲಿಷ್ಠರಾಗಬೇಕು ಎಂದು ಬೆಂಗಳೂರು ವಿಶ್ವ ವಿದ್ಯಾಲಯದ ಗ್ರಾಮೀಣ ಅಭಿವೃದ್ಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಮೂರ್ತಿ ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ಗ್ರಾಮೀಣ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ನಡೆದ ಶಿಕ್ಷಣ ದಿನಾಚರಣೆಯಲ್ಲಿ ಮಾತನಾಡಿದ ಅವರು. ಗ್ರಾಮೀಣ ಭಾಗದಲ್ಲಿ ಇಂದು ಶಿಕ್ಷಣ ಕುಂಠಿತಗೊಳ್ಳುತ್ತಿದೆ. ಸರಕಾರ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಿದ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದರು.
ಗ್ರಾಮ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎನ್ನುವ ಮಾತನ್ನು ಮಹಾತ್ಮ ಗಾಂಧೀಜಿ ಹೇಳಿದ್ದಾರೆ. ಅವರ ಪ್ರಕಾರ ನಾವೆಲ್ಲರು ಮೊದಲು ಗ್ರಾಮೀಣ ಅಭಿವೃದ್ಧಿಗೊಳಿಸಲು ಮುಂದಾಗೋಣ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಶಿಕ್ಷಣ ತಜ್ಞ, ತತ್ವಜ್ಞಾನಿ, ಶ್ರೇಷ್ಠ ರಾಜಕಾರಣಿಯಾಗಿ ಡಾ: ಸರ್ವಪಲ್ಲಿ ರಾಧಾಕೃಷ್ಣರ್ ಆದರ್ಶ ಬದುಕು ಇಂದಿನ ಶಿಕ್ಷಕ ವರ್ಗಕ್ಕೆ ಅನುಕರಣೀಯ ಎಂದರು.
ಇಂದು ಉನ್ನತ ಶಿಕ್ಷಣವನ್ನು ಪಡೆದ ಯುವಕರು ನಿರುದ್ಯೋಗಿಗಳಾಗು ತ್ತಿರುವುದು ಬೇಸರದ ಸಂಗತಿ ಮಕ್ಕಳಿಗೆ ಸರ್ಟಿಫಿಕೆಟ್ ಶಿಕ್ಷಣ ನೀಡುವುದನ್ನು ನಿಲ್ಲಿಸಿ, ಅವರಲ್ಲಿನ ಪ್ರತಿಭೆ, ಕೌಶಲ್ಯವನ್ನು ವೃದ್ಧಿಸುವ ಶಿಕ್ಷಣವನ್ನು ನೀಡಬೇಕಾಗಿದೆ. ಮಕ್ಕಳಲ್ಲಿ ಸ್ವಾಭಿಮಾನ ಹಾಗೂ ಸ್ವಾವಲಂಬನೆ ಬೆಳೆಸಬೇಕಾಗಿದೆ ಎಂದು ತಿಳಿಸಿದರು.
ಶಿಕ್ಷಕರು ಸರ್ಕಾರದ ಸೌಲಭ್ಯಗಳನ್ನು ಮಕ್ಕಳಿಗೆ ತಲುಪಿಸಬೇಕು ಹಾಗೂ ಸೌಲಭ್ಯಗಳನ್ನು ಮಕ್ಕಳು ಸದುಪಯೋಗಪಡಿಸುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಉಪನ್ಯಾಸಕರಾದ ಅಂದಾನಿ, ಸುಶೀಲಮ್ಮ, ಡಾ.ದೇವನಂದ, ಶ್ರೀನಿವಾಸ್, ವಿದ್ಯಾರ್ಥಿಗಳಾದ ರಮೇಶ್, ಪ್ರದೀಪ್, ಅಶೋಕ, ಸಿಂಧು, ಮಂಜುಳ, ಗಂಗಾ, ರಾಚಪ್ಪ, ನರಸಿಂಹ, ರಮೇಶ್, ಮಂಜು, ಸುಮ ಮತ್ತಿತರರಿದ್ದರು.